ಶುಕ್ರವಾರ, ಜನವರಿ 22, 2021
19 °C

ಗ್ರಾಮ ಸ್ವರಾಜ್ಯ ಸಮಾವೇಶ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬಿಜೆಪಿ ವತಿಯಿಂದ ನ.30ರಂದು ಹಿರೇಕೆರೂರ, ಬ್ಯಾಡಗಿ ಹಾಗೂ ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ‘ಗ್ರಾಮ ಸ್ವರಾಜ್ಯ ಸಮಾವೇಶ’ವನ್ನು ಬೆಳಿಗ್ಗೆ 10.30ಕ್ಕೆ ಹಿರೇಕೆರೂರಿನ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ತಿಳಿಸಿದರು. 

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಾವೇರಿ, ಹಾನಗಲ್ ಹಾಗೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ‘ಗ್ರಾಮ ಸ್ವರಾಜ್ಯ ಸಮಾವೇಶ’ವನ್ನು ಅದೇ ದಿನ ಮಧ್ಯಾಹ್ನ 2.30ಕ್ಕೆ ಹಾವೇರಿ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 

ತಂಡಗಳ ರಚನೆ:

ಜಿಲ್ಲೆಯ 209 ಗ್ರಾಮ ಪಂಚಾಯಿತಿಗಳಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದಿಂದ 6 ತಂಡಗಳನ್ನು ರಚಿಸಲಾಗಿದೆ. ನಾಲ್ಕನೇ ತಂಡ ಹಾವೇರಿ ಜಿಲ್ಲೆಯ ಸಮಾವೇಶಗಳಿಗೆ ಬರಲಿದೆ. ಸಚಿವರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ, ಜಗದೀಶ ಶೆಟ್ಟರ್‌, ರಮೇಶ ಜಾರಕಿಹೊಳಿ, ಸಿ.ಸಿ.ಪಾಟೀಲ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದರಾದ ಶಿವಕುಮಾರ ಉದಾಸಿ, ಅನಂತಕುಮಾರ ಹೆಗಡೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು ಎಂಬ ಉದ್ದೇಶದಿಂದ ತಂಡಗಳ ರಚನೆ, ವಾರ್‌ ರೂಮ್‌ ಸ್ಥಾಪನೆ ಹಾಗೂ ಪ್ರತಿ ಬೂತ್‌ನಲ್ಲಿ ಐವರು ಕಾರ್ಯಕರ್ತರನ್ನು ಒಳಗೊಂಡ ‘ಪಂಚರತ್ನ’ ತಂಡ ರಚನೆ ಮಾಡಲಾಗಿದೆ ಎಂದು ಹೇಳಿದರು. 

ಅಭಿವೃದ್ಧಿಯ ಮಂತ್ರ:

ಶಾಸಕ ನೆಹರು ಓಲೇಕಾರ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕೆಲಸಗಳನ್ನು ಆಧರಿಸಿ ಚುನಾವಣೆ ಎದುರಿಸುತ್ತೇವೆ. ನರೇಗಾ ಯೋಜನೆ, ಸ್ವಚ್ಛತಾ ಆಂದೋಲನ, ಮನೆ–ಮನೆಗೆ ಗಂಗೆ ಮುಂತಾದ ಕಾರ್ಯಕ್ರಮಗಳು ಗ್ರಾಮೀಣ ಜನರ ಮೆಚ್ಚುಗೆಗೆ ಪಾತ್ರವಾಗಿವೆ. ರಸ್ತೆ ಕಾಮಗಾರಿ, ಕಸ ವಿಲೇವಾರಿಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. 

ಕಾಂಗ್ರೆಸ್‌ ಮುಕ್ತ: ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಸಂದೀಪ್‌ ಮಾತನಾಡಿ, ‘ಅಭಿವೃದ್ಧಿ ಚಿಂತನೆಯಿಂದ ಪ್ರತಿ ಚುನಾವಣೆಯಲ್ಲೂ ಗೆಲುವು ಸಾಧಿಸುತ್ತಿದ್ದೇವೆ. ಗ್ರಾಮ ಪಂಚಾಯಿತಿ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ. ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರ ಆಶಯದಂತೆ, ಗ್ರಾ.ಪಂ. ಮಟ್ಟದಲ್ಲೂ ‘ಕಾಂಗ್ರೆಸ್‌ ಮುಕ್ತ’ ಮಾಡಲು ಪಣ ತೊಡಿ ಎಂದು ಹೇಳಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ಜಿಲ್ಲಾ ವಕ್ತಾರ ಪ್ರಭು ಹಿಟ್ನಳ್ಳಿ, ಜಿಲ್ಲಾ ಮಾಧ್ಯಮ ಪ್ರಮುಖ ಕಿರಣ ಕೋಣನವರ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.