ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮಿಶ್ರಬೆಳೆಯಿಂದ ರೈತರ ಮೊಗದಲ್ಲಿ ಕಳೆ

ಮುಂಗಾರು ಹಂಗಾಮಿಗೆ ತಾಂತ್ರಿಕ ವಿಧಾನ ಅನುಸರಿಸಲು ಕೃಷಿ ವಿಜ್ಞಾನಿಗಳ ಮನವಿ
Last Updated 14 ಮೇ 2020, 19:30 IST
ಅಕ್ಷರ ಗಾತ್ರ

ಹಾವೇರಿ: ಒಂದೇ ಬೆಳೆಗೆ ರೈತರು ಜೋತು ಬೀಳದೆ ಅಂತರ ಬೆಳೆ ಹಾಗೂ ಮಿಶ್ರ ಬೆಳೆ ಪದ್ಧತಿ ಅನುಸರಿಸಿದರೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಜತೆಗೆ ಅಧಿಕ ಲಾಭವನ್ನೂ ಪಡೆಯಬಹುದು ಎನ್ನುತ್ತಾರೆ ಕೃಷಿ ವಿಜ್ಙಾನಿಗಳು.

ಮುಂಗಾರು ಮಳೆಯ ಸಿಂಚನಕ್ಕೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. ಕಳೆದ ತಿಂಗಳಿನಿಂದ ಇಲ್ಲಿಯವರೆಗೆ 32 ಮಿ.ಮೀ.ಮಳೆಯಾಗಿದ್ದು, ರೈತರು ಭೂಮಿಯನ್ನು ಉಳುಮೆ ಮಾಡಿ, ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಬೆಳೆಯೊಂದಿಗೆ ಅಂತರ ಬೆಳೆ ಹಾಗೂ ಮಿಶ್ರ ಬೆಳೆ ಪದ್ಧತಿಯನ್ನು ಪಾಲಿಸಿದರೆ, ಹವಾಮಾನ ವೈಪರೀತ್ಯದಿಂದ ಬೆಳೆಗಳ ಮೇಲಾಗುವ ದುಷ್ಪರಿಣಾಮವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೆ ಒಂದು ಬೆಳೆ ಕೈಕೊಟ್ಟರೆ, ಮತ್ತೊಂದು ಬೆಳೆ ಕೈಹಿಡಿಯುತ್ತದೆ ಎಂಬುದು ತಜ್ಞರ ಕಿವಿಮಾತು.

ಹಾವೇರಿ ಜಿಲ್ಲೆಯಲ್ಲಿ ಸತತವಾಗಿ ಏಕಬೆಳೆಯಾಗಿ ಗೋವಿನಜೊಳ ಬೆಳೆಯುತ್ತಿರುವುದರಿಂದ, ಈ ಬೆಳೆ ಹೆಚ್ಚಿನ ಪೋಷಕಾಂಶ ಹೀರಿಕೊಂಡು ಮಣ್ಣಿನಲ್ಲಿ ಕೊರತೆ ಉಂಟು ಮಾಡುತ್ತಿದೆ. ಆದ್ದರಿಂದ ಏಕದಳ ಧಾನ್ಯ ಬೆಳೆಯ ನಂತರ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು (ಶೇಂಗಾ, ಎಳ್ಳು, ಸೂರ್ಯಕಾಂತಿ, ಸೊಯಾಬಿನ್‌) ಬೆಳೆಯುವತ್ತ ರೈತರು ಚಿತ್ತ ಹರಿಸಲಿ ಎಂಬುದು ಅವರ ಮನವಿ.

ಕೃಷಿ ಇಲಾಖೆಯು ಜಿಲ್ಲೆಯಲ್ಲಿ 3.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಚಟುವಟಿಕೆ ನಡೆಸಲು ಉದ್ದೇಶಿಸಿದೆ.2.07 ಲಕ್ಷ ಹೆಕ್ಟೇರ್‌ನಲ್ಲಿಏಕದಳ ಧಾನ್ಯಗಳು, 7,209 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳು, 31,854 ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳು ಹಾಗೂ 85,790 ಹೆಕ್ಟೇರ್‌ನಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಗುರಿ ನಿಗದಿಪಡಿಸಿದೆ.

ಹವಾಮಾನಕ್ಕೆ ತಕ್ಕ ಬೆಳೆ

ದೀರ್ಘಾವಧಿ ಬೆಳೆಗಳ ಜತೆ ಅಂತರ ಬೆಳೆಗಳಾಗಿ (ಅಕ್ಕಡಿ ಬೆಳೆ) ಮೆಕ್ಕೆಜೋಳದ ಜೊತೆಗೆ ತೊಗರಿ, ಹೆಸರು, ಸೊಯಾಬಿನ್‌ ಹಾಗೂ ಹತ್ತಿ ಜತೆ ಮೆಣಸಿನಕಾಯಿ, ಸೊಯಾಬಿನ್‌, ಉಳ್ಳಾಗಡ್ಡಿ ಬೆಳೆಯಬಹುದು. ಕಬ್ಬಿನ ಜತೆಗೆ ತರಕಾರಿ ಬೆಳೆಗಳಾದ ಎಲೆಕೋಸು, ಕ್ಯಾರೆಟ್‌, ಕೊತ್ತಂಬರಿ ಬೆಳೆಯಬಹುದು. ಮಣ್ಣಿನ ಗುಣಧರ್ಮ, ಮಳೆ ಬೀಳುವ ಪ್ರಮಾಣ, ಅವಧಿ ಮತ್ತು ಮಣ್ಣಿನ ತೇವಾಂಶದ ಕ್ಷೀಣತೆಯ ಅವಧಿಗೆ ಅನುಗುಣವಾಗಿ ಬೆಳೆಯಬೇಕು. ನಿಶ್ಚಿತ ಬೆಳೆ ಪದ್ಧತಿಗಳನ್ನು ಅನುಸರಿಸದೇ, ಹವಾಮಾನಕ್ಕೆ ತಕ್ಕಂತೆ ಬೆಳೆ ಮತ್ತು ಹೆಚ್ಚು ಇಳುವರಿ ಕೊಡುವ ತಳಿಗಳನ್ನು ಬೆಳೆಯುವುದು ಅವಶ್ಯ ಎನ್ನುತ್ತಾರೆ ಕೃಷಿ ಹಿರಿಯ ವಿಜ್ಞಾನಿ ಡಾ.ಪಿ.ಅಶೋಕ.

ಭೂಮಿ ಸಿದ್ಧತೆ ಮಾಡಿಕೊಳ್ಳುವಾಗ, ಆಳವಾದ ಉಳುಮೆ ಮಾಡಿದ ನಂತರ ಕುಂಟೆ ಹೊಡೆದು, ನೆಲವನ್ನು ಸಮತಟ್ಟು ಮಾಡಿಕೊಳ್ಳಬೇಕು. ನಂತರ ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಬೇಕು. ಸಮಸ್ಯಾತ್ಮಕ ಕಳೆ ಇದ್ದಲ್ಲಿ ಮರು ಉಳುಮೆ ಮಾಡಿ, ಅವುಗಳನ್ನು ತೆರವುಗೊಳಿಸಿ ಮುಖ್ಯ ಬೆಳೆಯೊಂದಿಗೆ ಅಂತರ ಬೆಳೆಯಾಗಿ ಹೆಸರು, ಉದ್ದು, ಸೊಯಾಬಿನ್‌ ಬೆಳೆಯುವುದು ಸೂಕ್ತ ಎಂಬುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT