ಮಂಗಳವಾರ, ಜೂನ್ 22, 2021
28 °C
ಸಮುದಾಯಕ್ಕೆ ಕೋವಿಡ್‌ ಸೋಂಕು ಹರಡದಂತೆ ಕ್ರಮವಹಿಸಿ: ಜಿಲ್ಲಾಧಿಕಾರಿ ಸೂಚ

ಮನೆ–ಮನೆಯ ಸರ್ವೆ ನಡೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ಕೋವಿಡ್ ಸೋಂಕು ಸಮುದಾಯಕ್ಕೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಮನೆ– ಮನೆಗೆ ಭೇಟಿ ನೀಡಿ ಸರ್ವೆ ಕಾರ್ಯ ಆರಂಭಿಸಿ. ಮೊದಲ ಆದ್ಯತೆ ಐದಕ್ಕಿಂತ ಹೆಚ್ಚಿನ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಪ್ರದೇಶದಿಂದ ಸರ್ವೆ ಆರಂಭಿಸಿ, ಎರಡು ದಿನದೊಳಗಾಗಿ ವರದಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲೆಯ ಎಲ್ಲ ತಾಲ್ಲೂಕು ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಮನೆ–ಮನೆ ಸರ್ವೆ ಕಾರ್ಯಕ್ಕೆ ತಂಡಗಳನ್ನು ರಚಿಸಿಕೊಂಡು ವಾರ್ಡ್‍ವಾರು ಸರ್ವೆ ಆರಂಭಿಸಲು ಸೂಚನೆ ನೀಡಿದರು.

ಪಾಸಿಟಿವ್ ವರದಿ ಬಂದ ತಕ್ಷಣ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯ ಚುರುಕುಗೊಳಿಸಬೇಕು. ತಪಾಸಣೆಗೊಳಪಡಿಸಬೇಕು. ತಪಾಸಣೆ ಸಂದರ್ಭದಲ್ಲಿ ಶೇ 40ರಷ್ಟು ರ‍್ಯಾಪಿಡ್‌ ಹಾಗೂ ಶೇ 60ರಷ್ಟು ಆರ್.ಟಿ.ಪಿ.ಸಿ.ಆರ್. ಟೆಸ್ಟ್‌ ಮಾಡಬೇಕು. ರ‍್ಯಾಪಿಡ್‌ ಪರೀಕ್ಷೆಯಲ್ಲಿ ನೆಗಟಿವ್ ವರದಿ ಬಂದವರನ್ನು ಪುನಃ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡುವಂತೆ ಸೂಚನೆ ನೀಡಿದರು.

ಕೋಮಾರ್ಬಿಡಿಟಿ (ತೀವ್ರ ಸ್ವರೂಪದ ಅನ್ಯ ಕಾಯಿಲೆಯಿಂದ ಬಳಲುತ್ತಿರುವವರು) ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೋಂ ಐಸೋಲೇಷನ್ ಮಾಡುವ ಮೊದಲು ಕೋವಿಡ್ ಆರೈಕೆ ಕೇಂದ್ರ (ಸಿಸಿಸಿ)ಗಳಿಗೆ ದಾಖಲಿಸಬೇಕು. ಪರೀಕ್ಷೆಗೊಳಪಡಿಸಿ ಅಗತ್ಯ ಔಷಧೋಪಚಾರ ನಂತರ ಅವರ ಪರಿಸ್ಥಿತಿ ನೋಡಿಕೊಂಡು ಮನೆಬಿಟ್ಟು ಹೋಗದಂತೆ ಹಾಗೂ ಕೋವಿಡ್ ಹೋಂ ಐಸೋಲೇಷನ್ ನಿಯಮಾವಳಿ ಪಾಲಿಸುವ ಕರಾರು ಪತ್ರ ಬರೆಸಿಕೊಂಡು ಕಳುಹಿಸಬೇಕು ಎಂದರು. 

ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾದ ಸೋಂಕಿತರು ತಪ್ಪಿಸಿಕೊಳ್ಳದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ಕೇರ್ ಸೆಂಟರ್‌ಗಳಿಗೆ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಸಿಟಿವ್ ವ್ಯಕ್ತಿಗಳ ಮನೆಯನ್ನು ‘ಮೈಕ್ರೋ ಕಂಟೈನ್‍ಮೆಂಟ್’ ಎಂದು ಘೋಷಿಸಿ. ಮೈಕ್ರೋಕಂಟೈನ್‍ಮೆಂಟ್ ಘೋಷಿಸಿದ ಮನೆಯವರಿಗೆ ಜೀವನಾಶ್ಯಕ ವಸ್ತುಗಳ ಪೂರೈಕೆಗೆ ತಹಶೀಲ್ದಾರ್‌ಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು ಮಾತನಾಡಿ, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು 48 ಗಂಟೆಯೊಳಗೆ ಪತ್ತೆಹಚ್ಚುವ ಕಾರ್ಯವಾಗಬೇಕು. ಸೋಂಕಿತರ ಮನೆಗೆ ಸ್ಟಿಕ್ ಅಂಟಿಸಿದರೆ ಗುರುತಿಸಲು ಸುಲಭವಾಗುತ್ತದೆ ಎಂದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ಜಯಾನಂದ ಹಾಗೂ ಸಹಾಯಕ ಔಷಧ ನಿಯಂತ್ರಕರಾದ ನೀಲಿಮಾ ಅವರು ಕೋವಿಡ್ ಮಾರ್ಗಸೂಚಿಗಳು, ವೈದ್ಯಕೀಯ ಚಿಕಿತ್ಸೆ, ಆಕ್ಸಿನ್ ಸರಬರಾಜಿನ ಮಾಹಿತಿಯನ್ನು ಸಭೆಗೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ ಮುದಕಮ್ಮನವರ ಇದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.