ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಕಾರರ ಊರು ‘ತುಮ್ಮಿನಕಟ್ಟಿ’

ಇಲ್ಲಿನ ಗ್ರಾಮ ಪಂಚಾಯ್ತಿಗೆ ರಾಷ್ಟ್ರೀಯ ಪುರಸ್ಕಾರ: ಗಮನ ಸೆಳೆಯುವ ದೇವಾಲಯಗಳು
Last Updated 26 ಜೂನ್ 2021, 19:30 IST
ಅಕ್ಷರ ಗಾತ್ರ

ತುಮ್ಮಿನಕಟ್ಟಿ: ಇಲ್ಲಿನ ಚೌಡೇಶ್ವರಿ ದೇವಸ್ಥಾನದ ಬಳಿ ಇದ್ದ ಕೆರೆ ಸರ್ವಕಾಲಕ್ಕೂ ತುಂಬಿರುತ್ತಿದ್ದ ಪರಿಣಾಮ ಇದಕ್ಕೆ ‘ತುಂಬಿದ ಕಟ್ಟೆ’ ಎಂದಿದ್ದು , ನಂತರ ತುಮ್ಮಿನಕಟ್ಟಿ ಎಂದು ರೂಢಿಯಾಗಿದೆ.

ಗ್ರಾಮವು ತುಂಗಭದ್ರಾ ನದಿಯ ಪಾತ್ರದಲ್ಲಿದ್ದು, ಕೃಷಿ ಸೇರಿದಂತೆ ಗೃಹ ಕೈಗಾರಿಕಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಸಿರು ಸಿರಿಯ ಸುಂದರ ತಾಣವಾದ ಇದು ಬೆಳವಲ ನಾಡಿನ ಭಾಗವಾಗಿದೆ.

ಕೃಷಿ ಹಾಗೂ ನೇಕಾರಿಕೆ ಗ್ರಾಮಸ್ಥರ ಪ್ರಮುಖ ಉದ್ಯೋಗವಾಗಿದೆ. ಗ್ರಾಮದಲ್ಲಿ 17 ಕೈಮಗ್ಗ ನೇಕಾರರ ಸಹಕಾರ ಸಂಘಗಳಿದ್ದು, ಅದರಲ್ಲಿ 7 ನೇಕಾರರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಾ ನೇಕಾರ ವರ್ಗದ ಜನರಿಗೆ ಉದ್ಯೋಗ ಒದಗಿಸಿವೆ. ಹೀಗಾಗಿ ‘ನೇಕಾರರ ಊರು’ ಎಂದು ಸಹ ಕರೆಯುತ್ತಾರೆ.

ಬಡ ನೇಕಾರರ ಭಾಗ್ಯದ ಬಾಗಿಲು ತೆರೆದ ಗುಣಿಮಗ್ಗ, ಸ್ವಯಂಚಾಲಿತ ಮಗ್ಗಗಳ ಪ್ರಭಾವ ಕಳೆಗುಂದಿದೆ. ವಿದ್ಯುತ್ ಮಗ್ಗಗಳ ಭರಾಟೆ ಜೋರಾಗಿದೆ. ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಒದಗಿಸಿದ್ದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕಾರ್ಮಿಕರಿಗೆ ಸರಿಯಾದ ಕೂಲಿ, ಕಚ್ಚಾ ವಸ್ತುಗಳನ್ನು ಪೂರೈಸದೆ ಕೈಚೆಲ್ಲಿ ಕುಳಿತ ಪರಿಣಾಮ ನೇಕಾರಿಕೆಯನ್ನೇ ನೆಚ್ಚಿಕೊಂಡ ಮೂಲ ನೇಕಾರರ ಬದುಕನ್ನು ಮೂಲೆಗುಂಪು ಮಾಡಿದೆ. ಇದರಿಂದ ಬೇಸತ್ತ ನೇಕಾರರ ಮಕ್ಕಳು ಅನ್ಯ ಉದ್ಯೋಗತ್ತ ಮುಖ ಮಾಡಿದ್ದಾರೆ.

ಕೃಷಿಭೂಮಿ ವಿಸ್ತೀರ್ಣ 570.38 ಹೆಕ್ಟೇರ್ ಇದ್ದು, ಭತ್ತ, ಮೆಕ್ಕೆಜೋಳ, ಸುಗಂಧರಾಜ ಹೂವು ಪ್ರಮುಖ ಬೆಳೆಗಳು. ಸೇವಂತಿಗೆ, ಗುಲಾಬಿ ಹಾಗೂ ಅಲಸಂದಿ ಉಪ ಬೆಳೆಗಳಾಗಿವೆ.ಇಲ್ಲಿ ದೊರೆಯುವ ಪ್ರಮುಖ ತಿಂಡಿಯಾದ ‘ಹೆಸರುಕಾಳಿನ ವಡೆ’ ಹೆಚ್ಚು ಜನಪ್ರಿಯವಾಗಿದೆ.

ಕುಸ್ತಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಪೈಲ್ವಾನ್ ಕೃಷ್ಣಪ್ಪ ಜಾಧವ್ ಹೆಸರು ಮಾಡಿದ್ದಾರೆ. ಕಬಡ್ಡಿ, ಕುಸ್ತಿಯಲ್ಲಿ ಕಿರಣಕುಮಾರ ಉಪ್ಪಾರ ಹಾಗೂ ನಯನಾ ವರಗಪ್ಪನವರ ಜೂಡೋದಲ್ಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆ ಮಾಡಿದ ಪ್ರತಿಭೆಗಳು.

ನಿರ್ಮಲ ಗ್ರಾಮ ಯೋಜನೆ ಅಡಿ ಪ್ರತಿಶತ 100ರಷ್ಟು ಶೌಚಾಲಯ ನಿರ್ಮಿಸಿಕೊಡುವಲ್ಲಿ ಪಂಚಾಯಿತಿ ಯಶಸ್ಸು ಕಂಡಿದೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಂಬಿಕಾ ಕಿರಣಕುಮಾರ.

ಗ್ರಾಮದಲ್ಲಿ ಈಶ್ವರ, ವೀರಭದ್ರೇಶ್ವರ, ಗ್ರಾಮ ದೇವತೆ ದುರ್ಗಾಂಬಿಕಾ, ಕಾಳಿಕಾದೇವಿ ಸೇರಿದಂತೆ ಹಲವಾರು ದೇಗುಲಗಳಿವೆ. ಭಕ್ತರ ಬಾಳನ್ನು ಬೆಳಗುವ ಅಂಕಲಿ ಮಠ, ಗುರು ಶಿವಯೋಗಿ ಮಠ, ಗುರು ಮಾರ್ಕಂಡೇಶ್ವರ ಪದ್ಮಶಾಲಿ ಗುರುಮಠ, ಇಲ್ಲಿ ಎರಡು ಮಸೀದಿಗಳು ಸಹ ಇವೆ.

ಗ್ರಾಮದ ಹನುಮಂತ ದೇವರ ಗುಡಿ ಹತ್ತಿರ ಒಂದು ಶಾಸನ ಪತ್ತೆಯಾಗಿದೆ. ರಾಮಚಂದ್ರ ದೇವಾಲಯಕ್ಕೆ ಸತ್ಯಬೋಧ ತೀರ್ಥರ ಶಿಷ್ಯ ಮಾಧವನಿಂದ ಭೂದಾನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾಪವಿದೆ.

‘ಗ್ರಾಮದಲ್ಲಿ ಶರಣ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗ್ರಾಮೀಣ ಘಟಕವನ್ನು ಸ್ಥಾಪಿಸುವ ಮೂಲಕ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಪ್ರಜ್ಞಾವಂತರು ಸಹಕಾಋ ನೀಡಬೇಕು’ ಎನ್ನುತ್ತಾರೆ ಶಿಕ್ಷಕ ಹರೀಶ ಕಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT