ಹಾವೇರಿ: ನಗರದ ಕೇಂದ್ರ ಭಾಗದಲ್ಲಿರುವ ಶಹರ ಪೊಲೀಸ್ ಠಾಣೆಯ ಪಕ್ಕದಲ್ಲಿ ₹18.75 ಕೋಟಿ ವೆಚ್ಚದಲ್ಲಿ ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ (ಡಿಪಿಒ) ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಪೊಲೀಸ್ ಇಲಾಖೆಯ 3 ಎಕರೆ 22 ಗುಂಟೆ ಜಾಗದಲ್ಲಿದ್ದ 45 ಹಳೆಯ ವಸತಿ ಗೃಹಗಳನ್ನು ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ಭವ್ಯವಾದ ಎಸ್ಪಿ ಕಚೇರಿ ಕಟ್ಟಲಾಗಿದೆ. 2021ರ ಅಕ್ಟೋಬರ್‌ನಲ್ಲಿ ಆರಂಭಗೊಂಡ ಕಟ್ಟಡ ನಿರ್ಮಾಣ ಕಾರ್ಯ 2023ರ ಜೂನ್‌ನಲ್ಲಿ ಬಹುತೇಕ ಪೂರ್ಣಗೊಂಡಿದೆ. ಜುಲೈನಲ್ಲಿ ಕಟ್ಟಡ ಉದ್ಘಾಟಿಸಲು ಇಲಾಖೆ ಸಿದ್ಧತೆ ನಡೆಸಿದೆ.
ನಗರದ ಕೆರಿಮತ್ತಿಹಳ್ಳಿ ರಸ್ತೆಯ ಅನ್ನಪೂರ್ಣ ಆಸ್ಪತ್ರೆ ಪಕ್ಕ 36 ನೂತನ ವಸತಿಗೃಹಗಳನ್ನು ನಿರ್ಮಿಸಲಾಗಿದೆ ಹಾಗೂ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ಎದುರು 36 ವಸತಿಗೃಹಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ 72 ನೂತನ ವಸತಿಗೃಹಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಸೂರಿನಡಿ ವಿವಿಧ ವಿಭಾಗ: ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮಂಡಳಿಯು (ಕೆ.ಎಸ್.ಪಿ.ಎಚ್.ಸಿ) 5,449 ಚದರ ಮೀಟರ್ ಸುತ್ತಳತೆಯ ನಾಲ್ಕು ಅಂತಸ್ತುಗಳ ವಿಶಾಲವಾದ ಕಟ್ಟಡವನ್ನು ನಿರ್ಮಿಸಿದೆ. ನೆಲ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್, ಟಪಾಲ್ ವಿಭಾಗ, ದೂರು ವಿಭಾಗ ಮತ್ತು ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
ಮೊದಲ ಮಹಡಿಯಲ್ಲಿ ಎಸ್ಪಿ ಮತ್ತು ಎಎಸ್ಪಿ ಕಚೇರಿ, ಡಿಸ್ಟ್ರಿಕ್ ಸ್ಪೆಷಲ್ ಬ್ರ್ಯಾಂಚ್ (ಡಿ.ಎಸ್.ಬಿ) ಕಚೇರಿ, ಆಡಳಿತ ಕಚೇರಿ, ಪಾಸ್‌ಪೋರ್ಟ್ ಹಾಗೂ ಸಣ್ಣ ಮೀಟಿಂಗ್ ಹಾಲ್ ಅನ್ನು ವಿನ್ಯಾಸಗೊಳಿಸಲಾಗಿದೆ. 2ನೇ ಅಂತಸ್ತಿನಲ್ಲಿ ಕಾನ್ಫರೆನ್ಸ್ ರೂಂ, ಕಂಪ್ಯೂಟರ್ ಕೊಠಡಿ, ತರಬೇತಿ ಕೇಂದ್ರ, ಅಪರಾಧ ವಿಭಾಗ, ಡಿ.ಸಿ.ಆರ್.ಬಿ ವಿಭಾಗಕ್ಕೆ ಜಾಗ ಮೀಸಲಿರಿಸಲಾಗಿದೆ. 3ನೇ ಅಂತಸ್ತಿನಲ್ಲಿ ತುರ್ತು ಸ್ಪಂದನ ಸಹಾಯ ವ್ಯವಸ್ಥೆ (112) ಮತ್ತು ಕಂಟ್ರೋಲ್ ರೂಂ ಇವೆ.
ಜಲಾವೃತವಾಗಿದ್ದ ಎಸ್ಪಿ ಕಚೇರಿ: ಹಾವೇರಿ ನಗರದಿಂದ 6 ಕಿ.ಮೀ. ದೂರದ ಕೆರಿಮತ್ತಿಹಳ್ಳಿಯ ಹೆಗ್ಗೇರಿ ಕೆರೆಯ ದಂಡೆಯಲ್ಲಿ 2002ರಲ್ಲಿ ಜಿಲ್ಲಾ ಪೊಲೀಸ್ ಕಚೇರಿಯನ್ನು ನಿರ್ಮಿಸಲಾಗಿತ್ತು. 2010ರಲ್ಲಿ ಅತಿ ಹೆಚ್ಚು ಮಳೆಯಾದ ಕಾರಣ ಹಾವೇರಿ ಜಿಲ್ಲಾ ಪೊಲೀಸ್ ಕಟ್ಟಡ, ಡಿಎಆರ್ ಆಡಳಿತ ವಿಭಾಗದ ಕಟ್ಟಡ, ಅಧಿಕಾರಿ ಮತ್ತು ಸಿಬ್ಬಂದಿಯ ಪೊಲೀಸ್ ವಸತಿ ಗೃಹಕ್ಕೆ ಕೆರೆಯ ನೀರು ನುಗ್ಗಿ ಜಲಾವೃತವಾಗಿತ್ತು.
2018ರಲ್ಲೂ ಅತಿವೃಷ್ಟಿಯಾದ ಪರಿಣಾಮ ಹಾವೇರಿ ಜಿಲ್ಲಾ ಪೊಲೀಸ್ ಕಚೇರಿಯನ್ನು 2018ರಲ್ಲಿ ತಾತ್ಕಾಲಿಕವಾಗಿ ಹಾವೇರಿ ಜಿಲ್ಲಾ ನ್ಯಾಯಾಲಯದ ಹಳೆಯ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿತ್ತು. 2019ರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಕಚೇರಿಯನ್ನು ತಾತ್ಕಾಲಿಕವಾಗಿ ಹಾವೇರಿ ತಾಲ್ಲೂಕು ಹಳೆಯ ತಹಶೀಲ್ದಾರ್ ಕಚೇರಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಎಸ್ಪಿ ಕಚೇರಿಯನ್ನು ಶಾಶ್ವತವಾಗಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂಬ ಉದ್ದೇಶದಿಂದ ಹಾವೇರಿ ಶಹರ ಪೊಲೀಸ್ ಠಾಣೆಯ ಪಕ್ಕದ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ವಿವಿಧ ಕಟ್ಟಡಗಳಲ್ಲಿರುವ ವಿಭಾಗಗಳನ್ನು ಒಂದೇ ಸೂರಿನಡಿ ತರುವುದರಿಂದ ಆಡಳಿತ ನಿರ್ವಹಣೆ ಸುಲಭವಾಗಲಿದೆ. ನಗರದ ಮಧ್ಯಭಾಗದಲ್ಲಿರುವುದರಿಂದ ಸಾರ್ವಜನಿಕರಿಗೂ ಅನುಕೂಲ
ಕರವಾಗಲಿದೆ ಎಂಬುದು ಪೊಲೀಸ್ ಅಧಿಕಾರಿಗಳ ಅನಿಸಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.