ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಚಿಕಿತ್ಸೆಗೆ ಕಾದಿರುವ ಆರೋಗ್ಯ ಇಲಾಖೆ

ಕಾಯಂ ಸಿಬ್ಬಂದಿ ಕೊರತೆಯಿಂದ ನಿರ್ವಹಣೆಗೆ ತೊಡಕು: ಉತ್ತಮ ಸೇವೆ ಸಿಗದೆ ರೋಗಿಗಳ ಪರದಾಟ
Last Updated 10 ಆಗಸ್ಟ್ 2022, 3:46 IST
ಅಕ್ಷರ ಗಾತ್ರ

ಹಾವೇರಿ: ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ತೀವ್ರವಾಗಿ ಕಾಡುತ್ತಿದ್ದು, ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ವೈದ್ಯಕೀಯ ಸಿಬ್ಬಂದಿ ಪರದಾಡುವಂತಾಗಿದೆ. ಹಾವೇರಿ ಜಿಲ್ಲೆ 25ನೇ ವರ್ಷದ ‘ಬೆಳ್ಳಿ ಹಬ್ಬ’ ಸಂಭ್ರಮದಲ್ಲಿದ್ದು, ಅನಾರೋಗ್ಯ ಪೀಡಿತವಾಗಿರುವ ಆರೋಗ್ಯ ಇಲಾಖೆಗೆ ಚಿಕಿತ್ಸೆ ನೀಡುವ ಅವಶ್ಯವಿದೆ.

ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಸ್ಥಾಪಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಮತ್ತು ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)ಗಳಲ್ಲಿ ಉತ್ತಮ ಸೇವೆ ಸಿಗುತ್ತಿಲ್ಲ ಎಂಬ ದೂರುಗಳು ಗ್ರಾಮಸ್ಥರಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ.

ದೊರೆಯದ ಹೆರಿಗೆ ಸೌಲಭ್ಯ:ಹಾವೇರಿ ಜಿಲ್ಲೆಯಲ್ಲಿ ಒಟ್ಟು 67 ಪಿಎಚ್‌ಸಿಗಳಿದ್ದು, ಇವುಗಳ ಪೈಕಿ 37 ಪಿಎಚ್‌ಸಿ ಮತ್ತು 5 ಸಿಎಚ್‌ಸಿಗಳಲ್ಲಿ 24X7 ಹೆರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ದಿನದ 24 ಗಂಟೆಯೂ ಸೇವೆ ಎಂಬುದು ಹೆಸರಿಗಷ್ಟೇ ಎಂಬಂತಿದೆ. ಕೆಲವರಿಗೆ ಮಾತ್ರ ಸಹಜ ಹೆರಿಗೆ ಮಾಡಿಸುವ ಇಲ್ಲಿನ ವೈದ್ಯಕೀಯ ಸಿಬ್ಬಂದಿ, ಬಹುತೇಕ ಗರ್ಭೀಣಿಯರನ್ನು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳತ್ತ ಸಾಗ ಹಾಕುತ್ತಾರೆ. ಕಾರಣ ಕೇಳಿದರೆ, ಗಂಭೀರ ಮತ್ತು ಸಮಸ್ಯಾತ್ಮಕ ಪ್ರಕರಣಗಳ ಹೆರಿಗೆ ಮಾಡಿಸಲು ಅರಿವಳಿಕೆ ತಜ್ಞರು ಮತ್ತು ಸ್ತ್ರೀರೋಗ ತಜ್ಞರ ಕೊರತೆಯಿದೆ ಎನ್ನುತ್ತಾರೆ ಶುಶ್ರೂಷಕಿಯರು.

ರಾತ್ರಿ ವೇಳೆ ಸಿಬ್ಬಂದಿ ನಾಪತ್ತೆ:ರಾತ್ರಿ ವೇಳೆಯೂ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಸಿಗಲಿ ಎಂದು ವಸತಿಗೃಹಗಳನ್ನು ಕಟ್ಟಿಸಿದ್ದರೂ, ಬಹುತೇಕ ವೈದ್ಯಕೀಯ ಸಿಬ್ಬಂದಿ ಪಟ್ಟಣ ಮತ್ತು ನಗರಗಳಿಂದ ಓಡಾಡುತ್ತಾರೆ. ಹೀಗಾಗಿ ರಾತ್ರಿ ವೇಳೆ ಹೆರಿಗೆ ನೋವು ಕಾಣಿಸಿಕೊಂಡರೆ, ಹಳ್ಳಿಗಳಿಂದ ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಿಗೆ ಬರುವುದು ಅನಿವಾರ್ಯವಾಗುತ್ತದೆ. ರಾತ್ರಿ ವೇಳೆ ವಾಹನ ಕೊರತೆಯಿಂದ ಗರ್ಭಿಣಿಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ನಿತ್ಯ 700 ಹೊರರೋಗಿಗಳು:ಹಾವೇರಿ ಜಿಲ್ಲಾಸ್ಪತ್ರೆಗೆ ನಿತ್ಯ ಸರಾಸರಿ 700ರಿಂದ 800 ರೋಗಿಗಳು ಬರುತ್ತಾರೆ. ಸೋಮವಾರ ಮತ್ತು ಗುರುವಾರಗಳಂದು ಜಾತ್ರೆಯ ರೀತಿಯಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು 330 ಹಾಸಿಗೆಗಳ ಸೌಲಭ್ಯವಿದೆ. ತಿಂಗಳಿಗೆ 250ರಿಂದ 300 ಹೆರಿಗೆಗಳನ್ನು ಮಾಡಿಸಲಾಗುತ್ತದೆ.ಎಂಟು ತಾಲ್ಲೂಕುಗಳಿಂದ ದೊಡ್ಡ ಸಂಖ್ಯೆಯಲ್ಲಿ ರೋಗಿಗಳು ಬರುವುದರಿಂದ ಬೆಡ್‌ಗಳ ಸಂಖ್ಯೆ ಹೆಚ್ಚಿಸಬೇಕು ಎನ್ನುತ್ತಾರೆ ನಾಗರಿಕರು.

ಆ್ಯಂಬುಲೆನ್ಸ್‌ ಕೊರತೆ:ಜಿಲ್ಲೆಯಲ್ಲಿ ಆ್ಯಂಬುಲೆನ್ಸ್‌ಗಳ ಕೊರತೆ ಕಾಡುತ್ತಿದೆ. ಜಿಲ್ಲಾಸ್ಪತ್ರೆಗೆ ಮತ್ತೆರಡು ವೆಂಟಿಲೇಟರ್‌ ಸೌಲಭ್ಯವಿರುವ ಆ್ಯಂಬುಲೆನ್ಸ್‌ಗಳ ಅವಶ್ಯವಿದೆ. ಮೂವರು ಜನಪ್ರತಿನಿಧಿಗಳು ನೀಡಿರುವ 9 ಆ್ಯಂಬುಲೆನ್ಸ್‌ಗಳಿಗೆ ಚಾಲಕರ ಕೊರತೆಯೂ ಕಾಡುತ್ತಿದೆ. ಹೀಗಾಗಿ ಜನರು ತುರ್ತು ಸಂದರ್ಭದಲ್ಲಿ ಖಾಸಗಿ ಆ್ಯಂಬುಲೆನ್ಸ್‌ಗಳನ್ನೇ ಆಶ್ರಯಿಸುವಂತಾಗಿದೆ. ಹುಬ್ಬಳ್ಳಿ–ದಾವಣಗೆರೆಯ ಆಸ್ಪತ್ರೆಗಳಿಗೆ ಹೋಗಲು ₹5ರಿಂದ ₹6 ಸಾವಿರ ತೆರಬೇಕಾಗಿದೆ ಎಂದು ರೋಗಿಗಳು ನೋವು ತೋಡಿಕೊಂಡರು.

ಮೆಡಿಕಲ್‌ ಕಾಲೇಜು ಮಂಜೂರು:ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು, ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಈ ವರ್ಷವೇ ತರಗತಿಗಳು ಆರಂಭವಾಗಲಿವೆ. ಮೆಡಿಕಲ್‌ ಕಾಲೇಜು ಉದ್ಘಾಟನೆಗೊಂಡರೆ ಹೆಚ್ಚುವರಿ ಸಿಬ್ಬಂದಿ, ಬೆಡ್‌ಗಳ ಸಂಖ್ಯೆ ಹೆಚ್ಚಳ, ಉತ್ತಮ ವೈದ್ಯಕೀಯ ಉಪಕರಣಗಳು ದೊರೆತು, ಆರೋಗ್ಯ ಇಲಾಖೆ ಉನ್ನತೀಕರಣಗೊಳ್ಳಲಿದೆ ಎಂಬ ಆಶಯ ವೈದ್ಯಕೀಯ ಸಿಬ್ಬಂದಿಯದ್ದು.

802 ಸಿಬ್ಬಂದಿ ಹುದ್ದೆಗಳು ಖಾಲಿ!
ಹಾವೇರಿ ಜಿಲ್ಲೆಗೆ ಮಂಜೂರಾದ 1866 ಹುದ್ದೆಗಳಲ್ಲಿ 1064 ಹುದ್ದೆಗಳು ಭರ್ತಿಯಾಗಿದ್ದು, ಬರೋಬ್ಬರಿ 802 ಹುದ್ದೆಗಳು ಖಾಲಿ ಇವೆ. ಅಂದರೆ ಶೇ 42ರಷ್ಟು ಹುದ್ದೆಗಳು ಭರ್ತಿಯಾಗಬೇಕಿದೆ.

ತಾಲ್ಲೂಕು ಆರೋಗ್ಯಾಧಿಕಾರಿಗಳು–4, ಸಾಮಾನ್ಯ ಕರ್ತವ್ಯ ಅಧಿಕಾರಿಗಳು–13, ತಜ್ಞವೈದ್ಯರು–20, ಹಿರಿಯ ಶುಶ್ರೂಷಾಧಿಕಾರಿ–7, ನರ್ಸಿಂಗ್‌ ಅಧೀಕ್ಷಕರು–6, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ–20, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ–96, ಕಿರಿಯ ಪ್ರಯೋಗಶಾಲಾ ತಂತ್ರಜ್ಞರು–18, ಹಿರಿಯ ಪ್ರಯೋಗಶಾಲಾ ತಂತ್ರಜ್ಞರು–5, ಕಿರಿಯ ಪುರುಷ ಆರೋಗ್ಯ ಸಹಾಯಕ–96, ಕಿರಿಯ ಫಾರ್ಮಸಿಸ್ಟ್‌–30, ವಾಹನ ಚಾಲಕರು–16, ಗ್ರೂಪ್‌ ಡಿ–335 ಹುದ್ದೆಗಳು ಖಾಲಿ ಉಳಿದಿವೆ.

ವೈದ್ಯಕೀಯ ಯಂತ್ರೋಪಕರಣಗಳ ಕೊರತೆ
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್‌, ಅನಸ್ತೇಷಿಯಾ ಮಷಿನ್‌, ಸಿಆರ್‌ಎಂ ಯಂತ್ರ ಸೇರಿದಂತೆ ಹಲವಾರು ವೈದ್ಯಕೀಯ ಯಂತ್ರೋಪಕರಣಗಳ ಕೊರತೆ ಕಾಡುತ್ತಿದೆ. ಇರುವ ಉಪಕರಣಗಳು ಪದೇ ಪದೇ ಹಾಳಾಗುತ್ತಿದ್ದು, ಜನರಿಗೆ ಉತ್ತಮ ಸೇವೆ ದೊರಕದಂತಾಗಿದೆ. ಯಂತ್ರೋಪಕರಣನಿರ್ವಹಿಸುವ ತಂತ್ರಜ್ಞರ ಕೊರತೆಯೂ ಇದೆ. 20 ಎಂಬಿಬಿಎಸ್‌ ವೈದ್ಯರ ಹುದ್ದೆಗಳು ಖಾಲಿ ಇವೆ. ಹೃದ್ರೋಗ ತಜ್ಞರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

***

ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ 210 ಸಿಎಚ್‌ಒ ನೇಮಕವಾಗಿದ್ದು, ಆರೋಗ್ಯ ಸೇವೆ ಸುಧಾರಿಸಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಿಸಲಾಗಿದೆ.
– ಡಾ.ಎಚ್‌.ಎಸ್‌.ರಾಘವೇಂದ್ರಸ್ವಾಮಿ, ಡಿಎಚ್‌ಒ, ಹಾವೇರಿ

***

ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 700 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ರೋಗಿಗಳಿಗೆ ಸ್ಪಂದಿಸಿ, ಉತ್ತಮ ಸೇವೆ ನೀಡಲು ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ
– ಡಾ.ಪಿ.ಆರ್‌.ಹಾವನೂರ, ಜಿಲ್ಲಾ ಶಸ್ತ್ರಚಿಕಿತ್ಸಕ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT