ಹಾವೇರಿ: ‘ಜಿಲ್ಲೆಯಲ್ಲಿ ರಂಗಾಯಣದ ಶಾಖೆ ತೆರೆದು, ಸ್ಥಳೀಯವಾಗಿ ರಂಗಭೂಮಿ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು’ ಎಂದು ಹಾವೇರಿ ಜಿಲ್ಲೆಯ ರಂಗಭೂಮಿ ಹಾಗೂ ಇತರೆ ಕ್ಷೇತ್ರದ ಕಲಾವಿದರು ಆಗ್ರಹಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಧಾರವಾಡದ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ರಂಗಾಯಣದ ನೂತನ ನಿರ್ದೇಶಕ ರಾಜು ತಾಳಿಕೋಟಿ ಜೊತೆಗಿನ ಕಾರ್ಯ ಚಟುವಟಿಕೆಗಳ ಸಮಾಲೋಚನಾ ಸಭೆ’ಯಲ್ಲಿ ಪಾಲ್ಗೊಂಡಿದ್ದ ಕಲಾವಿದರು, ಸ್ಥಳೀಯ ಬೇಡಿಕೆಗಳ ಬಗ್ಗೆ ಪ್ರಸ್ತಾಪಿಸಿದರು.
‘ವಿದ್ಯಾರ್ಥಿಗಳಿಗಾಗಿ ಕಾಲೇಜು ರಂಗೋತ್ಸವ ಮತ್ತು ಯುವ ಚೇತನ ಶಿಬಿರ ಶುರು ಮಾಡಬೇಕು. ದೊಡ್ಡಾಟದ ಕಮ್ಮಟಗಳನ್ನು ಸಂಘಟಿಸಬೇಕು. ವೃತ್ತಿ ನಾಟಕ ಕಂಪನಿಗಳಿಗೆ ಪ್ರೋತ್ಸಾಹಿಸಬೇಕು. ಬೀದಿ ನಾಟಕ ಕಲಾವಿದರನ್ನು ಗುರುತಿಸಬೇಕು. ನಾಟಕ ರಚಿಸುವ ಬರಹಗಾರರ ಸಾಹಿತ್ಯವನ್ನು ಪ್ರಕಟಿಸಬೇಕು. ರಂಗ ಶಿಕ್ಷಕರನ್ನು ನೇಮಿಸಬೇಕು. ಕಲಾವಿದರಿಗೆ ಮಂಜೂರಾಗುವ ಸೌಲಭ್ಯಗಳ ದುರ್ಬಳಕೆ ತಡೆಯಬೇಕು’ ಎಂದರು.
‘ಹಾವೇರಿ ಯಲ್ಲಿಯೂ ಕಲಾವಿದರಿದ್ದಾರೆ. ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು. ನಗರಕ್ಕೊಂದು ಪ್ರತ್ಯೇಕ ರಂಗ ಮಂದಿರದ ಕಟ್ಟಡ ನಿರ್ಮಿಸಬೇಕು. ಕಲಾವಿದರಿಗೆ ಗುರುತಿನ ಚೀಟಿ ವಿತರಿಸಬೇಕು. ಬಾಲ ಕಲಾವಿದರಿಗೆ ಪ್ರೋತ್ಸಾಹ
ನೀಡಬೇಕು’ ಎಂದೂ ಕಲಾವಿದರು ಆಗ್ರಹಿಸಿದರು.
ಹಾವೇರಿಯಿಂದ ಸಂಚಾರ ಶುರು: ರಾಜು ತಾಳಿಕೋಟಿ ಮಾತನಾಡಿ, ‘ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿದ್ದೇನೆ. ನನಗೆ ಕೊಟ್ಟಿರುವ ಜವಾಬ್ದಾರಿ ಅರಿತು, ರಂಗಾಯಣದಿಂದ ಕಲಾವಿದರಿಗೆ ಮತ್ತು ಕಲಾವಿದರಿಂದ ರಂಗಾಯಣಕ್ಕೆ ಆಗಬೇಕಿರುವ ಕಾರ್ಯಗಳನ್ನು ಅರಿತುಕೊಳ್ಳಲು ಪ್ರತಿ ಜಿಲ್ಲೆಗೂ ಸಾಗುತ್ತಿರುವೆ. ಹಾವೇರಿ ಜಿಲ್ಲೆಯಿಂದಲೇ ಸಂಚಾರ ಶುರು ಮಾಡಿರುವೆ. ಎಲ್ಲರ ಸಹಕಾರ ಅಗತ್ಯ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಶಶಿಕಲಾ ಹುಡೇದ ಮಾತನಾಡಿ, ‘ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಕಲಾವಿದರು, ಒಂದೇ ತಾಯಿ ಮಕ್ಕಳು. ಕಲಾವಿದರ ಭಾವನೆಗಳಿಗೆ ಸ್ಪಂದಿಸಲು
ರಂಗಾಯಣ ವಿನೂತನ ಯೋಜನೆ ರೂಪಿಸುತ್ತಿದೆ. ಅನುಭವಿ ನಿರ್ದೇಶಕರೊಂದಿಗೆ ನಾಟಕಗಳನ್ನು ಕಟ್ಟುವ ಮೂಲಕ ಆದಾಯ ಸಂಗ್ರಹಿಸುವ ಗುರಿ ಇದೆ’ ಎಂದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ‘ರಂಗಾಯಣದ ನಿರ್ದೇಶಕರಾದ ರಾಜು ತಾಳಿಕೋಟಿ, ಅಧಿಕಾರ ವಿಕೇಂದ್ರೀಕರಣ ಆಗಲೆಂದು ಕಲಾವಿದರ ಬಳಿಗೆ ಬಂದಿರುವುದು ಶ್ಲಾಘನೀಯ. ಆಕರ್ಷಕ ವ್ಯಕ್ತಿತ್ವದ ಅವರು ರಂಗಾಯಣಕ್ಕೆ ಹೊಸ ಸ್ವರೂಪ ನೀಡುತ್ತಾರೆಂಬ ವಿಶ್ವಾಸವಿದೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಹಾಗೂ ಕನ್ನಡ ಸಾಹಿತ್ಯ
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ ಇದ್ದರು.
ಗ್ರಾಮೀಣ ಪ್ರತಿಭೆಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಬೆಳಗಾವಿ ವಿಭಾಗದ ಏಳು ಜಿಲ್ಲೆಗಳಲ್ಲಿ ಸಂಚರಿಸಿ ಕಲಾವಿದರ ಅಹವಾಲು ಆಲಿಸುತ್ತೇನೆರಾಜು ತಾಳಿಕೋಟಿ, ರಂಗಾಯಣ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.