ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಕೊಪ್ಪದ ಕೆರೆ ಭರ್ತಿ; ಮನೆಗೆ ನುಗ್ಗಿದ ಕೆರೆ ನೀರು: ಗ್ರಾಮಸ್ಥರ ಪರದಾಟ

ಒಂದು ವಾರದಿಂದ ಹೊರ ಹರಿಯುತ್ತಿದೆ ನೀರು
Published : 23 ಆಗಸ್ಟ್ 2024, 4:20 IST
Last Updated : 23 ಆಗಸ್ಟ್ 2024, 4:20 IST
ಫಾಲೋ ಮಾಡಿ
Comments

ಕಚವಿ(ಹಂಸಬಾವಿ): ಇಲ್ಲಿಗೆ ಸಮೀಪದ ಕಚವಿ ಗ್ರಾಮದಲ್ಲಿ ಕೆರೆಕೋಡಿ ನೀರು ಗ್ರಾಮದೊಳಗೆ ಒಂದು ವಾರದಿಂದ ಹರಿಯುತ್ತಿದೆ. ಮನೆಗೆ ನುಗ್ಗಿದ್ದ ನೀರನ್ನು ಹೊರಹಾಕಲು ಗ್ರಾಮಸ್ಥರು ಕಳೆದ ಒಂದು ವಾರದಿಂದ ರಾತ್ರಿಯಿಡೀ ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿದೆ. ಎಲ್ಲ ಕೆಲಸ ಬಿಟ್ಟು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ.

ಕಚವಿ ಗ್ರಾಮದ ಕೊಪ್ಪದ ಕೆರೆಯು ಕಳೆದ ಒಂದು ವಾರದ ಹಿಂದೆ ತುಂಬಿ ಕೋಡಿ ಬಿದ್ದಿದ್ದು, ಕೋಡಿ ನೀರು ಹರಿಯುವ ಕಾಲುವೆಯು ಗ್ರಾಮದೊಳಗೆ ಹಾದುಹೋಗಿದೆ. ಕೋಡಿ ನೀರು ಹೆಚ್ಚಾಗಿ ಗ್ರಾಮದೊಳಗಿನ ಮನೆಗಳಿಗೆ ನೀರು ನುಗ್ಗಿ ಗ್ರಾಮಸ್ಥರು ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದ್ದು, ಪಂಪ್‌ಸೆಟ್‌ ಮೂಲಕ ನೀರನ್ನು ಹೊರತೆಗೆಯುತ್ತಿದ್ದಾರೆ.

‘ಮನೆಯಲ್ಲಿನ ದವಸ-ಧಾನ್ಯದ ಚೀಲಗಳು ನೀರಲ್ಲಿ ನೆನೆಯುತ್ತಿವೆ. ಅಡುಗೆ ಮಾಡಿಕೊಂಡು ಊಟ ಮಾಡುವುದೂ ಕಷ್ಟವಾಗಿದೆ. ಮನೆಯಲ್ಲಿ ವಯಸ್ಸಾದವರು ಇದ್ದಾರೆ. ಮನೆಯ ಗೋಡೆಗಳು ಕುಸಿಯುವ ಭೀತಿ ಎದುರಾಗಿದ್ದು, ಯಾವಾಗ ಏನು ಆಘಾತ ಕಾದಿದೆಯೋ ಏನೋ ಎಂದು ತಲೆ ಮೇಲೆ ಕೈಹೊತ್ತು ಕೂರುವುದಾಗಿದೆ’ ಎಂದು ಗ್ರಾಮದ ಫಕ್ಕೀರಪ್ಪ ಗೊಂದಿ ತಿಳಿಸಿದರು.

‘ಕೆರೆಯ ನೀರು ರಸ್ತೆಯುದ್ದಕ್ಕೂ ಮೊಣಕಾಲು ದಪ್ಪ ಹರಿಯುವುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ಮಕ್ಕಳನ್ನು ಟ್ಯ್ರಾಕ್ಟರ್‌ ಗಳಲ್ಲಿ ಶಾಲೆಗೆ ಕಳುಹಿಸಲಾಗುತ್ತಿದೆ. ಮನೆಗೆ ನೀರು ನುಗ್ಗದಂತೆ ಎಲ್ಲರೂ ತಮ್ಮ ಮನೆಗಳ ಮುಂಭಾಗ ಒಡ್ಡುಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೂ ನೀರಿನ ಹರಿವು ಹೆಚ್ಚಾಗಿ ಮನೆಗಳಿಗೆ ನುಗ್ಗುತ್ತಿದೆ. ಯಾವ ಅಧಿಕಾರಿಗಳೂ ಇತ್ತ ಗಮನ ಹರಿಸುತ್ತಿಲ್ಲ’ ಎಂದು ಗ್ರಾಮಸ್ಥ ಮಂಜು ಮೂಡಿ ಅಳಲು ತೋಡಿಕೊಂಡರು.

‘ಈ ಕೆರೆಗೆ ಮಡ್ಲೂರ ಏತ ನೀರಾವರಿಯಿಂದ ಒಂದು ತಿಂಗಳ ಮೊದಲೇ ನೀರು ತುಂಬಿಸಲಾಗಿತ್ತು. ಆ ಮೇಲೆ ಮಳೆಯೂ ಹೆಚ್ಚಾಗಿದ್ದರಿಂದ ಕೆರೆಯ ಕೋಡಿ ನೀರು ಹರಿದು ಗ್ರಾಮದೊಳಗೆ ನುಗ್ಗಿದೆ. ಈಗ ಮಳೆ ನಿರಂತವಾಗಿ ಸುರಿಯುತ್ತಿರುವುದರಿಂದ ನೀರಿನ ಹರಿವನ್ನು ತಗ್ಗಿಸಲು ಸಾಧ್ಯವಾಗುತ್ತಿಲ್ಲ. ನಿರಾಶ್ರಿತರಿಗೆ ತೊಂದರೆಯಾಗಬಾರದೆಂದು ಮುಂಜಾಗ್ರತೆಯಾಗಿ ಶಾಲೆಯಲ್ಲಿ ಕೊಠಡಿಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಮುಂದಿನ ಕ್ರಮ ಕೊಗೊಳ್ಳುತ್ತೇವೆ‘ ಎಂದು ಪಿಡಿಒ ಪರಮೇಶಪ್ಪ ಗಿರಿಯಣ್ಣನವರ ‘ಪ್ರಜಾವಾಣಿ‘ಗೆ ತಿಳಿಸಿದರು.

ಕೆರೆಯ ಕೋಡಿ ನೀರು ಹರಿಯಲು ಸಣ್ಣ ನೀರಾವರಿ ಯೋಜನೆಯಿಂದ ಗ್ರಾಮದೊಳಗೇ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಈ ಸಮಸ್ಯೆ ಎದುರಾಗದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಪಿಡಿಒಗೆ ಸೂಚಿಸಲಾಗಿದೆ

-ಎಚ್.ಪ್ರಭಾಕರಗೌಡ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT