ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ ಪ್ರಕರಣ: ಮುಜುಗರ ತಪ್ಪಿಸಲು ಸಂತ್ರಸ್ತೆ ದಿಢೀರ್‌ ಸ್ಥಳಾಂತರ!

ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ
Published 14 ಜನವರಿ 2024, 21:23 IST
Last Updated 14 ಜನವರಿ 2024, 21:23 IST
ಅಕ್ಷರ ಗಾತ್ರ

ಹಾವೇರಿ: ನಗರದ ಸ್ವಧಾರಾ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆರೈಕೆ ಮತ್ತು ಚಿಕಿತ್ಸೆಗಾಗಿ ಆಶ್ರಯ ಪಡೆದಿದ್ದ ಸಾಮೂಹಿಕ ಅತ್ಯಾಚಾರದ ಪ್ರಕರಣದ ಸಂತ್ರಸ್ತೆಯನ್ನು ಶಿರಸಿ ತಾಲ್ಲೂಕಿನ ಅವಳ ಸ್ವಗ್ರಾಮಕ್ಕೆ ಭಾನುವಾರ ಬೆಳಗಿನ ಜಾವ ಪೊಲೀಸ್‌ ವಾಹನದಲ್ಲಿ ದಿಢೀರ್‌ ಸ್ಥಳಾಂತರ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

‘ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ನಿಯೋಗ ಭಾನುವಾರ ಸಂತ್ರಸ್ತೆಯನ್ನು ಭೇಟಿ ಮಾಡಬೇಕಿತ್ತು. ನಮ್ಮ ಭೇಟಿಗೆ ಹೆದರಿದ ಸರ್ಕಾರ, ಪೊಲೀಸರ ಮೇಲೆ ಒತ್ತಡ ಹೇರಿ, ‘ಲೀಗಲ್‌ ಕಿಡ್ಯಾಪ್‌’ ಮಾಡಿದ್ದಾರೆ’ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಆರೋಪಿಸಿದ್ದಾರೆ.

ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಆಯೋಜಿಸಿರುವ ‘ಸಿದ್ಧರಾಮೇಶ್ವರ ಜಯಂತಿ’ ಕಾರ್ಯಕ್ರಮದಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿರುವುದರಿಂದ, ಈ ಸಂದರ್ಭದಲ್ಲಿ ಪಕ್ಷಕ್ಕೆ ಯಾವುದೇ ಮುಜುಗರ ಆಗದಂತೆ ನೋಡಿಕೊಳ್ಳಲು ಸಂತ್ರಸ್ತೆಯನ್ನು ಏಕಾಏಕಿ ಸ್ಥಳಾಂತರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಾಸಕರ ವಿರುದ್ಧ ದೂರು ದಾಖಲಿಸಿ:

‘ಬ್ಯಾಡಗಿ ಶಾಸಕ ಮತ್ತು ಕಾಂಗ್ರೆಸ್‌ ಮುಖಂಡರೊಬ್ಬರು ಶನಿವಾರ ರಾತ್ರಿ 11ಕ್ಕೆ ಅನುಮತಿಯಿಲ್ಲದೆ ಸ್ವಧಾರಾ ಕೇಂದ್ರದ ಬಳಿ ಹೋಗಿ, ಮಹಿಳಾ ಕಾನ್‌ಸ್ಟೆಬಲ್‌ ಇಲ್ಲದೆ ಸಂತ್ರಸ್ತೆಯನ್ನು ಭೇಟಿ ಮಾಡಿ, ಪರಿಹಾರ ನೀಡಿದ್ದಾರೆ. ರಾತ್ರಿ ವೇಳೆ ಹೋಗುವ ಅವಶ್ಯಕತೆ ಏನಿತ್ತು? ಶಾಸಕರ ವಿರುದ್ಧ ಅತಿಕ್ರಮಣ ಪ್ರವೇಶ ಎಂದು ಅಧಿಕಾರಿಗಳು ದೂರು ದಾಖಲಿಸಬೇಕು’ ಎಂದು ಮಂಜುಳಾ ಒತ್ತಾಯಿಸಿದರು.

ಹಾನಗಲ್‌ ತಾಲ್ಲೂಕಿನ ಘಟನಾ ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ಮುಗಿದ ನಂತರ ಸಂತ್ರಸ್ತೆಯನ್ನು ಶುಕ್ರವಾರ ರಾತ್ರಿ ನಗರದ ಸ್ವಧಾರಾ ಕೇಂದ್ರಕ್ಕೆ ಪೊಲೀಸರು ಬಿಟ್ಟು ಹೋಗಿದ್ದರು. ಆರೋಪಿಗಳ ಹಲ್ಲೆ ಮತ್ತು ಅತ್ಯಾಚಾರ ಕೃತ್ಯದಿಂದ ಗಾಯಗೊಂಡು ಜರ್ಜರಿತರಾಗಿದ್ದ ಸಂತ್ರಸ್ತೆಗೆ ಭಾನುವಾರದಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಿತ್ತು.

ಹೆಪ್ಪುಗಟ್ಟಿದ್ದ ರಕ್ತ:

‘ಆರೋಪಿಗಳು ಸಂತ್ರಸ್ತೆಗೆ ಚೆನ್ನಾಗಿ ಥಳಿಸಿರುವ ಕಾರಣ ಆಕೆಯ ಬೆನ್ನಿನ ಕೆಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ಗಂಟುಗಳಾಗಿ ಕುಳಿತುಕೊಳ್ಳಲು ಕಷ್ಟಪಡುತ್ತಿದ್ದಳು. ತೊಡೆಯ ಭಾಗ ಹಸಿರು ನೆಟ್ಟಿತ್ತು. ತಲೆಯ ಭಾಗದಲ್ಲಿ ತುಂಬಾ ನೋವಿದ್ದ ಕಾರಣ ತಲೆ ಬಾಚಿಕೊಳ್ಳಲು ಮತ್ತು ಸ್ನಾನ ಮಾಡಲು ಆಗುತ್ತಿಲ್ಲ ಎಂದು ಸಂತ್ರಸ್ತೆ ನೋವು ತೋಡಿಕೊಂಡಿದ್ದಳು. ಈ ಕಾರಣ ಭಾನುವಾರ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಲ್ಲಿ ಚಿಕಿತ್ಸೆ ಮತ್ತು ಕೌನ್ಸೆಲಿಂಗ್‌ ಕೊಡಿಸಲು ತಯಾರಿ ನಡೆಸಿದ್ದೆವು. ಅಷ್ಟರಲ್ಲಿ ಆಕೆಯನ್ನು ಪೊಲೀಸರು ತನಿಖೆಗೆ ಕರೆದೊಯ್ಯುತ್ತೇವೆ ಎಂದು ಬೆಳಗಿನ ಜಾವ ಆಕೆಯ ಊರಿಗೆ ಬಿಟ್ಟು ಬಂದಿದ್ದಾರೆ’ ಎಂದು ಸ್ವಧಾರಾ ಸಿಬ್ಬಂದಿ ಮಾಹಿತಿ ನೀಡಿದರು. 

-

ಹಾನಗಲ್ ಪೊಲೀಸರು ಸ್ಥಳ ಪರಿಶೀಲನೆ ಎಂದು ಹೇಳಿ ಮಹಿಳಾ ಕೇಂದ್ರದಿಂದ ಕರೆತಂದು ನೇರವಾಗಿ ಮನೆಗೆ ಬಿಟ್ಟು ಹೋಗಿದ್ದಾರೆ. ಮನೆ ಬಳಿ ಪೊಲೀಸರನ್ನು ನಿಯೋಜಿಸಿಲ್ಲ. ನನಗೆ ಜೀವಭಯವಿದೆ
– ಸಂತ್ರಸ್ತೆ
ಸ್ಥಳ ಮಹಜರು ಆಕೆಯ ಹೇಳಿಕೆ ಸೇರಿದಂತೆ ತನಿಖೆಯ ಪ್ರಕ್ರಿಯೆ ಮುಗಿದಿರುವ ಕಾರಣ ಸಂತ್ರಸ್ತೆಯನ್ನು ಶಿರಸಿ ತಾಲ್ಲೂಕಿನ ಆಕೆಯ ಸ್ವಗ್ರಾಮಕ್ಕೆ ಬಿಟ್ಟು ಬರಲಾಗಿದೆ =
– ಅಂಶುಕುಮಾರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾವೇರಿ
ಹಾನಗಲ್‌ನಲ್ಲಿ ನಡೆದಿರುವುದು ಸಂಘಟನಾತ್ಮಕ ಅಪರಾಧ. ಮೈತುಂಬ ಗಾಯ ಬೊಬ್ಬೆ ಇರುವ ಸಂತ್ರಸ್ತೆಯನ್ನು ಸಾಂತ್ವನ ಕೇಂದ್ರದಲ್ಲಿ ಇರಲು ಬಿಟ್ಟಿಲ್ಲ. 376–ಡಿ ಸೆಕ್ಷನ್‌ ಹಾಕಿದ ಮೇಲೆ ಎಸ್‌ಐಟಿ ಏಕೆ ರಚನೆಯಾಗಿಲ್ಲ
– ಮಾಳವಿಕಾ ಅವಿನಾಶ್‌ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ
ಸಂತ್ರಸ್ತೆಯನ್ನೂ ಕೂಡಲೇ ಊರಿನಿಂದ ಸಾಂತ್ವನ ಕೇಂದ್ರಕ್ಕೆ ವಾಪಸ್‌ ಕರೆತರಬೇಕು. ಆಕೆಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಮತ್ತು ಭದ್ರತೆ ನೀಡಬೇಕು’ ಎಂದು ಎಸ್ಪಿ ಅವರಿಗೆ ಸೂಚಿಸಿದ್ದೇನೆ
– ಅಬ್ದುಲ್‌ ಅಜೀಂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ಪ್ರಕರಣಕ್ಕೆ ಸಂಬಂಧಪಡದವರ ಬಂಧನ: ಆರೋಪ

ಹಾನಗಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇದುವರೆಗೆ 5 ಆರೋಪಿಗಳನ್ನು ಬಂಧಿಸಿದಂತಾಗಿದೆ. ಅಕ್ಕಿಆಲೂರಿನ ಇಮ್ರಾನ್‌ ಬಶೀರ್‌ ಅಹಮದ್‌ ಜೇಕಿನಕಟ್ಟಿ (23) ಹಾಗೂ ರೇಹಾನ್‌ ಮಹ್ಮದ್‌ ಹುಸೇನ್ ವಾಲೀಕಾರ ಅಕ್ಕಿಆಲೂರ (19) ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದ್ದಾರೆ.  ‘ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಬಂಧಿಸಿರುವ ಆರು ಮಂದಿಯಲ್ಲಿ ಇಬ್ಬರು ಈ ಪ್ರಕರಣದಲ್ಲಿ ಭಾಗಿಯಾಗದವರು. ನನಗೆ ಆ ಇಬ್ಬರ ಭಾವಚಿತ್ರ ತೋರಿಸಿದ್ದು ಆ ಇಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರಲ್ಲ’ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. 

ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗಲಿ: ಅಬ್ದುಲ್‌ ಅಜೀಂ

‘ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಎಸ್ಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌.ಐ.ಟಿ) ರಚಿಸಿ ಆಮೂಲಾಗ್ರವಾಗಿ ತನಿಖೆ ನಡೆಸಬೇಕು. ವರ್ಷದೊಳಗೆ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಆಗುವಂತೆ ನೋಡಿಕೊಳ್ಳಿ ಎಂದು ಎಸ್ಪಿ ಅವರಿಗೆ ಸೂಚಿಸಿದ್ದೇನೆ’ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್‌ ಅಜೀಂ ತಿಳಿಸಿದರು. ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು. ಇದನ್ನು ‘ಘೋರ ಅಪರಾಧ’ ಎಂದು ಪರಿಗಣಿಸಬೇಕು ಎಂದು ಗೃಹಸಚಿವರಿಗೆ ಪತ್ರ ಬರೆಯುತ್ತೇನೆ. ಹಾನಗಲ್‌ ಪ್ರಕರಣದ ಆರೋಪಿಗಳು ಅಕಸ್ಮಾತ್‌ ಜಾಮೀನಿನ ಮೇಲೆ ಬಿಡುಗಡೆಯಾದರೆ ಅವರ ಮೇಲೆ ಗೂಂಡಾ ಕಾಯ್ದೆ ಹಾಕಬೇಕು ಮತ್ತು ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಇಂಥ ಹೀನ ಕೃತ್ಯ ಎಸಗದಂತೆ ಭಯ ಹುಟ್ಟಿಸುವ ರೀತಿಯಲ್ಲಿ ಶಿಕ್ಷೆ ಜಾರಿಯಾಗಬೇಕು ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT