ಸಿದ್ದು ಆರ್.ಜಿ.ಹಳ್ಳಿ
ಹಾವೇರಿ: ಜಿಲ್ಲೆಯಲ್ಲಿ ನಡೆದ ಕಳ್ಳತನ, ಕೊಲೆ, ಸುಲಿಗೆ, ದರೋಡೆ ಮುಂತಾದ ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿ.ಎ.ಆರ್) ‘ಶ್ವಾನದಳ’ ಪ್ರಧಾನ ಪಾತ್ರ ವಹಿಸಿದೆ. ಆರೋಪಿಗಳ ಪತ್ತೆಗೆ ಈ ಶ್ವಾನಗಳು ಸಹಕಾರಿಯಾಗಿವೆ.
ಅಪರಾಧ ಪತ್ತೆ ಹಚ್ಚುವ ಡಾಬರ್‌ಮನ್ ತಳಿಯ ಶ್ವಾನಗಳಾದ ‘ಝಾನ್ಸಿ’ ಮತ್ತು ‘ಪಾರು’ ಪ್ರಸಕ್ತ ವರ್ಷ 47 ಪ್ರಕರಣಗಳಲ್ಲಿ ಕರ್ತವ್ಯ ನಿರ್ವಹಿಸಿ, ಆರೋಪಿಗಳ ಸುಳಿವು ನೀಡುವಲ್ಲಿ ಸೈ ಎನಿಸಿಕೊಂಡಿವೆ. ಇದುವರೆಗೆ ಈ ಎರಡೂ ಶ್ವಾನಗಳು ಒಟ್ಟು 175 ಅಪರಾಧ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿವೆ.
ಸ್ಫೋಟಕ ಅಥವಾ ಬಾಂಬ್ ಪತ್ತೆ ಹಚ್ಚುವ ‘ರಾಣಿ’ ಮತ್ತು ‘ಕನಕ’ ಎಂಬ ಲ್ಯಾಬ್ರಡಾರ್ ಶ್ವಾನಗಳು ಪ್ರಸ್ತುತ ವರ್ಷ ಹಾವೇರಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ರ‍್ಯಾಲಿ ಸೇರಿದಂತೆ 23 ವಿವಿಐಪಿ ಕಾರ್ಯಕ್ರಮಗಳಲ್ಲಿ ಕರ್ತವ್ಯ ನಿರ್ವಹಿಸಿವೆ.
ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಲಾರಿ ಚಾಲಕನ ಹತ್ಯೆ ಮತ್ತು ದರೋಡೆ ಪ್ರಕರಣವನ್ನು (2023ರ ಜೂನ್) 48 ಗಂಟೆಯೊಳೆಗೆ ಭೇದಿಸಿ, ಆರೋಪಿಗಳಿಂದ ₹1.33 ಕೋಟಿ ಮೌಲ್ಯದ 120 ಪ್ರೆಷರ್ ವಾಲ್ ಮತ್ತು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪ್ರಕರಣದಲ್ಲಿ ಭಾಗವಹಿಸಿದ್ದ ‘ಪಾರು’ ಶ್ವಾನ, ಘಟನಾ ಸ್ಥಳದಿಂದ ವಾಸನೆ ಹಿಡಿದುಕೊಂಡು 500 ಮೀಟರ್ ದೂರದಲ್ಲಿ ಆರೋಪಿಗಳು ಕುಡಿದು ಬಿಟ್ಟು ಹೋದ ಮದ್ಯದ ಖಾಲಿ ಬಾಟಲಿಗಳನ್ನು ಪತ್ತೆ ಹಚ್ಚಿತ್ತು. ಈ ಸುಳಿವಿನ ಆಧಾರದ ಮೇಲೆ ಐವರು ಆರೋಪಿಗಳನ್ನು ಬಲೆಗೆ ಬೀಳಿಸುವಲ್ಲಿ ಪೊಲೀಸರು ಯಶಸ್ವಿಯಾದರು ಎಂದು ಡಿವೈಎಸ್ಪಿ ಎನ್.ಎಂ. ಹನಕನಹಳ್ಳಿ ತಿಳಿಸಿದರು.
‘ನಿತ್ಯ ಬೆಳಿಗ್ಗೆ 6.30ಕ್ಕೆ ಶ್ವಾನಗಳ ಆರೋಗ್ಯ ಪರಿಶೀಲಿಸಿದ ನಂತರ ಮೈದಾನದಲ್ಲಿ ನಡಿಗೆ, ಓಟ, ವ್ಯಾಯಾಮ ಮಾಡಿಸುತ್ತೇವೆ. 7.30ಕ್ಕೆ ಕರ್ತವ್ಯ ತರಬೇತಿ ಮತ್ತು ಅಣಕು ಪ್ರದರ್ಶನ ನಡೆಸುತ್ತೇವೆ. ಬೆಳಿಗ್ಗೆ 8.30ಕ್ಕೆ ಕೆನಾಲ್‌ಗಳ ಬಳಿ ವಿಶ್ರಾಂತಿ ನೀಡಿ, ಉಪಾಹಾರ ಕೊಡುತ್ತೇವೆ. ಬೆಳಿಗ್ಗೆ ಹಾಲು, ಮೊಟ್ಟೆ, ಗಂಜಿ (ರಾಗಿ, ರವೆ, ಶ್ಯಾವಿಗೆ, ಸಬ್ಬಕ್ಕಿ) ಮತ್ತು ಶಕ್ತಿವರ್ಧಕ ಸಿರಪ್ ಜೊತೆ ಮೊಳಕೆ ಹೆಸರುಕಾಳು ಮತ್ತು ಸೊಪ್ಪು ನೀಡುತ್ತೇವೆ. ಸಂಜೆ 4ಕ್ಕೆ ಮೈದಾನದಲ್ಲಿ ಆಟ, ತರಬೇತಿ ಮುಂದುವರಿಸುತ್ತೇವೆ. ಸಂಜೆ 6ಕ್ಕೆ ಆಹಾರ ಕೊಡುತ್ತೇವೆ’ ಎಂದು ಶ್ವಾನ ತರಬೇತುದಾರರಾದ ಶ್ರೀಕಾಂತ ಕಬ್ಬೂರ, ನಾಗರಾಜ, ಮಾಲತೇಶ ತಿಳಿಸಿದರು.
ಈ ಪೊಲೀಸ್ ಶ್ವಾನಗಳ ಆರೈಕೆ ಮತ್ತು ತರಬೇತಿಗಾಗಿ ನಾಲ್ವರು ಶ್ವಾನ ಪಾಲಕರು ಮತ್ತು ನಾಲ್ವರು ಸಹಾಯಕ ಶ್ವಾನಪಾಲಕರು ಇದ್ದಾರೆ. ಕಾಲಕಾಲಕ್ಕೆ ಈ ನಾಲ್ಕು ಶ್ವಾನಗಳ ಆರೋಗ್ಯ ತಪಾಸಣೆ ಮಾಡಿಸಿ ರೋಗನಿರೋಧಕ ಚುಚ್ಚುಮದ್ದನ್ನು ಹಾಕಿಸಿದ್ದೇವೆ. ಪೊಲೀಸ್ ತಂಡಕ್ಕೆ ಈ ಶ್ವಾನಗಳು ‘ಆನೆಬಲ’ವಿದ್ದಂತೆ ಎನ್ನುತ್ತಾರೆ ಶ್ವಾನ ತರಬೇತುದಾರರಾದ ಶಿವರಾಜ ಜಿ.ಎಂ. ಮತ್ತು ಮಂಜುನಾಥ.
ವಾಸನೆ ಆಧಾರದಲ್ಲಿ ಆರೋಪಿಗಳ ಜಾಡು ಹಿಡಿದು ಸುಳಿವು ನೀಡುವ ಶ್ವಾನಗಳು ಪೊಲೀಸ್ ಇಲಾಖೆಯ ಹೆಮ್ಮೆ. ಶ್ವಾನಗಳ ತರಬೇತಿ ಮತ್ತು ಆರೈಕೆಗೆ ಆದ್ಯತೆ ನೀಡಿದ್ದೇವೆ –ಡಾ.ಶಿವಕುಮಾರ ಗುಣಾರೆ ಎಸ್ಪಿ ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.