ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ: 40 ಬೋಧಕರ ನೇಮಕಾತಿಗೆ ಸಿದ್ಧತೆ

Published 9 ನವೆಂಬರ್ 2023, 5:28 IST
Last Updated 9 ನವೆಂಬರ್ 2023, 5:28 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿನ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಹಿಮ್ಸ್‌) 40 ಬೋಧಕರ ಹುದ್ದೆ ಮತ್ತು 86 ಬೋಧಕೇತರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌.ಎಂ.ಸಿ) ಮಾನದಂಡಗಳನ್ವಯ ವಿವಿಧ ವಿಭಾಗಗಳಲ್ಲಿ ಒಟ್ಟು 45 ಬೋಧಕ ಹುದ್ದೆಗಳು ಅವಶ್ಯವಾಗಿದ್ದು, ಸದರಿ ಹುದ್ದೆಗಳನ್ನು ತುರ್ತಾಗಿ ಸೃಜಿಸಿ ಭರ್ತಿ ಮಾಡುವಂತೆ ಕೋರಲಾಗಿತ್ತು. ಮೊದಲನೇ ವರ್ಷದ ನವೀಕರಣಕ್ಕೆ ಅಗತ್ಯವಿರುವ ವಿವಿಧ ವೃಂದದ 40 ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಸಮ್ಮತಿಸಿದೆ.

ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಸೇರಿದಂತೆ ಒಟ್ಟು 24 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಟ್ಯೂಟರ್‌, ಡೆಮಾನ್‌ಸ್ಟ್ರೇಟರ್‌ ಸೇರಿದಂತೆ ಇತರ 16 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಸೂಚಿಸಲಾಗಿದೆ. 

ಔಷಧ ವಿಜ್ಞಾನ ವಿಭಾಗಕ್ಕೆ–8, ರೋಗ ವಿಜ್ಞಾನ ವಿಭಾಗಕ್ಕೆ–9, ಮೈಕ್ರೊಬಯಾಲಜಿ ವಿಭಾಗಕ್ಕೆ– 7, ವಿಧಿವಿಜ್ಞಾನ ಔಷಧ ವಿಭಾಗಕ್ಕೆ– 4, ಸಮುದಾಯ ಔಷಧ ವಿಭಾಗಕ್ಕೆ– 10, ಚರ್ಮರೋಗ ವಿಜ್ಞಾನ ವಿಭಾಗಕ್ಕೆ– 1, ಮನೋವೈದ್ಯ ವಿಜ್ಞಾನ ವಿಭಾಗಕ್ಕೆ– 1 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. 

60 ನರ್ಸಿಂಗ್‌ ಹುದ್ದೆಗಳು: ಕಾಲೇಜು ಮತ್ತು ಆಸ್ಪತ್ರೆಯ ದಿನನಿತ್ಯದ ಕಾರ್ಯಗಳಿಗೆ ತೊಂದರೆಯಾಗದಂತೆ ಅವಶ್ಯವಿರುವ 86 ಬೋಧಕೇತರ ಹುದ್ದೆಗಳನ್ನು ಸೃಜಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಇದರಲ್ಲಿ 60 ನರ್ಸಿಂಗ್‌ ಹುದ್ದೆಗಳು ಹಾಗೂ 26 ಆಡಳಿತ ಮತ್ತು ಅರೆ ವೈದ್ಯಕೀಯ ಹುದ್ದೆಗಳು ಸೇರಿವೆ. 60 ಸ್ಟಾಫ್‌ ನರ್ಸ್‌ ಹುದ್ದೆಗಳ ಪೈಕಿ 10 ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಹಾಗೂ ಉಳಿದ 50 ಹುದ್ದೆಗಳನ್ನು ಗುತ್ತಿಗೆ/ಹೊರಗುತ್ತಿಗೆ ಮೂಲಕ ಭರ್ತಿ ಮಾಡಿಕೊಳ್ಳಲು ಸೂಚಿಸಲಾಗಿದೆ. 

ಅನುದಾನ ಕೋರಿ ಪತ್ರ: 40 ಸ್ವಚ್ಛತಾ ಸಿಬ್ಬಂದಿ ಮತ್ತು 20 ಭದ್ರತಾ ಸಿಬ್ಬಂದಿ (ಸೆಕ್ಯುರಿಟಿ ಗಾರ್ಡ್‌) ಹುದ್ದೆಗಳನ್ನು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ವೆಚ್ಚ ಭರಿಸುವ ಷರತ್ತಿಗೊಳಪಟ್ಟು, ಏಜೆನ್ಸಿಗಳ ಮೂಲಕ ಸೇವಾ ಗುತ್ತಿಗೆ ಆಧಾರದ ಮೇಲೆ ಪಡೆಯಲು ಅನುಮತಿ ನೀಡಲಾಗಿದೆ. 

‘ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವ ಎ.ಆರ್‌.ಎಸ್‌. ಅನುದಾನದಲ್ಲಿ 40 ಸ್ವಚ್ಛತಾ ಸಿಬ್ಬಂದಿ ಮತ್ತು 20 ಭದ್ರತಾ ಸಿಬ್ಬಂದಿಯ ಸೇವೆಗೆ ತಗಲುವ ವೆಚ್ಚವನ್ನು 2ರಿಂದ 3 ತಿಂಗಳವರೆಗೆ ಭರಿಸಲು ಸಿದ್ಧರಿದ್ದು, ನಂತರ ತಗಲುವ ವೆಚ್ಚವನ್ನು ಭರಿಸಲು ಅನುದಾನ ಬಿಡುಗಡೆ ಮಾಡಬೇಕು’ ಎಂದು ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಪ್ರದೀಪಕುಮಾರ್‌ ಎಂ.ವಿ. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈಚೆಗೆ ಪತ್ರ ಬರೆದಿದ್ದಾರೆ.

ರೋಸ್ಟರ್‌ ಪದ್ಧತಿ ಅನುಸಾರ ಹೊಸ ನೇಮಕಾತಿ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯಾಗದಂತೆ ಕ್ರಮವಹಿಸಲಾಗುವುದು
– ಡಾ.ಪ್ರದೀಪಕುಮಾರ್‌ ಎಂ.ವಿ. ನಿರ್ದೇಶಕ ಹಿಮ್ಸ್‌

ಎಂಬಿಬಿಎಸ್‌ ಪರೀಕ್ಷೆಗೆ ತಯಾರಿ

‘2022–23ನೇ ಸಾಲಿನಲ್ಲಿ ಮೊದಲನೇ ಬ್ಯಾಚಿನ 150 ಎಂಬಿಬಿಎಸ್‌ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಒಂದು ವರ್ಷದ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ನ.16ರಿಂದ ನ.27ರವರೆಗೆ ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಗಳನ್ನು ಹಾವೇರಿ ತಾಲ್ಲೂಕಿನ ದೇವಗಿರಿ–ಯಲ್ಲಾಪುರದ ಬಳಿ ನಿರ್ಮಾಣಗೊಂಡಿರುವ ಹೊಸ ಕಟ್ಟಡದಲ್ಲೇ ನಡೆಸಲು ಸಿದ್ಧತೆ ಕೈಗೊಂಡಿದ್ದೇವೆ’ ಎಂದು ಹಿಮ್ಸ್‌ ನಿರ್ದೇಶಕ ಡಾ.ಪ್ರದೀಪಕುಮಾರ್‌ ಎಂ.ವಿ. ತಿಳಿಸಿದರು. ‘ಈಗಾಗಲೇ ಪರೀಕ್ಷಾ ಕೇಂದ್ರಗಳ ಕೊಠಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಡೆಸ್ಕ್‌ಗಳನ್ನು ಜೋಡಿಸಲಾಗಿದೆ. ಸ್ಟ್ರಾಂಗ್‌ ರೂಂ ಮೌಲ್ಯಮಾಪನ ಕೊಠಡಿಗಳು ಸಿದ್ಧವಾಗಿವೆ. ಕಂಪ್ಯೂಟರ್‌ ಪ್ರಿಂಟರ್‌ ಜೆರಾಕ್ಸ್‌ ಉಪಕರಣಗಳು ಬಂದಿದ್ದು ಶೀಘ್ರದಲ್ಲೇ ಅಳವಡಿಸುತ್ತೇವೆ. ಬಿಎಸ್‌ಎನ್‌ಎಲ್ ಅಂತರ್ಜಾಲ ಸಂಪರ್ಕ ಕಾರ್ಯಗತಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಡಿಸೆಂಬರ್‌ನಿಂದ ಮೊದಲ ಮತ್ತು ಎರಡನೇ ವರ್ಷದ ಒಟ್ಟು 300 ವಿದ್ಯಾರ್ಥಿಗಳಿಗೆ ಹೊಸ ಕಟ್ಟಡದಲ್ಲೇ ತರಗತಿಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು. 

35ರಲ್ಲಿ 22 ಬೋಧಕರು ಮಾತ್ರ ಹಾಜರ್‌!

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪ್ರಾಧ್ಯಾಪಕರು ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 79 ಮಂದಿಯನ್ನು ಕಾಯಂ ನೇಮಕಾತಿ ಮಾಡಿಕೊಳ್ಳಲು 2022ರ ಜನವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಸಂದರ್ಶನದಲ್ಲಿ ಆಯ್ಕೆಯಾದ 35 ಮಂದಿಯ ತಾತ್ಕಾಲಿಕ ಪಟ್ಟಿಯನ್ನು 2022ರ ಡಿಸೆಂಬರ್‌ 9ರಂದು ಪ್ರಕಟಿಸಲಾಗಿತ್ತು. ಆದರೆ ಇದುವರೆಗೂ 22 ಬೋಧಕರು ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 13 ಮಂದಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ. ಇವರಲ್ಲಿ ಕೆಲವರು ನಾನಾ ಕಾರಣಗಳಿಂದ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗದ ಬೋಧಕರಿಗೆ ಅಂತಿಮ ಗಡುವು ನೀಡಿ ನೋಟಿಸ್‌ ಜಾರಿಗೊಳಿಸಿ. ಆಗಲೂ ಕರ್ತವ್ಯಕ್ಕೆ ಹಾಜರಾಗದಿದ್ದರೆ ನೇಮಕಾತಿ ರದ್ದುಪಡಿಸಿ ಆ ಜಾಗಕ್ಕೆ ಹೊಸ ಅಧಿಸೂಚನೆ ಹೊರಡಿಸಲು ಮೆಡಿಕಲ್ ಕಾಲೇಜ್ ಡೀನ್ ಅವರಿಗೆ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿಶಾಲ್ ಆರ್. ಅವರು ಜುಲೈನಲ್ಲಿ ಸೂಚನೆ ನೀಡಿದ್ದರು.  ಕರ್ತವ್ಯಕ್ಕೆ ಹಾಜರಾಗದ 13 ಮಂದಿಯ ಭವಿಷ್ಯ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT