ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೌಲಭ್ಯ: ಪ್ರಚಾರ ಅಗತ್ಯ - ಜಿಲ್ಲಾಧಿಕಾರಿ ರಘುನಂದನ ಮೂರ್ತಿ

ಜಿಲ್ಲಾ ಪ್ರಾಣಿ ದಯಾಸಂಘ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಭೆ: ಜಿಲ್ಲಾಧಿಕಾರಿ
Last Updated 3 ಫೆಬ್ರುವರಿ 2023, 14:23 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ ಹಾಗೂ ಕೋಳಿ ಸಾಕಾಣಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಿಗೆ ವಿವಿಧ ಯೋಜನೆಯಡಿ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಕ್ರಿಯಶೀಲರಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯೋಜನೆಗಳ ಕುರಿತಂತೆ ಮಾಹಿತಿ ನೀಡಲು ವ್ಯಾಪಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ಹೈನುಗಾರಿಕೆ, ಕೃಷಿ ಪೂರಕ ಚಟುವಟಿಕೆಯಾಗಿ ಕುರಿ-ಮೇಕೆ, ಕೋಳಿ ಸಾಕಾಣಿಕೆ ಚಟುವಟಿಕೆಗೆ ರೈತಾಪಿ ವರ್ಗದವರಿಗೆ ಪ್ರೋತ್ಸಾಹ ಮತ್ತು ನೆರವು ಒದಗಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಲೀಡ್‌ ಬ್ಯಾಂಕ್, ಹಾವೇರಿ ಹಾಲು ಒಕ್ಕೂಟ, ಕೆ.ಸಿ.ಪಿ.ಎಫ್ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಮನ್ವಯದೊಂದಿಗೆ ಕ್ರಿಯಾಶೀಲರಾಗಿ ಕೆಲಸಮಾಡಿ ಎಂದರು.

ಸರ್ಕಾರಿ ಗೋಶಾಲೆಗೆ ದಾಖಲಿಸಿ:

ಅಕ್ರಮವಾಗಿ ಜಾನುವಾರು ಸಾಗಾಣಿಕೆ ತಡೆಗಟ್ಟಿ ರಕ್ಷಣೆ ಮಾಡಿದ ಜಾನುವಾರುಗಳನ್ನು ಸರ್ಕಾರಿ ಗೋಶಾಲೆಗೆ ದಾಖಲಿಸಿ ರಕ್ಷಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೂರು ಗೋಶಾಲೆ ಮಂಜೂರು: ಜಿಲ್ಲೆಗೆ 2022-23ನೇ ಸಾಲಿನಲ್ಲಿ 3 ಹೆಚ್ಚುವರಿ ಗೋಶಾಲೆಗಳು ಮಂಜೂರಾಗಿರುವ ಕುರಿತಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ. ಸಂತಿ ಅವರು ಸಭೆಗೆ ಮಾಹಿತಿ ನೀಡಿದರು.

ಸವಣೂರು ತಾಲ್ಲೂಕಿನ ಕೆಳಲಕೊಂಡ, ರಾಣೆಬೆನ್ನೂರು ತಾಲ್ಲೂಕಿನ ಕುದ್ರಿಹಾಳ ಹಾಗೂ ಶಿಗ್ಗಾವಿ ತಾಲ್ಲೂಕಿನ ಕುನ್ನೂರಿನಲ್ಲಿ ಮಂಜೂರಾದ ಹೊಸ ಗೋಶಾಲೆ ಆರಂಭಿಸಲು ಸ್ಥಳ ಗುರುತಿಸಲಾಗಿದೆ. ಗುತ್ತಲದಲ್ಲಿ ಒಂದು ಸರ್ಕಾರಿ ಗೋಶಾಲೆ ಸಿದ್ಧವಾಗಿದ್ದು, ಯಾವುದೇ ಜಾನುವಾರುಗಳು ದಾಖಲಾಗಿರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಸಮನ್ವಯ ಸಂಯೋಜಕ ರಾಘವೇಂದ್ರ ಡಿ.ಎಸ್. ಮಾತನಾಡಿ, ಗೋ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರ ನೀಡುವುದಾಗಿ ತಿಳಿಸಿದರು.

ನೇಮಕ: ಗಾಯಗೊಂಡ ಪ್ರಾಣಿಗಳನ್ನು ತಕ್ಷಣ ರಕ್ಷಿಸಲು ಸ್ವಯಂ ಸಹಾಯಕರನ್ನಾಗಿ ಶೀತಲ ಜೈನ್ ಅವರನ್ನು ನೇಮಿಸಲಾಯಿತು. ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮಗಳ ಕುರಿತು ಸಲಹೆ ನೀಡಲು ಜಿ.ಸಿ.ಗಿರಿಯಪ್ಪನವರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಪುಣ್ಯಕೋಟಿಗೆ ₹66 ಲಕ್ಷ ಜಮೆ: ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರಿಂದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ₹66,11,312ಗಳು ಜಮೆಯಾಗಿದೆ. ಪುಣ್ಯಕೋಟಿ ದತ್ತು ಯೋಜನೆಯಡಿ ಜಿಲ್ಲೆಯಲ್ಲಿ ನಾಲ್ಕು ಜಾನುವಾರುಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ದತ್ತು ಪಡೆಯಲಾಗಿದೆ. ದತ್ತು ಪಡೆದ ಎರಡು ಖಾಸಗಿ ಗೋಶಾಲೆಗಳಿಗೆ ₹68 ಸಾವಿರ ಪಾವತಿಸಲಾಗಿದೆ. ಆತ್ಮನಿರ್ಭರ ಯೋಜನೆಯಡಿ ಎರೆಹುಳು ಗೊಬ್ಬರ ಘಟಕಕ್ಕೆ, ಖಾಸಗಿ ಗೋಶಾಲೆಗಳಿಗೆ ಸರ್ಕಾರದಿಂದ ಸಹಾಯಧನ ಮಂಜೂರು ಮಾಡಲಾಗುತ್ತಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಎಸ್.ವಿ. ಸಂತಿ ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT