ಸೋಮವಾರ, ಮಾರ್ಚ್ 8, 2021
31 °C
ಒಂದೇ ದಿನ 477 ಮಿ.ಮೀ ಮಳೆ; ಶಾಲಾ–ಕಾಲೇಜುಗಳಿಗೆ ಇಂದು ರಜೆ; ಮುಳುಗಿದ ಹೊಲ–ಗದ್ದೆಗಳು

ಮಹಾಮಳೆಗೆ ಕೊಚ್ಚಿ ಹೋದ ರೈತ; 96 ಮನೆಗಳ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 477 ಮಿ.ಮೀ ದಾಖಲೆಯ ಮಳೆಯಾಗಿದ್ದು, ಹಾನಗಲ್ ತಾಲ್ಲೂಕಿನ ಶೃಂಗೇರಿ ಗ್ರಾಮದಲ್ಲಿ ಧರ್ಮಾ ನದಿಯ ಸೆಳೆತಕ್ಕೆ ರೈತ ಶಿವಪ್ಪ ಹುಲಗೆಪ್ಪ ಸೊಟ್ಟಕ್ಕನವರ ಕೊಚ್ಚಿ ಹೋಗಿದ್ದಾರೆ. ನದಿ, ಕೆರೆ–ಕಟ್ಟೆಗಳೆಲ್ಲ ತುಂಬಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ಬುಧವಾರವೂ ರಜೆ ಘೋಷಿಸಲಾಗಿದೆ.‌

ಮಂಗಳವಾರ ಬೆಳಿಗ್ಗೆ ಗದ್ದೆ ಕೆಲಸಕ್ಕೆ ಹೋಗಿದ್ದ ಶಿವಪ್ಪ, ಕೈ–ಕಾಲು ತೊಳೆಯುವಾಗ ಕೆಸರಿನಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ನುರಿತ ಮುಳುಗು ತಜ್ಞರು ಸಂಜೆವರೆಗೂ ಶೋಧ ನಡೆಸಿದರೂ ಶಿವಪ್ಪ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ. ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 792.7 ಮಿ.ಮೀ ಇದ್ದು, ಕಳೆದ ಆರು ದಿನಗಳಲ್ಲೇ 777.5 ಮಿ.ಮೀ ಮಳೆ ಸುರಿದಿದೆ.  

ಅಪಾರ ಹಾನಿ, ಜನ ಅತಂತ್ರ: ಸೋಮವಾರ ರಾತ್ರಿ ಸುರಿದ ಮಳೆಗೆ ಹಾನಗಲ್‌ನಲ್ಲಿ 20, ಹಾವೇರಿಯಲ್ಲಿ 11, ಹಿರೇಕೆರೂರಿನಲ್ಲಿ 5, ಬ್ಯಾಡಗಿಯಲ್ಲಿ 19, ಸವಣೂರಿನಲ್ಲಿ 15 ಹಾಗೂ ಶಿಗ್ಗಾವಿಯಲ್ಲಿ 28 ಸೇರಿ ಜಿಲ್ಲೆಯಲ್ಲಿ ಒಟ್ಟು 96 ಮನೆಗಳ ಗೋಡೆಗಳು ಕುಸಿದಿವೆ. ಅಲ್ಲಿನ ವಾಸಿಗಳು ಪರ್ಯಾಯ ವ್ಯವಸ್ಥೆಯಿಲ್ಲದೆ ಅತಂತ್ರರಾಗಿದ್ದಾರೆ.

ಹಾನಗಲ್: ತಾಲೂಕಿನ ಧರ್ಮಾನದಿ ಪಾತ್ರದಲ್ಲಿ 27 ಹಳ್ಳಿಗಳು ಹಾಗೂ ವರದಾ ನದಿ ಪಾತ್ರದಲ್ಲಿ 10 ಹಳ್ಳಿಗಳು ಬಾಧಿತವಾಗಿವೆ. ಸೇತುವೆಯ ಮಟ್ಟಕ್ಕೆ ಧರ್ಮಾ ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ‘ಮಂಗಳವಾರ ತಾಲ್ಲೂಕಿನ ಮಾಸನಕಟ್ಟಿ ಗ್ರಾಮದ ಕೆರೆಗಳ ನೀರು ಕೋಡಿ ಬಿದ್ದು ಸುಮಾರು 80 ಎಕರೆ ಕೃಷಿ ಭೂಮಿಗೆ ಕೆರೆ ನೀರು ಹೊಕ್ಕಿದೆ. ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ’ ಎಂದು ಮಾನಸಕಟ್ಟಿ ಗ್ರಾಮದ ಎಸ್‌.ಎಸ್‌.ಹಿರೇಮಠ ಹೇಳಿದ್ದಾರೆ.

ಮಾಸನಕಟ್ಟಿ ಮತ್ತು ಮಾರನಬೀಡ ಗ್ರಾಮ ಸಂಪರ್ಕದ ರಸ್ತೆ ಕುಸಿದು ಸಂಚಾರ ಸ್ಥಗಿತವಾಗಿದೆ. ಈ ವ್ಯಾಪ್ತಿಯ ಹಿರೇಕೆರಿ, ಬೆಂಡಾಗಟ್ಟಿ ಕೆರೆ, ಅಗಸನಕಟ್ಟಿ ಕೆರೆ ಸೇರಿದಂತೆ ಸಣ್ಣಪುಟ್ಟ ನೀರು ಸಂಗ್ರಹದ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮುಖ್ಯರಸ್ತೆಗಳೂ ಜಲಾವೃತವಾಗಿದ್ದು ಮಳೆ ನಿಂತ ಕೂಡಲೇ, ಗಮ್ಯ ತಲುಪುವ ಧಾವಂತದಲ್ಲಿ ಇಬ್ಬರು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ರಾಣೆಬೆನ್ನೂರಲ್ಲಿ ಎಮ್ಮೆ ಸಾವು: ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಗೋಡೆ ಕುಸಿದು, ನಿಂಗಪ್ಪ ಮಹದೇವಪ್ಪ ದೊಡ್ಡಬೆಣ್ಣಿ ಎಂಬುವರ ಎಮ್ಮೆ ಮೃತಪಟ್ಟಿದೆ. ತುಂಗಭದ್ರಾ ನದಿ ತೀರದ ಪ್ರದೇಶಗಳಲ್ಲಿ ನೀರಿನ ಹರವು ಹೆಚ್ಚಾಗಿ ಉದಗಟ್ಟಿ ಗ್ರಾಮದ ಬಳಿ ಬೆಳೆ ಹಾಗೂ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ.

ಶಿಗ್ಗಾವಿ: ಮಳೆ ಅಬ್ಬರಕ್ಕೆ ಶಿಗ್ಗಾವಿ, ಮುಗಳಿಕಟ್ಟಿ, ಹೋತ್ನಹಳ್ಳಿ, ಕುನ್ನೂರು, ಮುಳಕೇರಿ, ಭದ್ರಾಪುರ, ಹುಲಗೂರ, ಅಂದಲಗಿ, ಲಕ್ಕಿಕೊಪ್ಪ, ಚಿಕ್ಕಮಲ್ಲೂರ, ಹಿರೇಮಲ್ಲೂರ ಗ್ರಾಮದಲ್ಲಿ ಅಪಾರ ನಷ್ಟ ಉಂಟಾಗಿದೆ. ಬಂಕಾಪುರ ಪಟ್ಟಣದ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿ, ಆಹಾರ ಸಾಮಗ್ರಿಗಳೆಲ್ಲ ನೀರು ಪಾಲಾಗಿವೆ. ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆ ಮೈದಾನ ಸಂಪೂರ್ಣ ಜಲಾವೃತ್ತಗೊಂಡಿದೆ. ಶಿಗ್ಗಾವಿ–ಕುಲಕಟ್ಟಿ ಗ್ರಾಮದ ರಸ್ತೆ ಸ್ಥಗಿತಗೊಂಡು ಜನ ಪರದಾಡುತ್ತಿದ್ದಾರೆ.

‘ಮಳೆಗೆ ಇಡೀ ರೈತ ಸಮೂಹ ತತ್ತರಿಸಿ ಹೋಗಿದ್ದು, ಸಂಬಂಧಿಸಿದ ಅಧಿಕಾರಗಳು ಆದಷ್ಟು ಬೇಗ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಬೆಳೆ ಹಾನಿ ಬಗ್ಗೆ ಸರಿಯಾಗಿ ಮಾಹಿತಿ ಪಡೆದು, ನಿಜವಾದ ಫಲಾನುಭವಿಗಳಿಗೆ ಪರಿಹಾರ ಕೊಡಿಸಬೇಕು’ ಎಂದು ನಾರಾಯಣಪುರ ಗ್ರಾಮದ ರೈತ ಶಶಿಧರ ಹೊಣ್ಣನವರ ಮನವಿ ಮಾಡಿದ್ದಾರೆ.

ಹಿರೇಕೆರೂರು: ತಾಲೂಕಿನಲ್ಲಿ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆರಕ್ಕುರುಳಿದ್ದು, ಬಹುತೇಕ ಪ್ರದೇಶಗಳಲ್ಲಿ ಇಡೀ ದಿನ ವಿದ್ಯುತ್ ಸಂಪರ್ಕ ಕಡಿತವಾಗಿತ್ತು. ಹೊಸೂರು ಹಾಗೂ ಎತ್ತಿನಹಳ್ಳಿ (ಎಂ.ಕೆ.) ಗ್ರಾಮಗಳ ಶಾಲಾ ಕೊಠಡಿಗಳ ಗೋಡೆಗಳು ಕುಸಿದು ಬಿದ್ದಿವೆ. ಚನ್ನಳ್ಳಿ ಗ್ರಾಮದ ಪ್ರಾಥಮಿಕ ಶಾಲಾ ಕಟ್ಟಡದ ಮೇಲೆ ಮರ ಉರುಳಿ ಬಿದ್ದಿದೆ. ರಜೆ ಘೋಷಿಸಿದ್ದರಿಂದ ಅನಾಹುತ ತಪ್ಪಿದಂತಾಗಿದೆ.

ಶಾಲೆಗಳಿಗೆ ಜಲ ದಿಗ್ಭಂಧನ: ಹಾನಗಲ್‌ನ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣ ಜಲಾವೃತಗೊಂಡಿದೆ. ನಿಟಗಿನಕೊಪ್ಪ, ಒಳಗೇರಿ, ಅರಿಶಿಣಗುಪ್ಪಿ, ಚನ್ನಾಪೂರ, ಕಂಚಿನೆಗಳೂರ, ಬೈಲವಾಳ ಆರೆಗೊಪ್ಪ, ಕಲ್ಲಾಪೂರ ಗ್ರಾಮಗಳ ಪ್ರಾಥಮಿಕ ಶಾಲೆಗಳ ಅಂಗಳವೂ ಕೆರೆಯಂತಾಗಿವೆ. ಕೊಠಡಿಗಳು ಸೋರುತ್ತಿದ್ದು, ಶಿಕ್ಷಕರು–ಮಕ್ಕಳು ಆತಂಕದಲ್ಲಿದ್ದಾರೆ.

ದಿನದ ದಾಖಲೆ ಮಳೆ
‘2017ರ ಅಕ್ಟೋಬರ್‌ನಲ್ಲಿ ಒಂದು ದಿನ 296 ಮಿ.ಮೀ ಮಳೆ ಸುರಿದಿತ್ತು. ಕಳೆದ ವರ್ಷದ ಒಂದು ದಿನ 341 ಮಿ.ಮೀ ಮಳೆಯಾಗಿತ್ತು. ಈಗ ಸೋಮವಾರ 477 ಮಿ.ಮೀ ಮಳೆಯಾಗಿದೆ. ಬಹುಶಃ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಮಳೆ ಜಿಲ್ಲೆಯಲ್ಲಿ ಎಂದೂ ಆಗಿಲ್ಲ’ ಎಂದು ಜಿಲ್ಲಾಡಳಿತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು