ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕೋವಿಡ್‌ ಉಲ್ಬಣವಾದರೆ ‘ಸಿಸೇರಿಯನ್‌’ಗೂ ಕುತ್ತು!

ತಾಯಂದಿರು ಮತ್ತು ಶಿಶುಗಳಿಗೆ ಸೋಂಕಿನ ಭೀತಿ
Last Updated 9 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಹಾವೇರಿ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ (ಎಂ.ಸಿ.ಎಚ್‌) ‘ಎಲೆಕ್ಟ್ರಿಕಲ್‌ ಪ್ಯಾನಲ್‌’ ಸುಟ್ಟು ಹೋಗಿ 78 ದಿನಗಳು ಕಳೆದರೂ ದುರಸ್ತಿ ಭಾಗ್ಯ ಕಂಡಿಲ್ಲ. ಇದರಿಂದ ವಿದ್ಯುತ್ ಪೂರೈಕೆಯಾಗದೇ ‘ಆಪರೇಷನ್‌ ಥಿಯೇಟರ್‌’ ಬಂದ್‌ ಆಗಿದ್ದು, ಗರ್ಭಿಣಿಯರು ಪರದಾಡುವಂತಾಗಿದೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೆ.21ರಂದುಬೆಳಿಗ್ಗೆ 7 ಗಂಟೆಗೆ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡತಕ್ಷಣ, ಗರ್ಭಿಣಿಯರು ಹಾಗೂ ಬಾಣಂತಿಯರು ತಮ್ಮ ಪುಟ್ಟ ಕಂದಮ್ಮಗಳನ್ನು ಎದೆಗವಚಿ ಆತಂಕದಿಂದ ಹೊರಗಡೆ ಓಡಿ ಬಂದಿದ್ದರು.ಎಲೆಕ್ಟ್ರಿಕಲ್‌ ಎಂಸಿಬಿ ಬೋರ್ಡ್‌ನಲ್ಲಿ ಲೋಡ್‌ ಜಾಸ್ತಿಯಾಗಿ, ವಿದ್ಯುತ್‌ ಉಪಕರಣ ಸುಟ್ಟು ಹೋಗಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಅನಾಹುತವನ್ನು ತಪ್ಪಿಸಿದ್ದರು.

ಸೋಂಕಿನ ಭೀತಿ: ಜಿಲ್ಲಾಸ್ಪತ್ರೆಯ ಮುಖ್ಯ ಕಟ್ಟಡದಲ್ಲಿರುವ ‘ಆಪರೇಷನ್‌ ಥಿಯೇಟರ್‌’ನಲ್ಲೇಸಿಸೇರಿಯನ್‌ ಶಸ್ತ್ರಚಿಕಿತ್ಸೆ, ಗರ್ಭಕೋಶದ ಶಸ್ತ್ರಚಿಕಿತ್ಸೆ, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ತಾತ್ಕಾಲಿಕ ವ್ಯವಸ್ಥ ಕಲ್ಪಿಸಲಾಗಿದೆ. ಇದೇ ಕೊಠಡಿಯಲ್ಲೇ ಕಣ್ಣು, ಮೂಗು, ಗಂಟಲು, ಎಲುಬು ಮತ್ತು ಕೀಲು, ಹರ್ನಿಯಾ, ಗಂಟು ರೋಗ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಹೀಗಾಗಿ ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಸೋಂಕು, ನಂಜು ತಗುಲುವ ಆತಂಕ ಕಾಡುತ್ತಿದೆ.

‘ಗರ್ಭಿಣಿಯರ ಹೆರಿಗೆಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದ ಕಾರಣ, ಪುರುಷರ ಶಸ್ತ್ರಚಿಕಿತ್ಸೆ ಕೊಠಡಿಯಲ್ಲೇ ಹೆರಿಗೆ ಮಾಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಇದರಿಂದ ತೀವ್ರ ನೋವಿನ ಮಧ್ಯೆಯೂ ಮುಜುಗರ ಮತ್ತು ಹಿಂಜರಿಕೆ ಅನುಭವಿಸುತ್ತಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತಾಗಿದೆ’ ಎಂದು ಮಹಿಳೆಯರು ಕಣ್ಣೀರಿಟ್ಟರು.

ಸಿಸೇರಿಯನ್‌ಗೂ ಕುತ್ತು: ‘ಎರಡನೇ ಕೋವಿಡ್‌ ಅಲೆಯಲ್ಲಿ ಇಡೀ ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿತ್ತು. ಮೂರನೇ ಅಲೆಯಲ್ಲಿಕೋವಿಡ್‌ ಪ್ರಕರಣಗಳು ಹೆಚ್ಚಾದರೆ ಅನಿವಾರ್ಯವಾಗಿ ಸಾಮಾನ್ಯ ರೋಗಿಗಳನ್ನು ಹಾಗೂ ಪ್ರಸವ ನಂತರದ ಕೊಠಡಿಯಲ್ಲಿ ಇರುವ ಬಾಣಂತಿ ಮತ್ತು ನವಜಾತ ಶಿಶುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕಾಗುತ್ತದೆ. ಆಗ ಸಹಜ ಹೆರಿಗೆಗಳನ್ನು ಮಾತ್ರ ಮಾಡಬಹುದು. ಸಿಸೇರಿಯನ್‌ ಶಸ್ತ್ರಚಿಕಿತ್ಸೆಗೆ ಸೌಲಭ್ಯ ಇರುವುದಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌.ಹಾವನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾಸ್ಪತ್ರೆಯ ಐದು ಕೊಠಡಿಗಳನ್ನು ಬಾಣಂತಿಯರು ಮತ್ತು ಶಿಶುಗಳಿಗೆ ಮೀಸಲಿಡಲಾಗಿದೆ. ಈ ಕೊಠಡಿಗಳ ಮುಂಭಾಗದಲ್ಲೇ ಕೋವಿಡ್‌ ವಾರ್ಡ್‌ಗಳು ಇರುವುದರಿಂದ ಮತ್ತಷ್ಟು ಆತಂಕ ಎದುರಾಗಿದೆ.ತುರ್ತು ಸೇವೆಯಡಿ ಬರುವ ಆಸ್ಪತ್ರೆಗೆ ಸೌಲಭ್ಯ ಒದಗಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ.

ಗರ್ಭಿಣಿಯರ ಸ್ಥಳಾಂತರ ಸಮಸ್ಯೆ
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಎಂಸಿಎಚ್‌) ಪ್ರಸ್ತುತ ಸಹಜ ಹೆರಿಗೆಗಳನ್ನು ಮಾತ್ರ ಮಾಡಲಾಗುತ್ತಿದೆ. ‘ಸಿಸೇರಿಯನ್‌ ಶಸ್ತ್ರಚಿಕಿತ್ಸೆ’ ಮಾಡಲೇಬೇಕು ಎಂದು ವೈದ್ಯರು ನಿರ್ಧರಿಸಿದರೆ, ಹೆರಿಗೆ ನೋವಿನಿಂದ ಬಳಲುತ್ತಿರುವ ಗರ್ಭಿಣಿಯರನ್ನು ಕೂಡಲೇ ಸ್ಟ್ರೆಚರ್‌ ಮೂಲಕ ಎಂಸಿಎಚ್‌ ಕಟ್ಟಡದಿಂದ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿರುವ ಮೊದಲ ಮಹಡಿಯ ಆಪರೇಷನ್‌ ಥಿಯೇಟರ್‌ಗೆ ಕರೆತರಬೇಕು. ಇದು ತುಂಬಾ ತ್ರಾಸದಾಯಕ ಎಂದು ಆಸ್ಪತ್ರೆ ಸಿಬ್ಬಂದಿ ಸಮಸ್ಯೆ ತೋಡಿಕೊಂಡರು.

ಪ್ರಸವದ ನಂತರ 24 ಗಂಟೆಯ ಒಳಗೆ ‘ಇಮುನೈಸೇಶನ್‌’ ಮಾಡಲು ನವಜಾತ ಶಿಶುಗಳನ್ನು ಜಿಲ್ಲಾಸ್ಪತ್ರೆಯಿಂದ ಎಂಸಿಎಚ್‌ ಆಸ್ಪತ್ರೆಗೆ ಕರೆದೊಯ್ಯಬೇಕು. ನೋಂದಣಿ, ಜನನ ದಾಖಲಾತಿ, ಹೆರಿಗೆ ಭತ್ಯೆ, ಸವಲತ್ತು ನೋಂದಣಿ, ರಕ್ತ ಪರೀಕ್ಷೆ... ಹೀಗೆ ಅನೇಕ ಕಾರಣಗಳಿಗೆ ಎರಡು ಆಸ್ಪತ್ರೆಗಳ ಮಧ್ಯೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಬಾಣಂತಿಯರ ಸಂಬಂಧಿಕರು ಅಳಲು ತೋಡಿಕೊಂಡರು.

*
ಎಲೆಕ್ಟ್ರಿಕಲ್‌ ಪ್ಯಾನಲ್‌ ಬೋರ್ಡ್, ವೈರಿಂಗ್‌ ರಿಪೇರಿಗೆ ನಿರ್ಮಿತಿ ಕೇಂದ್ರದವರು ₹22 ಲಕ್ಷದ ಅಂದಾಜು ಪಟ್ಟಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುತ್ತೇವೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT