ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶ:₹15 ಲಕ್ಷ ವಿಮೆ ಮೊತ್ತ ಬಡ್ಡಿಸಹಿತ ಪಾವತಿಸಿ

Published 9 ನವೆಂಬರ್ 2023, 14:08 IST
Last Updated 9 ನವೆಂಬರ್ 2023, 14:08 IST
ಅಕ್ಷರ ಗಾತ್ರ

ಹಾವೇರಿ: ಅಪಘಾತಕ್ಕೀಡಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪಾಲಿಸಿ ಹಣವನ್ನು ಬಡ್ಡಿ ಸಮೇತ 30 ದಿನದೊಳಗಾಗಿ ಪಾವತಿಸುವಂತೆ ಹುಬ್ಬಳ್ಳಿ ಚೋಳಮಂಡಲಂ ಎಂ.ಎಸ್. ಜನರಲ್ ಇನ್ಸೂರನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಹಾನಗಲ್ ತಾಲ್ಲೂಕು ಹಿರೇಕಾಂಶಿ ಗ್ರಾಮದ ನಿವಾಸಿ ಶಾರದಾ ಧರಣೆಪ್ಪನವರ ಅವರ ಮಗ ರಾಜು ಧರಣೆಪ್ಪನವರ ಖರೀದಿಸಿದ ದ್ವಿಚಕ್ರ ವಾಹನಕ್ಕೆ ಹುಬ್ಬಳ್ಳಿ ಚೋಳಮಂಡಲಮ್ ಎಂ.ಎಸ್. ಜನರಲ್ ಇನ್ಸೂರನ್ಸ್ ಕಂಪನಿಯಲ್ಲಿ ಪಾಲಿಸಿ ಪಡೆದಿದ್ದರು.

2022ರ ಮಾರ್ಚ್‌ 17ರಂದು ರಾಷ್ಟ್ರೀಯ ಹೆದ್ದಾರಿ ಮೇಲೆ ಹಾವೇರಿ ಕಡೆಯಿಂದ ರಾಣೆಬೆನ್ನೂರಿಗೆ ಹೋಗುವಾಗ ಛತ್ರ ಗ್ರಾಮದ ಸಮೀಪ ಅಪಘಾತಕ್ಕೀಡಾಗಿ ರಾಜು ತಲೆಗೆ ತೀವ್ರ ಪೆಟ್ಟಾಗಿತ್ತು. ಇವರಿಗೆ ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು.

ರಾಜು ಅವರ ತಾಯಿ ಶಾರದಾ ಧರಣೆಪ್ಪನವರ ಅವರು ಮಗನ ಮರಣದ ನಂತರ ವಿಮಾ ಪರಿಹಾರ ಪಡೆಯಲು ವಿಮಾ ಕಂಪನಿಗೆ ದಾಖಲೆಗಳನ್ನು ನೀಡಿದರೂ ವಿಮಾ ಪರಿಹಾರ ನೀಡುವುದನ್ನು ಮುಂದೂಡುತ್ತಾ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಹಾಗೂ ಮಹಿಳಾ ಸದಸ್ಯರಾದ ಉಮಾದೇವಿ ಹಿರೇಮಠ ನೇತೃತ್ವದ ತಂಡ, ವಿಮಾ ಪಾಲಿಸಿಯ ಪಿ.ಎ.ಕವರೇಜ್‌ ಮೊತ್ತ ₹15 ಲಕ್ಷವನ್ನು ಶೇ 6ರ ಬಡ್ಡಿ ಸಹಿತ 30 ದಿನದೊಳಗಾಗಿ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರದ ಮೊತ್ತಕ್ಕೆ ವಾರ್ಷಿಕ ಶೇ 9ರಂತೆ ಬಡ್ಡಿ ಸಮೇತ ಪಾವತಿಸಬೇಕು ಎಂದು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT