ಭಾನುವಾರ, ಮೇ 29, 2022
29 °C
ಅಕ್ರಮ ಮರಳು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲು: ರವಿಕೃಷ್ಣ ರೆಡ್ಡಿ ಆರೋಪ

ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ನೈಸರ್ಗಿಕ ಸಂಪತ್ತಿಗೆ ಕನ್ನ: ರವಿಕೃಷ್ಣ ರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಸರ್ಕಾರದ ಅವೈಜ್ಞಾನಿಕ ಮರಳು ನೀತಿ ಮತ್ತು ಭ್ರಷ್ಟಾಚಾರದಿಂದ ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡೆತಡೆಯಿಲ್ಲದೆ ನಡೆಯುತ್ತಿದೆ. ‘ಸಿಎಂ ತವರು ಜಿಲ್ಲೆ’ ಹಾವೇರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ನೈಸರ್ಗಿಕ ಸಂಪತ್ತಿಗೆ ಕನ್ನ ಹಾಕಲಾಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಆರೋಪ ಮಾಡಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸ್ಥಳೀಯ ಜನಪ್ರತಿನಿಧಿಗಳ ಹಿಂಬಾಲಕರು ಮತ್ತು ಕೆಲವು ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ. ಜಿಲ್ಲೆಯಲ್ಲಿ ಐರಣಿ ಮತ್ತು ಮುದೇನೂರು ಈ ಎರಡೂ ಸ್ಥಳಗಳನ್ನು ಹೊರತುಪಡಿಸಿದರೆ ಉಳಿದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ ಎಂದು ದೂರಿದರು. 

ಅಕ್ರಮಗಳ ವಿರುದ್ಧ ಹೋರಾಡಲು ಮುಂದಾಗುತ್ತಿರುವ ಕೆಆರ್‌ಎಸ್‌ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹೆದರಿಸುವ ಕೆಲಸ ನಡೆಯುತ್ತಿದೆ. ಅಕ್ರಮದಲ್ಲಿ ಪಾಲ್ಗೊಂಡ ಆರೋಪಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಜ.8ಮತ್ತು 9ರಂದು ನಮ್ಮ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರೂ, ಪೊಲೀಸರು ಯಾರನ್ನೂ ಬಂಧಿಸಿ ವಿಚಾರಣೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಸಚಿವ ಶಿವರಾಮ ಹೆಬ್ಬಾರ ಅವರ ಪುತ್ರ ಅಕ್ರಮ ಗಣಿಗಾರಿಕೆಯಲ್ಲಿ ಜೈಲಿಗೆ ಹೋಗಿದ್ದರು. ಈಗ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹೆಬ್ಬಾರ ಅವರು ಅಕ್ರಮ ಮರಳು ಗಣಿಗಾರಿಕೆ ತಡೆಯುತ್ತಾರೆಂದು ನಿರೀಕ್ಷಿಸಲು ಸಾಧ್ಯವೇ? ಜಿಲ್ಲೆಯಲ್ಲಿ ಹಗಲು ದರೋಡೆ ನಡೆಯುತ್ತಿದ್ದರೂ ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್‌ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು. 

2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಪ್ರಾಮಾಣಿಕ ಮತ್ತು ಜನಪರ ರಾಜಕಾರಣವನ್ನು ಜನರು ಬೆಂಬಲಿಸಬೇಕು ಎಂದು ಮನವಿ ಮಾಡಿದರು. 

ಕೆಪಿಎಸ್‌ಸಿ ಅಕ್ರಮ ಪರ ವಕಾಲತ್ತು ಸರಿಯೇ?

ಕೆಪಿಎಸ್‌ಸಿಯಲ್ಲಿ 2011ನೇ ಸಾಲಿನಲ್ಲಿ ಅಕ್ರಮವಾಗಿ ನೇಮಕಾತಿಯಾಗಿರುವ ಗೆಜೆಟೆಡ್‌ ಪ್ರೊಬೇಷನರಿ ಅಭ್ಯರ್ಥಿಗಳ ಪರ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಕಾಲತ್ತು ವಹಿಸಿದ್ದು ಸರಿಯೇ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಕ್ರಮವನ್ನು ಸಕ್ರಮ ಮಾಡಲು ಪತ್ರ ಬರೆದಿದ್ದಾರೆ ಎಂದು ಕೆಆರ್‌ಎಸ್‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಆರೋಪ ಮಾಡಿದರು. 

ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುತ್ತೇವೆ ಎಂದಿದ್ದ ಬಿಜೆಪಿ, ಕೂಡಲೇ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಕೆಆರ್‌ಎಸ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಅರವಿಂದ ಕೆ.ಬಿ., ಮಹಾಂತೇಶ ಡಿ.ಜಿ, ರಾಜು ಎಂ.ಎಚ್‌, ಚರಣರಾಜ್‌ ರೊಡ್ಡನವರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು