ಭಾನುವಾರ, ನವೆಂಬರ್ 17, 2019
23 °C
ನದಿಪಾತ್ರದಲ್ಲಿ ನೋಂದಣಿ ಫಲಕವಿಲ್ಲದ ವಾಹನಗಳು * ನದಿಗಳ ಒಡಲು ಬಗೆಯುತ್ತಿರುವ ದಂಧೆಕೋರರು

ಹಾವೇರಿ| ಬಂದಿವೆ ಮರಳುಗಳ್ಳರ ಹೊಸ ಲಾರಿಗಳು!

Published:
Updated:
Prajavani

ಹಾವೇರಿ: ಜಿಲ್ಲೆಯಲ್ಲಿ ನದಿಗಳ ಒಡಲು ಬಗೆದು ಮರಳು ದೋಚುತ್ತಿರುವವರ ಹಾವಳಿ ಮಿತಿ ಮೀರಿದ್ದು, ದಂಧೆಕೋರರು ಮರಳು ಸಾಗಣೆಗೆಂದೇ ಹೊಸ ಲಾರಿಗಳನ್ನು ಜಿಲ್ಲೆಗೆ ತರಿಸಿದ್ದಾರೆ. ನೋಂದಣಿ ಫಲಕಗಳೇ ಇಲ್ಲದ ಆ ಲಾರಿಗಳು ಪ್ರತಿದಿನ ನದಿಪಾತ್ರದ ಪ್ರದೇಶಗಳಲ್ಲಿ ಸಂಚರಿಸುತ್ತಿವೆ!

ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌.ತಿಪ್ಪೇಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಗುತ್ತಲಕ್ಕೆ ಹೋಗಿದ್ದಾಗ ದಂಧೆಕೋರರ ಹೊಸ ಲಾರಿಗಳು ಪತ್ತೆಯಾಗಿವೆ. ಈ ವಿಷಯವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದಿರುವ ತಿಪ್ಪೇಸ್ವಾಮಿ, ಅನಧಿಕೃತ ವಾಹನಗಳನ್ನು ಜಪ್ತಿ ಮಾಡಲು ಸೂಚಿಸಿದ್ದಾರೆ.   

ಕಡಿವಾಣಕ್ಕೆ ಕ್ರಮ:

ಮರಳು ದಂಧೆ ಬಗ್ಗೆ ಸಾರ್ವಜನಿಕರಿಂದ ದೂರುಗಳ ಮಹಾಪೂರವೇ ಹರಿದುಬರುತ್ತಿದ್ದು, ಜಿಲ್ಲಾಡಳಿತ ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಈ ಕುರಿತು ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಟಾಸ್ಕ್‌ಫೋರ್ಸ್ ಸಮಿತಿ ಸಭೆ ಕರೆದಿದ್ದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ‘ಎಲ್ಲೆಲ್ಲಿ ಮರಳುಗಾರಿಕೆ ನಡೆಯುತ್ತಿದೆ ಎಂಬುದನ್ನು ಪತ್ತೆ ಮಾಡಿ, ಇನ್ನೊಂದು ವಾರದಲ್ಲಿ ದಂಧೆಗೆ ಪೂರ್ತಿ ಕಡಿವಾಣ ಹಾಕಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.  

‘ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಮರಳು ತಪಾಸಣಾ ಕೇಂದ್ರಗಳನ್ನು ಬುಧವಾರದಿಂದಲೇ ಕ್ರಿಯಾಶೀಲಗೊಳಿಸಬೇಕು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಚೂ ತಪ್ಪದೇ ಆಗಾಗ್ಗೆ ಪರಿಶೀಲನೆ ನಡೆಸಬೇಕು. ತಪಾಸಣಾ ಕೇಂದ್ರಗಳಲ್ಲಿ ಕೂಡಲೇ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಸೂಚನೆ ನೀಡಿದರು.

‘ಹಾವೇರಿ ಹಾಗೂ ರಾಣೆಬೆನ್ನೂರು ತಾಲ್ಲೂಕುಗಳ ನದಿ ಪಾತ್ರದ ಗ್ರಾಮಗಳಲ್ಲಿ ಮರಳು ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.’

‘ಇತ್ತೀಚೆಗೆ ನಾನು ಕಂಚಾರಗಟ್ಟಿ ಹಾಗೂ ಹರಳಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿದಾಗ ಅಲ್ಲಿ ಅಧಿಕ ಸಂಖ್ಯೆಯ ವಾಹನಗಳು ಹಾಗೂ ಬೋಟ್‌ಗಳು ಕಂಡುಬಂದವು. ಅವುಗಳನ್ನು ಯಾವ ಉದ್ದೇಶಕ್ಕೆ ಅಲ್ಲಿಗೆ ತರಲಾಗಿತ್ತು? ಆ ವಾಹನಗಳು ಪರವಾನಗಿ ಪಡೆದಿವೆಯೇ ಎಂಬುದನ್ನೂ ಪರಿಶೀಲಿಸಿ. ಕೃಷಿ ಉದ್ದೇಶಕ್ಕೆ ಪರವಾನಗಿ ಪಡೆದು ಮರಳು ಸಾಗಣಿಕೆ ಹಾಗೂ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರೆ ಅಂತಹ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದೂ ಸೂಚಿಸಿದರು.

ಅಡ್ಡದಾರಿಗಳಿಗೆ ಬ್ರೇಕ್:

‘ದಂಧೆಕೋರರು ಮುಖ್ಯರಸ್ತೆಯನ್ನು ಬಿಟ್ಟು ಕಿರುದಾರಿ ಅಥವಾ ಅಡ್ಡದಾರಿಗಳ ಮೂಲಕ ಮರಳು ಸಾಗಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಅಡ್ಡದಾರಿಗಳನ್ನು ಕೂಡಲೇ ಬಂದ್ ಮಾಡಿಸಿ. ಮರಳು ಲಾರಿಗಳು ಓಡಾಡುವ ಸ್ಥಳಗಳಲ್ಲಿ ಟ್ರಂಚ್ ಹಾಕಿ. ನಂಬರ್‌ ಪ್ಲೇಟ್ ಇಲ್ಲದ, ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಮರಳು ಸಾಗಿಸುವ ವಾಹನಗಳನ್ನು ಜಪ್ತಿ ಮಾಡಿ’ ಎಂದು ಪೊಲೀಸ್, ಪ್ರಾದೇಶಿಕ ಸಾರಿಗೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಕೃಷ್ಣ ಬಾಜಪೇಯಿ ಹೇಳಿದರು.

ಹಾವೇರಿ ಎಸ್ಪಿ ಕೆ.ಜಿ.ದೇವರಾಜು, ‘ಮರಳು ಲಾರಿಗಳನ್ನು ನಿರಂತರವಾಗಿ ತಪಾಸಣೆ ಮಾಡಲಾಗುತ್ತಿದೆ. ಅನುಮತಿ ಇಲ್ಲದ ಹಾಗೂ ನೋಂದಣಿ ಸಂಖ್ಯೆಗಳಿಲ್ಲದ ವಾಹನಗಳನ್ನು ಈಗಾಗಲೇ ಜಪ್ತಿ ಮಾಡಿದ್ದೇವೆ. ಅಕ್ರಮ ತಡೆಗೆ ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ’ ಎಂದರು. 

ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸವಣೂರು ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ್ ಶಂಕರ್, ರಾಣೇಬೆನ್ನೂರು ಹಾಗೂ ಹಾವೇರಿ ಠಾಣೆಗಳ ಪೊಲೀಸರು ಸಭೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)