ಹಾವೇರಿ: ಅಬಕಾರಿ ಉಪ ಆಯುಕ್ತರ ಕಿರುಕುಳ ಖಂಡಿಸಿ ಸನ್ನದ್ದುದಾರರು ಮಂಗಳವಾರ ಜಿಲ್ಲೆಯ ಎಲ್ಲ ಐಎಂಎಲ್ ಮದ್ಯದ ಅಂಗಡಿಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಸನ್ನದ್ದುದಾರರು, ಅಬಕಾರಿ ಉಪಆಯುಕ್ತ ನಾಗಶಯನ ವಿರುದ್ಧ ಧಿಕ್ಕಾರ ಕೂಗಿದರು. ಅವರನ್ನು ಕೆಲಸದಿಂದ ವಜಾ ಗೊಳಿಸಬೇಕು ಇಲ್ಲವೇ ಅಮಾನತು ಮಾಡಬೇಕು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶಿಸ್ತುಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಅಬಕಾರಿ ಉಪ ಆಯುಕ್ತ ನಾಗಶಯನ ಮದ್ಯ ಮಾರಾಟ ಮಾಡುವ ಸನ್ನದ್ದುದಾರರಿಗೆ ವ್ಯಾಪಾರ ನಡೆಸಲು ಕಿರುಕುಳ ಕೊಡುತ್ತಿದ್ದಾರೆ. ಮೇಲಿಂದ ಮೇಲೆ ಸನ್ನದ್ದುದಾರರಿಗೆ ಲಂಚ ಕೇಳುವುದು, ಕಾನೂನಿನ ವಿರುದ್ಧವಾಗಿ ಕಾರ್ಯ ಮಾಡಲು ಒತ್ತಡ ಹಾಕುವುದು ಮಾಡುತ್ತಿದ್ದಾರೆ ಸನ್ನದ್ದುದಾರರು ಆರೋಪಿಸಿದರು.
ಮದ್ಯ ಮಾರಾಟ ಪರವಾನಗಿ ನೀಡುವಾಗಲೇ ಬ್ಲ್ಯೂಪ್ರಿಂಟ್ ನೋಡಿ ಪರವಾನಗಿ ಕೊಟ್ಟಿರುತ್ತಾರೆ. ಆದರೆ, ಉಪ ಆಯುಕ್ತ ದಾಖಲೆಗಳು ಸರಿಯಿಲ್ಲ ಎಂದು ಹೇಳಿ, ಪ್ರಕರಣ ದಾಖಲಿಸಿ ಕಿರುಕುಳ ಕೊಡುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಮದ್ಯ ಪಡೆಯಲು ಒತ್ತಡ ಹಾಕುವುದು ಹಾಗೂ ಅನಗತ್ಯ ದಾಳಿ ಮಾಡುವ ಮೂಲಕ ಸನ್ನದ್ದುದಾರರಿಗೆ ಬೆದರಿಸಿ, ಪರೋಕ್ಷವಾಗಿ ಲಂಚದ ಹಣ ಹೆಚ್ಚಳಕ್ಕೆ ಅವಕಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ರಾಜ್ಯ ಮದ್ಯ ಮಾರಾಟಗಾರರ ಸಂಘದ (ಐಎಂಎಲ್) ಗುರುಸ್ವಾಮಿ ಮೈಸೂರು, ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ, ಎಸ್.ಎಸ್. ಶೀಲವಂತ, ಎಂ. ನಾಗರಾಜ, ಪ್ರಶಾಂತ ಶೆಟ್ಟರ್ ಇನ್ನಿತರ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.