ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ತಾಲ್ಲೂಕಿನಲ್ಲಿ 50 ಹಾಸಿಗೆ ಸಿದ್ಧಪಡಿಸಿ: ಸಚಿವ ಬಸವರಾಜ ಬೊಮ್ಮಾಯಿ

ಕೋವಿಡ್‌ ತಡೆಗಟ್ಟಲು ಜನರ ಸಹಕಾರ ಅಗತ್ಯ: ಸಚಿವ ಬಸವರಾಜ ಬೊಮ್ಮಾಯಿ
Last Updated 4 ಜುಲೈ 2020, 14:42 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ 50 ಹಾಸಿಗೆಯ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ವಾರ್ಡ್‍ಗಳನ್ನು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೋವಿಡ್ ಪರಿಸ್ಥಿತಿ ಹಾಗೂ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ತಜ್ಞರ ಪ್ರಕಾರ ಕೋವಿಡ್ ಪ್ರಕರಣಗಳು ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿವೆ. ಸೂಕ್ತ ವೈದ್ಯಕೀಯ ಚಿಕಿತ್ಸೆ, ಈ ಪ್ರಕರಣಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಿಗೆ ಕ್ವಾರಂಟೈನ್‍ಗೊಳಪಡಿಸಲು ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಹೇಳಿದರು.

ಜಿಲ್ಲಾಸ್ಪತ್ರೆಯ ನೆಲ ಅಂತಸ್ತಿನಲ್ಲಿ 125 ಹೆಚ್ಚುವರಿ ಕೋವಿಡ್‌ ಐಸೋಲೇಷನ್‌ ಹಾಸಿಗೆಗಳನ್ನು ಸಿದ್ಧ ಮಾಡಿಕೊಳ್ಳಬೇಕು. ಇದರ ಜೊತೆಗೆ ಮತ್ತೊಂದು ಆಸ್ಪತ್ರೆಯಲ್ಲಿ 50 ಹೆಚ್ಚುವರಿ ಹಾಸಿಗೆಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಇದರಿಂದ ಪ್ರಕರಣಗಳು ಹೆಚ್ಚಾದರ ವ್ಯವಸ್ಥಿತವಾಗಿ ಚಿಕಿತ್ಸೆ ಮಾಡಲು ಅನುಕೂಲವಾಗುತ್ತದೆ. ಕೋವಿಡ್‌ ರೋಗಿಗಳ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲು ಹೆಚ್ಚಿನ ಹಾಸ್ಟೆಲ್‌ಗಳನ್ನು ಗುರುತಿಸಬೇಕು. ಕ್ವಾರಂಟೈನ್ ಕೇಂದ್ರಗಳಲ್ಲಿರುವವರಿಗೆ ಮೂಲಸೌಕರ್ಯಗಳ ಕೊರತೆಯಾಗದಂತೆ ಕ್ರಮವಹಿಸಬೇಕು ಎಂದರು.

ಕೋವಿಡ್‌ ಲ್ಯಾಬ್:

ಜಿಲ್ಲಾ ಆಸ್ಪತ್ರೆಯ ಕೋವಿಡ್ ಲ್ಯಾಬ್‍ನಲ್ಲಿ ಒಂದು ಪಾಳಿಗೆ 50ರಂತೆ ದಿನಕ್ಕೆ 100 ಮಾದರಿಗಳ ಪರೀಕ್ಷೆ ನಡೆಸಬೇಕು. ನಮ್ಮ ಗುರಿಯಂತೆ 300 ಮಾದರಿಗಳ ಪರೀಕ್ಷೆಗೆ ಸಿದ್ಧಮಾಡಿಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ಕೊರತೆಗಳನ್ನು ನೀಗಿಸಲು ಆಯಾ ತಾಲ್ಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಸ್ವಯಂ ನಿಯಂತ್ರಣ ಅಗತ್ಯ:

ಪ್ರತಿ ದಿನ ರಾತ್ರಿ 8ರಿಂದ 5ರವರೆಗೆ ಹಾಗೂ ಭಾನುವಾರ ಸಂಪೂರ್ಣ ಕರ್ಫ್ಯೂ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ ಮುಂತಾದ ನಿಯಮ ಪಾಲಿಸುವ ಮೂಲಕ ಕೊರೊನಾ ಸೋಂಕನ್ನು ತಡೆಗಟ್ಟಬೇಕು. ಪ್ರಕರಣಗಳ ಸಂಖ್ಯೆ ತಡೆಗಟ್ಟುವುದು ಜನರ ಕರ್ತವ್ಯ ಎಂದು ಹೇಳಿದರು.

ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ದೇಸಾಯಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT