ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ಮುಂಗಾರಿನ ವರ್ಷಧಾರೆಗೆ ಗರಿಗೆದರಿದ ಕೃಷಿ

ಹಾವೇರಿ ಜಿಲ್ಲೆಯಲ್ಲಿ 3.27 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದ ರೈತರು
Published 24 ಮೇ 2024, 4:54 IST
Last Updated 24 ಮೇ 2024, 4:54 IST
ಅಕ್ಷರ ಗಾತ್ರ

ಹಾವೇರಿ: ಬೇಸಿಗೆಯ ಬಿಸಿಲ ತಾಪದಿಂದ ಕಳೆಗುಂದಿದ್ದ ಇಳೆಯು ಮುಂಗಾರು ಮಳೆಯ ಸಿಂಚನದಿಂದ ತಂಪಾಗಿದೆ. ಕೃಷಿ ಭೂಮಿಯನ್ನು ಹದಗೊಳಿಸಿ, ಬಿತ್ತನೆ ಮಾಡಲು ರೈತರು ಉತ್ಸುಕತೆ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರಿದೆ. 

ಜಿಲ್ಲೆಯಲ್ಲಿ 2024–25ನೇ ಸಾಲಿನ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯು 3.27 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರದ ಗುರಿಯನ್ನು ಹೊಂದಿದೆ. ಇದರಲ್ಲಿ 2,60,983 ಹೆಕ್ಟೇರ್‌ ಮಳೆ ಆಶ್ರಿತ ಭೂಮಿಯಾಗಿದ್ದು, 66,104 ಹೆಕ್ಟೇರ್‌ ನೀರಾವರಿ ಪ್ರದೇಶವಾಗಿದೆ. ಕಳೆದ ವರ್ಷ ಶೇ99.99ರಷ್ಟು ಬಿತ್ತನೆ ಕ್ಷೇತ್ರದ ಗುರಿ ಸಾಧನೆಯಾಗಿತ್ತು. 

ಏಕದಳ ಬೆಳೆಗಳಾದ ಭತ್ತ, ಜೋಳ, ರಾಗಿ, ಗೋವಿನಜೋಳ, ಸಜ್ಜೆ ಮುಂತಾದ ಬೆಳೆಗಳನ್ನು 1,91,521 ಹೆಕ್ಟೇರ್‌ನಲ್ಲಿ, ದ್ವಿದಳ ಧಾನ್ಯಗಳಾದ ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಅವರೆ ಮುಂತಾದ ಬೆಳೆಗಳನ್ನು 991 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಅಂದರೆ ಆಹಾರ ಧಾನ್ಯಗಳ ಬಿತ್ತನೆ ಕ್ಷೇತ್ರದ ಒಟ್ಟು ಗುರಿ 1,92,512 ಹೆಕ್ಟೇರ್‌. 

ಎಣ್ಣೆಕಾಳುಗಳಾದ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ಗುರೆಳ್ಳು, ಸಾಸಿವೆ, ಸೋಯಾಬೀನ್‌ ಬೆಳೆಗಳನ್ನು 29,563 ಹೆಕ್ಟೇರ್‌ನಲ್ಲಿ ಹಾಗೂ ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು ಬೆಳೆಗಳನ್ನು 38,908 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. 

ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಪರಿಣಾಮ ರೈತರು ಭೂಮಿಯನ್ನು ಹದಗೊಳಿಸಿ, ಬಿತ್ತನೆ ಮಾಡಲು ಬಿತ್ತನೆ ಬೀಜ ಖರೀದಿಗಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಮುಗಿಬಿದ್ದಿದ್ದಾರೆ. ಬಿತ್ತನೆ ಬೀಜ ಖಾಲಿಯಾಗುತ್ತವೆ ಎಂಬ ಆತಂಕದಿಂದ ರೈತರು ಮುಂಚಿತವಾಗಿಯೇ ಖರೀದಿಸಿ ದಾಸ್ತಾನು ಮಾಡಿಕೊಳ್ಳುತ್ತಿದ್ದಾರೆ. 2022ರಲ್ಲಿ 23,728 ಕ್ವಿಂಟಲ್‌ ಮತ್ತು 2023ರಲ್ಲಿ 15,062 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿತ್ತು. ಈ ಬಾರಿ 35,610 ಕ್ವಿಂಟಲ್‌ ಬಿತ್ತನೆ ಬೀಜಗಳಿಗೆ ಬೇಡಿಕೆ ಇದೆ. 

‘ಜಿಲ್ಲೆಯಲ್ಲಿ ಗೋವಿನಜೋಳ, ಸೋಯಾ ಅವರೆ, ಶೇಂಗಾ ಮತ್ತು ಇತರೆ ಬೆಳೆಗಳ ಬೀಜ ವಿತರಣೆಗಾಗಿ 19 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 23 ಹೆಚ್ಚುವರಿ ಬೀಜ ಮಾರಾಟ ಕೇಂದ್ರಗಳ ಮೂಲಕ ಬೀಜ ವಿತರಣೆ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರು ರಸಗೊಬ್ಬರವನ್ನು ಬಳಸುವಾಗ ಕೇವಲ ಒಂದೇ ಸಂಸ್ಥೆಯ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೇ ಡಿಎಪಿ ಜೊತೆಗೆ ಗಂಧಕ ಒದಗಿಸುವ 20:20:13 ಹಾಗೂ ಇತರೆ ಕಾಂಪ್ಲೆಕ್ಸ್ ಗೊಬ್ಬರಗಳಾದ 15:15:15, 10:26:26ಗಳನ್ನು ಬಳಸಬೇಕು. ಇವುಗಳ ಬಳಕೆಯಿಂದ ಮಣ್ಣಿಗೆ ಪೋಟ್ಯಾಷ್‌ ಗೊಬ್ಬರ ಒದಗಿಸಿದಂತಾಗುತ್ತದೆ’ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ತಿಳಿಸಿದ್ದಾರೆ. 

ರಸಗೊಬ್ಬರ ದಾಸ್ತಾನು: ಈ ಬಾರಿ ಜಿಲ್ಲೆಯಲ್ಲಿ 1,32,351 ಮೆಟ್ರಿಕ್‌ ಟನ್‌ ರಸಗೊಬ್ಬರಕ್ಕೆ ಬೇಡಿಕೆಯಿದೆ. 26,949 ಹಳೆಯ ದಾಸ್ತಾನು ಮತ್ತು ಈ ವರ್ಷ ಏಪ್ರಿಲ್‌ನಿಂದ ಇಲ್ಲಿಯವರೆಗೆ 24,359 ಕ್ವಿಂಟಲ್‌ ಪೂರೈಕೆ ಸೇರಿದಂತೆ ಒಟ್ಟು 51,238 ಟನ್‌ ಕೃಷಿ ಇಲಾಖೆಯಲ್ಲಿ ದಾಸ್ತಾನು ಮಾಡಲಾಗಿತ್ತು. ಇದರಲ್ಲಿ ಈಗಾಗಲೇ 13,300 ಟನ್‌ ವಿತರಣೆ ಮಾಡಲಾಗಿದ್ದು, 37,938 ಕ್ವಿಂಟಲ್‌ ರಸಗೊಬ್ಬರ ಮಾರಾಟಕ್ಕೆ ಲಭ್ಯವಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ. 

ಮಳೆ ಮಾಹಿತಿ: 2024ನೇ ಸಾಲಿನಲ್ಲಿ ಜನವರಿಯಿಂದ ಇದುವರೆಗೆ (ಪೂರ್ವ ಮುಂಗಾರು) 119 ಮಿ.ಮೀಟರ್‌ ವಾಡಿಕೆ ಮಳೆಗೆ 122 ಮಿ.ಮೀಟರ್‌ ವಾಸ್ತವ ಮಳೆಯಾಗಿದೆ. ಅಂದರೆ ಶೇ 101.92ರಷ್ಟು ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇದೇ ಸಮಯಕ್ಕೆ 2022ರಲ್ಲಿ 298 ಮಿ.ಮೀಟರ್‌ನಷ್ಟು ಭಾರಿ ಮಳೆ ಸುರಿದಿತ್ತು. ಕಳೆದ ವರ್ಷ ಅಂದರೆ 2023ರಲ್ಲಿ ಕೇವಲ 83 ಮಿ.ಮೀಟರ್ ಸುರಿದ ಪರಿಣಾಮ ಮಳೆ ಕೊರತೆಯಾಗಿತ್ತು. 

ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರೈತರು ಕೃಷಿಭೂಮಿಯನ್ನು ಸ್ವಚ್ಛಗೊಳಿಸುತ್ತಿರುವ,  ಹದಗೊಳಿಸುತ್ತಿರುವ, ಉಳುಮೆ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಈ ಬಾರಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ರೈತರಿಗೆ ನೆಮ್ಮದಿ ಮತ್ತು ಆಶಾಭಾವ ಮೂಡಿಸಿದೆ.

ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿಗಾಗಿ ಸೋಯಾಬೀನ್‌ ಖರೀದಿಸಿ ಕೊಂಡೊಯ್ಯುತ್ತಿರುವ ರೈತ
ಹಾವೇರಿ ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿಗಾಗಿ ಸೋಯಾಬೀನ್‌ ಖರೀದಿಸಿ ಕೊಂಡೊಯ್ಯುತ್ತಿರುವ ರೈತ
ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರು ಮಾರಾಟ ಮಳಿಗೆಯಲ್ಲಿ ದರಪಟ್ಟಿಯನ್ನು ರೈತರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ‌ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುತ್ತೇವೆ
-ರಘುನಂದನ ಮೂರ್ತಿ, ಜಿಲ್ಲಾಧಿಕಾರಿ
ಭೂಮಿಯಲ್ಲಿ ಅವಶ್ಯ ತೇವಾಂಶ ಇರುವುದನ್ನು ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರ ಜಿಲ್ಲೆಗೆ ಹಂತ–ಹಂತವಾಗಿ ಪೂರೈಕೆಯಾಗುತ್ತಿದ್ದು ಇದುವರೆಗೆ ಕೊರತೆ ಕಂಡುಬಂದಿಲ್ಲ
-ಮಂಜುನಾಥ ಅಂತರವಳ್ಳಿ, ಕೃಷಿ ಜಂಟಿ ನಿರ್ದೇಶಕ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT