ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎ ಕರೆಗೆ ಬಂದ್ ಆದವು ಒಪಿಡಿಗಳು

ಸರ್ಕಾರಿ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದ ರೋಗಿಗಳು * ಮಧ್ಯಾಹ್ನದ ನಂತರ ಸಿಕ್ಕ ಖಾಸಗಿ ಸೇವೆ
Last Updated 8 ನವೆಂಬರ್ 2019, 17:45 IST
ಅಕ್ಷರ ಗಾತ್ರ

ಹಾವೇರಿ: ಬೆಂಗಳೂರಿನ ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಕರೆ ನೀಡಿದ್ದ ಒಪಿಡಿ ಬಂದ್‌ಗೆ ನಗರದ ಖಾಸಗಿ ಆಸ್ಪತ್ರೆಗಳು ಬೆಂಬಲ ಸೂಚಿಸಿದ್ದವು.

ವೈದ್ಯರ ಮುಷ್ಕರದ ಬಗ್ಗೆ ತಿಳಿಯದ ಗ್ರಾಮೀಣ ಪ್ರದೇಶದ ರೋಗಿಗಳು ಬೆಳಿಗ್ಗೆಯಿಂದಲೇ ಖಾಸಗಿ ಆಸ್ಪತ್ರೆಗಳತ್ತ ಧಾವಿಸುತ್ತಿದ್ದರು. ಬಾಗಿಲಿಗೆ ಬೀಗ ಹಾಕಿರುವುದನ್ನು ಕಂಡು ಸರ್ಕಾರಿ ಆಸ್ಪತ್ರೆಗಳತ್ತಹೆಜ್ಜೆ ಹಾಕುತ್ತಿದ್ದರು. ಇದರಿಂದ ಎಂದಿನಂತೆ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಶುಕ್ರವಾರ ಹೆಚ್ಚಾಗಿತ್ತು.

‘ನಮ್ಮ ಮಗುವಿಗೆ ಚಳಿ ಜ್ವರ ಇದೆ. ನಾವು ಯಾವಾಗಲೂ ಹಾವೇರಿಯ ಪಂಡಿತ ಆಸ್ಪತ್ರೆಗೆ ತೋರಿಸುತ್ತಿದ್ದೆವು. ಆದರೆ, ಇಂದು ಪ್ರತಿಭಟನೆ ವಿಷಯ ತಿಳಿಯದೇ ಸರ್ಕಾರಿ ಆಸ್ಪತ್ರೆಗೆ ಬಂದಿದ್ದೇವೆ. ಮಗುವಿನ ರಕ್ತ ಪರೀಕ್ಷೆ ಮಾಡಿಸಿ ತಪಾಸಣೆ ಮಾಡಿಸಿದ್ದೇವೆ’ ಎಂದು ಹೇಳಿದರು ಬ್ಯಾಡಗಿಯ ಮೋಟೆಬೆನ್ನೂರಗ್ರಾಮದ ಗಣೇಶ ಹಾಗೂ ರಾಧಾ ದಂಪತಿ.

‘ಖಾಸಗಿ ವೈದ್ಯರ ಮುಷ್ಕರದ ಹಿನ್ನಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತೆವಹಿಸಲಾಗಿತ್ತು. ವೈದ್ಯರು, ನರ್ಸ್‌ಗಳು ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೂ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿತ್ತು.ಎಂದಿಗಿಂತ ಶುಕ್ರವಾರ ರೋಗಿಗಳ ಸಂಖ್ಯೆ ತುಸು ಹೆಚ್ಚಿದ್ದರೂ, ಯಾವುದೇ ಸಮಸ್ಯೆ ಆಗಿಲ್ಲ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ ತಿಳಿಸಿದರು.

‘ಕರ್ತವ್ಯನಿರತ ವೈದ್ಯರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ನಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ಮಾಡಿದ್ದೇವೆ. ಮಿಂಟೊ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ನಡೆಸಿದ್ದವರು ಶರಣಾಗಿದ್ದರಿಂದ ಮಧ್ಯಾಹ್ನದ ನಂತರ ಹೋರಾಟ ಕೈಬಿಟ್ಟಿದ್ದೇವೆ. ಶನಿವಾರದಿಂದ ಎಂದಿನಂತೆ ಒಪಿಡಿಗಳು ಕಾರ್ಯ ನಿರ್ವಹಿಸಲಿವೆ’ ಎಂದುಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮೃತ್ಯುಂಜಯ ತುರಕಾಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ವೈದ್ಯರ ಮಾನವೀಯತೆ: ಹಾವೇರಿಯ ಎಲ್ಲ ಆಸ್ಪತ್ರೆಗಳಲ್ಲೂ ಒಳರೋಗಿಗಳಿಗೆ ಹಾಗೂ ತುರ್ತು ಚಿಕಿತ್ಸೆಯ ಅಗತ್ಯವಿದ್ದ ರೋಗಿಗಳಿಗೆ ಆರೈಕೆ ಮಾಡಲಾಯಿತು. ಐಎಂಎಯ ಸೂಚನೆ ಇದ್ದರೂ ಕೆಲವು ಆಸ್ಪತ್ರೆಗಳ ವೈದ್ಯರು ಹೊರರೋಗಿಗಳಿಗೂ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದರು.

‘ಮೂರು ತಿಂಗಳಲ್ಲಿ ನಾಲ್ಕನೇ ಸಲ ಮುಷ್ಕರ ಮಾಡುತ್ತಿದ್ದೇವೆ. ನಾವು ಪದೇ ಪದೇ ಹೀಗೆ ಮಾಡುತ್ತಿದ್ದರೆ ರೋಗಿಗಳು ಏನು ಮಾಡಬೇಕು. ಹೀಗಾಗಿ, ಹೋರಾಟಕ್ಕೆ ಬೆಂಬಲ ಸೂಚಿಸುತ್ತಲೇ ಹೊರರೋಗಿಗಳಿಗೂ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ವೈದ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT