ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 2.23 ಲಕ್ಷ ನಕಲಿ ಕಾರ್ಮಿಕರ ಕಾರ್ಡ್‌ ಪತ್ತೆ!

ಕಾರ್ಮಿಕ ಕಲ್ಯಾಣ ಮಂಡಳಿಯಿಂದ ರದ್ದತಿಗೆ ಕ್ರಮ
Published 24 ಜನವರಿ 2024, 21:09 IST
Last Updated 24 ಜನವರಿ 2024, 21:09 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ಒಟ್ಟು 2.94 ಲಕ್ಷ ಕಾರ್ಮಿಕರ ಕಾರ್ಡ್‌ಗಳಿದ್ದು, ಇದರಲ್ಲಿ ಬರೋಬ್ಬರಿ 2.23 ಲಕ್ಷ ಕಾರ್ಡ್‌ಗಳು ನಕಲಿ ಎಂಬುದು ತನಿಖೆಯಿಂದ ಪತ್ತೆಯಾಗಿದೆ. ಅಂದರೆ ಶೇ 83ರಷ್ಟು ಅನರ್ಹರು ಕಾರ್ಮಿಕರ ಕಾರ್ಡ್‌ನ ಸೌಲಭ್ಯ ಪಡೆಯುತ್ತಿದ್ದರು ಎಂಬುದು ಈಗ ಬಯಲಾಗಿದೆ. 

ಖಾಸಗಿ ಕಂಪನಿ ನೌಕರರು, ವಾಹನ ಚಾಲಕರು, ಟೈಲರ್‌ಗಳು, ಕೃಷಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಹೋಟೆಲ್‌ ಕಾರ್ಮಿಕರು ಸೇರಿ ಸಾವಿರಾರು ಮಂದಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ಪಡೆದಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ನೋಂದಣಿಯಾದವರಲ್ಲಿ 21,493 ಮಂದಿ ತನಿಖೆ ವೇಳೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

ರದ್ದತಿಗೆ ಕ್ರಮ: ರಾಜ್ಯದಲ್ಲಿ ನಕಲಿ ಕಾರ್ಮಿಕರ ಸಂಖ್ಯೆ ಮಿತಿಮೀರಿದ್ದು, ಸರ್ಕಾರಿ ಸೌಲಭ್ಯಗಳು ಅನರ್ಹರ ಪಾಲಾಗುತ್ತಿವೆ ಎಂಬ ದೂರು ಕೇಳಿಬಂದ ಕಾರಣ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯಾಚರಣೆ ನಡೆಸಿದೆ. ನಕಲಿ ಕಾರ್ಮಿಕರ ಕಾರ್ಡ್‌ಗಳನ್ನು ಪತ್ತೆ ಮಾಡಿ, ರದ್ದುಗೊಳಿಸಲು ಮುಂದಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಹಾವೇರಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲಿ ಕಾರ್ಡ್‌ಗಳು ಇರುವುದು ಪತ್ತೆಯಾಗಿದೆ. 

ದಿಢೀರ್‌ ಏರಿಕೆ: ‘ಕೋವಿಡ್‌ಗೂ ಮುನ್ನ ಹಾವೇರಿ ಜಿಲ್ಲೆಯಲ್ಲಿ 50 ಸಾವಿರ ಕಾರ್ಮಿಕರ ಕಾರ್ಡ್‌ಗಳಿದ್ದವು. ಕೋವಿಡ್‌ ಬಂದ ನಂತರ ಕಾರ್ಡ್‌ಗಳ ಸಂಖ್ಯೆ 2.94 ಲಕ್ಷಕ್ಕೆ ದಿಢೀರ್‌ ಏರಿಕೆಯಾಯಿತು. ಕೋವಿಡ್‌ ವೇಳೆ ಕಾರ್ಮಿಕ ಇಲಾಖೆ ನೀಡಿದ ಆಹಾರ ಕಿಟ್‌ ಮತ್ತು ಕಾರ್ಮಿಕರ ಖಾತೆಗೆ ₹3 ಸಾವಿರ ಪ್ರೋತ್ಸಾಹಧನಕ್ಕಾಗಿ ಕಾರ್ಮಿಕರಲ್ಲದವರೂ ಕಾರ್ಡ್‌ ಮಾಡಿಸಿಕೊಂಡು, ಸೌಲಭ್ಯಕ್ಕೆ ಮುಗಿಬಿದ್ದರು. ಗ್ರಾಮಗಳಲ್ಲೂ ಏಜೆಂಟರು ಹುಟ್ಟಿಕೊಂಡರು’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು. 

7 ತಂಡಗಳ ರಚನೆ: ‘ಕಾರ್ಮಿಕ ಕಲ್ಯಾಣ ಮಂಡಳಿಯು ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿ ಒಳಗೊಂಡ 7 ತಂಡಗಳನ್ನು ರಚಿಸಿ, ಹಾವೇರಿ ಜಿಲ್ಲೆಯ ಪ್ರತಿ ತಾಲ್ಲೂಕಿಗೆ ಕಳುಹಿಸಿತ್ತು. ಈ ತಂಡಗಳು ನವೆಂಬರ್ 21ರಿಂದ ಡಿಸೆಂಬರ್ 2ರವರೆಗೆ ಸ್ಥಳ ಪರಿಶೀಲಿಸಿತು. ಗ್ರಾಮ ಪಂಚಾಯಿತಿ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿತು. ನೋಂದಾಯಿತ ಕಾರ್ಮಿಕರ ಉದ್ಯೋಗ ವಿವರಗಳ ಮಾಹಿತಿ ಕಲೆ ಹಾಕಿ, ಅರ್ಹ ಮತ್ತು ಅನರ್ಹರ ಪಟ್ಟಿ ತಯಾರಿಸಿದೆ’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 18.49 ಲಕ್ಷ ಮಹಿಳಾ ಕಾರ್ಮಿಕರು, 27.83 ಲಕ್ಷ ಪುರುಷ ಕಾರ್ಮಿಕರು ಹಾಗೂ 9,076 ಇತರೆ ಸೇರಿ ಒಟ್ಟು 46.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿಕೊಂಡು, ‘ಕಾರ್ಮಿಕರ ಕಾರ್ಡ್‌’ ಪಡೆದಿದ್ದಾರೆ. ಇವರಲ್ಲಿ ನಕಲಿ ಕಾರ್ಮಿಕರನ್ನು ಪತ್ತೆ ಮಾಡಿ, ನೈಜ ಕಾರ್ಮಿಕರ ಪಟ್ಟಿ ಸಿದ್ಧಪಡಿಸಲು ಮಂಡಳಿ ಕ್ರಮ ಕೈಗೊಂಡಿದೆ’ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಕಾರ್ಮಿಕ ಇಲಾಖೆಯ ಸೌಲಭ್ಯ ಅರ್ಹ ಕಾರ್ಮಿಕರಿಗೆ ಸಿಗಲಿ ಎಂಬ ಉದ್ದೇಶದಿಂದ ನಕಲಿ ಕಾರ್ಡ್‌ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ. ಹಂತಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ತನಿಖಾ ಕಾರ್ಯ ನಡೆಯಲಿದೆ
– ಸಂತೋಷ್‌ ಲಾಡ್‌, ಕಾರ್ಮಿಕ ಸಚಿವ

ಆಕ್ಷೇಪಣೆಗೆ 7 ದಿನಗಳ ಅವಕಾಶ

‘ಕಾರ್ಮಿಕ ನಿರೀಕ್ಷಕರ ಕಚೇರಿಯ ಸೂಚನಾ ಫಲಕದಲ್ಲಿ ಮತ್ತು ಮಂಡಳಿಯ ವೆಬ್‌ಸೈಟ್‌ನಲ್ಲಿ ಅರ್ಹ ಮತ್ತು ಅನರ್ಹ ಕಾರ್ಮಿಕರ ಪಟ್ಟಿ ಪ್ರದರ್ಶಿಸುತ್ತೇವೆ. ಪ್ರದರ್ಶಿಸಿದ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಮೇಲ್ಮನವಿ ಪ್ರಾಧಿಕಾರದ ತೀರ್ಮಾನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಹಾವೇರಿ ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT