ಶನಿವಾರ, ಜೂನ್ 25, 2022
25 °C
ಹಾಳಾದ ಜಿಮ್‌ ಉಪಕರಣಗಳು, ಕೋಟ್ಯಂತರ ಮೌಲ್ಯದ ಆಸ್ತಿ ನಿರ್ವಹಣೆಗೆ ಒಬ್ಬನೇ ಕಾವಲುಗಾರ

ಹಾನಗಲ್‌ ಕ್ರೀಡಾಂಗಣ; ಪಾಳುಬಿದ್ದ ಈಜುಕೊಳ

ಮಾರುತಿ ಪೇಟಕರ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ರಾಷ್ಟ್ರೀಯ ಹಬ್ಬಗಳು ಮತ್ತು ರಾಜಕೀಯ ಸಮಾವೇಶಗಳಿಗೆ ಬಳಕೆಯಾಗುತ್ತಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ಚಟುವಟಿಕೆಗಳು ಸ್ತಬ್ಧವಾಗುತ್ತಿವೆ. ಅಧ್ವಾನ ಸ್ಥಿತಿಯಲ್ಲಿರುವ ಕ್ರೀಡಾಂಗಣವು ಕಾಯಕಲ್ಪದ ನಿರೀಕ್ಷೆಯಲ್ಲಿದೆ. 

ಮುಖ್ಯದ್ವಾರದ ಗೇಟ್ ಸುಸ್ಥಿತಿಯಲ್ಲಿದೆ. ಆದರೆ, ಇನ್ನೊಂದು ಬದಿಯ ಗೇಟ್ ಈಚೆಗೆ ನಡೆದ ಹಾನಗಲ್‌ ವಿಧಾನಸಭಾ ಉಪ ಚುನಾವಣೆಯ ರಾಜಕೀಯ ಪಕ್ಷಗಳ ಸಮಾವೇಶದ ಗದ್ದಲದಲ್ಲಿ ಕಿತ್ತು ಹೋಗಿದೆ. ಮೈದಾನದ ಸುತ್ತ ವಿದ್ಯುತ್ ದೀಪದ ಕಂಬಗಳಿದ್ದರೂ ಬೆಳಕು ಮಾತ್ರ ಬೀರುತ್ತಿಲ್ಲ.

ತಾಲ್ಲೂಕು ಕ್ರೀಡಾಂಗಣ 8 ಎಕರೆ 20 ಗುಂಟೆ ಜಾಗ ಹೊಂದಿದೆ. ಕ್ರೀಡಾಂಗಣದಲ್ಲಿ ಅಥ್ಲೆಟಿಕ್‌ ಟ್ರ್ಯಾಕ್‌ ಮತ್ತು ಯಾವುದೇ ಕ್ರೀಡಾ ಅಂಕಣಗಳು ಇರುವುದಿಲ್ಲ. ಕ್ರೀಡಾಂಗಣದ ಸುತ್ತ ಕಾಂಪೌಂಡ್‌ ಮತ್ತು ಪ್ರೇಕ್ಷಕರ ಗ್ಯಾಲರಿ ನಿರ್ಮಿಸಬೇಕು ಎನ್ನುವ ಕ್ರೀಡಾಪಟುಗಳು ಒತ್ತಾಯಿಸುತ್ತಿದ್ದರೂ, ಬೇಡಿಕೆ ಇದುವರೆಗೂ ಈಡೇರಿಲ್ಲ. 

ಜಿಮ್‌ಗೆ ಅನಾರೋಗ್ಯ!

ದೈಹಿಕ ತಾಲೀಮಿನ ಜಿಮ್ ಇಲ್ಲಿತ್ತು. ಸಲಕರಣೆಗಳು ಹಾಳಾದ ಕಾರಣದಿಂದ ಜಿಮ್ ಬಂದ್ ಸ್ಥಿತಿಯಲ್ಲಿದೆ. ಈಗೇನಿದ್ದರೂ, ಕ್ರೀಡಾಂಗಣ ಹಾಳು ಕೊಂಪೆಯಂತೆ ಭಾಸವಾಗುತ್ತದೆ. ಜೂಜಾಟದ ಅಡ್ಡೆಯಾದಂತಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ ಎಂದು ಕ್ರೀಡಾಪಟುಗಳು ಸಮಸ್ಯೆ ತೋಡಿಕೊಂಡರು. 

ಗಬ್ಬು ನಾರುತ್ತಿರುವ ಈಜುಕೊಳ

₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈಜುಕೊಳ ಪಾಳುಬಿದ್ದಿದೆ. ಇಲ್ಲಿರುವ ಎರಡು ಕೊಳಗಳಲ್ಲಿ ನೀರು ಪಾಚಿಗಟ್ಟಿ ಗಬ್ಬು ನಾರುತ್ತಿದೆ. ಈಜುಕೊಳ ಉದ್ಘಾಟನೆ ದಿನದಂದಲೇ ಇಲ್ಲಿನ ನಿವಾಸಿಗಳಿಗೆ ಇದರ ಬಳಕೆಯ ಭಾಗ್ಯ ಸಿಕ್ಕಿಲ್ಲ. ಸುಮಾರು ₹70 ಕೋಟಿ ವೆಚ್ಚದ ಸರ್ಕಾರಿ ಆಸ್ತಿ ನಿರ್ವಹಣೆ ಇಲ್ಲದೆ ಹಾಳಾಗುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಈಜುಕೊಳಕ್ಕೆ ಅಳವಡಿಸಲಾದ ಟೈಲ್ಸ್‌ ಅಲ್ಲಲ್ಲಿ ಕಿತ್ತುಕೊಳ್ಳುತ್ತಿವೆ. ಕಾಂಪೌಂಡ್‌ ಜಂಪ್ ಮಾಡಿ ಈಜುಕೊಳ ಆವರಣ ಪ್ರವೇಶಿಸುವ ಕಿಡಿಗೇಡಿಗಳ ಕೃತ್ಯದಿಂದ ಕಿಟಕಿ ಗಾಜು, ಬಾಗಿಲು ಒಡೆದು ಹೋಗಿವೆ. ಬೇಬಿಕೊಳ ಕೂಡ ತ್ಯಾಜ್ಯದಿಂದ ತುಂಬಿಕೊಂಡಿದ್ದು, ಮಕ್ಕಳ ಬಳಕೆಗೆ ಯೋಗ್ಯವಾಗಿಲ್ಲ.  

ಅನುದಾನ ಬಿಡುಗಡೆ

ದಿ.ಸಿ.ಎಂ. ಉದಾಸಿ ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ಈಜುಕೊಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿದ್ದರು. ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಶಾಸಕರು ಬದಲಾಗಿದ್ದರು. ಶಾಸಕ ಮನೋಹರ ತಹಸೀಲ್ದಾರ್ ಅವಧಿಯಲ್ಲಿ ಈಜುಕೊಳ ಚಾಲನೆ ಪಡೆದಿತ್ತು.

2017ರ ಮೇ ತಿಂಗಳಲ್ಲಿ ಅಂದಿನ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ ಮಧ್ವರಾಜ್ ಈಜುಕೊಳ ಉದ್ಘಾಟಿಸಿದ್ದರು. ಬಳಿಕ ಈಜುಕೊಳ ನಿರ್ವಹಣೆಗಾಗಿ ಖಾಸಗಿ ವ್ಯಕ್ತಿಗೆ ಹಸ್ತಾಂತರಿಸಲಾಗಿತ್ತು. ಆದರೆ ಈಜುಕೊಳ ಬಳಸುವ ಭಾಗ್ಯ ಪಟ್ಟಣದ ಜನರಿಗೆ ಈತನಕ ಲಭ್ಯವಾಗಿಲ್ಲ.

‘ಜಿಲ್ಲಾ ಮಟ್ಟದ ಕ್ರೀಡಾ ತರಬೇತುದಾರರು ವಾರದಲ್ಲಿ ಎರಡು ದಿನಗಳು ಭೇಟಿ ನೀಡಿ ತರಬೇತಿ ನೀಡಬೇಕು. ಇದರಿಂದ ಗ್ರಾಮೀಣ ಪ್ರತಿಭೆಗಳು ಅನಾವರಣಗೊಳ್ಳಲಿವೆ. ಕ್ರೀಡಾಂಗಣ ನಿರ್ವಹಣೆಗೆ ಸ್ಥಳೀಯ ಕ್ರೀಡಾಪಟುವನ್ನು ನೇಮಿಸಬೇಕು’ ಎಂದು ಕುಮಾರೇಶ್ವರ ಕಲಾ–ವಾಣಿಜ್ಯ ಮಹಾವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಬಸವನಗೌಡ ಲಕ್ಷ್ಮೇಶ್ವರ ತಿಳಿಸಿದರು.

***

ಹಾಳಾದ ಚಾವಣಿ ಶೀಟುಗಳು

ಪ್ರೇಕ್ಷಕರ ಗ್ಯಾಲರಿ ಚಾವಣಿ ಶೀಟುಗಳು ಕಿತ್ತುಹೋಗಿ ವರ್ಷಗಳೇ ಗತಿಸಿವೆ. ಪೆವಿಲಿಯನ್‌ನಲ್ಲಿ ಕುಳಿತುಕೊಳ್ಳುವ ಪ್ರೇಕ್ಷಕರ ಮೇಲೆ ಮಳೆ ಬಂದಾಗ ನೀರು ಸೋರುತ್ತದೆ. ಸಭೆ ನಡೆಯುವ ವೇದಿಕೆ ಅಲ್ಲಲ್ಲಿ ಒಡೆದುಕೊಂಡಿದೆ. ಬೆಳಕು ಇಲ್ಲದ ಕಾರಣ ಸಂಜೆಯ ಬಳಿಕ ಇಡೀ ಕ್ರೀಡಾಂಗಣವೇ ಕಗ್ಗತ್ತಲಲ್ಲಿ ಮುಳುಗುತ್ತದೆ. ರಕ್ಷಣೆ ಇಲ್ಲದ ಕಾರಣಕ್ಕಾಗಿ ಇಲ್ಲಿ ಸಂಜೆಯ ಬಳಿಕ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಮದ್ಯದ ತ್ಯಾಜ್ಯ ಎಲ್ಲೆಂದರಲ್ಲಿ ರಾಚುತ್ತದೆ. 

***

 ಹಾನಗಲ್ ಕ್ರೀಡಾಂಗಣ ದುರಸ್ತಿ, ಮತ್ತಿತರ ಮೂಲಸೌಕರ್ಯದ ಕಾರ್ಯಕ್ಕಾಗಿ ಇಲಾಖೆ ಆಯುಕ್ತರಿಗೆ ಅನುದಾನಕ್ಕಾಗಿ ಮನವಿ ಮಾಡಲಾಗಿದೆ
– ಲತಾ ಬಿ.ಎಚ್‌., ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 

**

ಈಜುಕೊಳಗಳು ಪಾಳುಬಿದ್ದಿರುವ ಕಾರಣ ಯುವಕರು ಈಜು ಚಟುವಟಿಕೆಯಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಲಿ
– ಬಸವರಾಜ ಶೀಲವಂತ, ಈಜುಪಟು, ಹಾನಗಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು