ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಿಳವಳ್ಳಿ: ಹೋರಾಟದ ಚರಿತ್ರೆ ಹೇಳುವ ಹುಲಗಡ್ಡಿ

ಪಾಂಡವರ ಅಜ್ಞಾತವಾಸ, ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಹೇಳುವ ತಾಣ
Published 26 ಮೇ 2024, 4:15 IST
Last Updated 26 ಮೇ 2024, 4:15 IST
ಅಕ್ಷರ ಗಾತ್ರ

ತಿಳವಳ್ಳಿ: ಹಾನಗಲ್‌ ತಾಲ್ಲೂಕಿನ ತಿಳವಳ್ಳಿ ಸಮೀಪದ ಕಿರವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಪುಟ್ಟ ಗ್ರಾಮ ಹುಲಗಡ್ಡಿ. ಹಿಂದೆ ಹುಲ್ಲುಗಾವಲಿನಿಂದ ಕೂಡಿದ ಗುಡ್ಡವಾಗಿದ್ದ ಈ ಗ್ರಾಮಕ್ಕೆ ಹುಲ್ಲಿನಗುಡ್ಡ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಹುಲಗಡ್ಡಿ ಎಂದು ಹೆಸರು ಬದಲಾಯಿತು.

ಈಗಿನ ಹಾನಗಲ್ಲನ್ನು ಹಿಂದೆ ವಿರಾಟನಗರ ಎಂದು ಕರೆಯಲಾಗುತ್ತಿತ್ತು. ವಿರಾಟರಾಜ ಈ ನಗರವನ್ನು ಆಳುತ್ತಿದ್ದನು. ಮಹಾಭಾರತದಲ್ಲಿ ಪಾಂಡವರು ಅಜ್ಞಾತವಾಸವನ್ನು ಮಾರುವೇಷದಲ್ಲಿ ವಿರಾಟರಾಜನ ಆಸ್ಥಾನದಲ್ಲಿದ್ದರು.

ಹೀಗೆ ನಕುಲ ಸಹದೇವರು ವಿರಾಟರಾಜನ ದನಗಳನ್ನು ಹುಲಗಡ್ಡಿ ಗ್ರಾಮದ ಗುಡ್ಡದಲ್ಲಿ ದನಕಾಯುವ ಸಂದರ್ಭದಲ್ಲಿ ದುರ್ಯೋಧನನ ಪಕ್ಷವಾದ ಕೌರವರಿಗೆ ಅನುಮಾನ ಬಂದು ದನಗಳನ್ನು ಆಗಿನ ಕಾಲದಲ್ಲಿ ಇದ್ದ ದೊಡ್ಡಿಗೆ ಹಾಕುತ್ತಾರೆ. ನಂತರ ವಿರಾಟರಾಜನ ಮಗ ಉತ್ತರಕುಮಾರ ಹಾಗೂ ಬೃಹನ್ನಳೆ ವೇಷದಲ್ಲಿ ಇದ್ದ ಅರ್ಜುನ ಬಂದು ದನಗಳನ್ನು ಬಿಡಿಸಿಕೊಂಡು ಹೊಗುತ್ತಾರೆ ಎಂಬ ಇತಿಹಾಸ ಇದೆ. ಅದೇ ದನಗಳ ದೊಡ್ಡಿ ಈಗಿನ ಸೊರಬಾ ತಾಲ್ಲೂಕಿನ ದೊಡ್ಡಿಕೊಪ್ಪ ಎಂದು ಗ್ರಾಮ ಹಿರಿಯರಾದ ಎಂ.ಎಸ್.ಪಾಟೀಲ ಹೇಳುತ್ತಾರೆ.

ಹುಲಗಡ್ಡಿ ಗ್ರಾಮವು ಹುಲ್ಲು ಮತ್ತು 300 ಎಕರೆ ಕಾಡಿನಿಂದ ಕೂಡಿದ್ದರಿಂದ ಈ ಗ್ರಾಮಕ್ಕೆ ಸಂಪರ್ಕಿಸಲು ರಸ್ತೆ ಮಾರ್ಗಗಳು ಇರಲಿಲ್ಲ. ಹಾಗಾಗಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇದು ಹೋರಾಟಗಾರ ಅಡಗುದಾಣವಾಗಿತ್ತು. ಇದೇ ಗ್ರಾಮದ ಹಿರೇಮಠ ಎಂಬುವವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿ ಬಂದಿದ್ದರು ಎನ್ನುತ್ತಾರೆ ಇಲ್ಲಿಯ ಗ್ರಾಮಸ್ಥರು.

ಕಲಾಗ್ರಾಮ: ಇಲ್ಲಿಯ ಜನರು ಕಲಾ ಪ್ರೇಮಿಗಳಾಗಿದ್ದಾರೆ. ನಾಟಕ ಮಾಸ್ತರರಿದ್ದು, ಹವ್ಯಾಸಿ ನಾಟಕ ಕಲಾವಿದರಿದ್ದಾರೆ. ಜಾನಪದ ಕಲಾ ಪ್ರದರ್ಶನದಲ್ಲಿ ಬ್ಯಾಡರಾಷೆ, ಸೋಗು ಎಂಬುದು ಇಲ್ಲಿಯ ವಿಶೇಷ. ಡೊಳ್ಳು, ಭಜನೆ ಮೇಳಗಳ ಕಲಾವಿದರು, ಕರಕುಶಲ ಕಲಾವಿದರು ಇದ್ದಾರೆ.

ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಹುಲಗಡ್ಡಿ ಗ್ರಾಮ ಭೌಗೋಳಿಕವಾಗಿ 580.87 ಹೇಕ್ಟರ್ ವಿಸ್ತೀರ್ಣ ಹೊಂದಿದ್ದು, ಕಪ್ಪು ಶಿಲೆಯನ್ನು ಹೊಂದಿದೆ. ಕಪ್ಪು ಮತ್ತು ಕೆಂಪು ಮಣ್ಣಿನ ಲಕ್ಷಣ ಹೊಂದಿದೆ.

ದೇವಾಲಯಗಳು: ಗ್ರಾಮದಲ್ಲಿ ಸುಮಾರು 800 ವರ್ಷ ಹಳೆಯದಾದ ಪುರಾತನ ಕಲ್ಮೇಶ್ವರ ದೇವಾಲಯವಿದೆ. ಈ ದೇವಾಲಯದ ಗರ್ಭಗುಡಿಯು ಅರಳಿಮರದ ಬೇರುಗಳಿಂದ ನಿರ್ಮಾಣವಾಗಿರುವುದು ವಿಶೇಷ. 400 ವರ್ಷ ಹಳೆಯದಾದ ವೀರಭದ್ರೇಶ್ವರ ದೇವಾಲಯ, 12ನೇ ಶತಮಾನದ ಜೈನ ಧರ್ಮದ ಬಸದಿ ಕಲ್ಲುಗಳು ಇಲ್ಲಿವೆ. ಬಸವಣ್ಣ ದೇವಾಲಯ, ಮಾತಂಗಿ, ಹನುಮಂತ ದೇವಾಲಯಗಳಿವೆ.

ಈ ಗ್ರಾಮದಲ್ಲಿ ಅನೇಕ ಮಾಸ್ತಿಕಲ್ಲುಗಳು ಹಾಗೂ ವೀರಗಲ್ಲುಗಳಿವೆ. ಈ ಗ್ರಾಮದಲ್ಲಿ ವೀರ ಕಲಿಗಳು ಇದ್ದರು ಎಂಬು ಇದರಿಂದ ತಿಳಿಯಬಹುದು. ಆದರೆ ಇವು ಯಾರ ಕಾಲದ್ದು ಎಂಬುದು ಬೆಳಕಿಗೆ ಬಂದಿಲ್ಲ.

ಇಲ್ಲಿ ಭತ್ತ ಗೋವಿನಜೋಳ, ಹತ್ತಿ ಪ್ರಮುಖ ಬೆಳೆಗಳು. ಕೊಳವೆ ಬಾವಿಗಳ ಸಹಾಯದಿಂದ ಬಾಳೆ, ಅಡಿಕೆ, ತೆಂಗು, ಮಾವು, ಚಿಕ್ಕು, ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಾ ಸಮೃದ್ಧ ಗ್ರಾಮವಾಗಿದೆ.

ಹುಲಗಡ್ಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ
ಹುಲಗಡ್ಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ
ಹುಲಗಡ್ಡಿ ಗ್ರಾಮದಲ್ಲಿರುವ ಸುಮಾರು 800 ವರ್ಷ ಹಳೆಯದಾದ ಕಲ್ಮೇಶ್ವರ ದೇವಾಲಯ.
ಹುಲಗಡ್ಡಿ ಗ್ರಾಮದಲ್ಲಿರುವ ಸುಮಾರು 800 ವರ್ಷ ಹಳೆಯದಾದ ಕಲ್ಮೇಶ್ವರ ದೇವಾಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT