ಸೋಮವಾರ, ಆಗಸ್ಟ್ 15, 2022
23 °C
ಬಂಕಾಪುರ ಹಿಂದೂ ಮಹಾ ಸಭಾ ಗಣಪ: 21 ದಿನಗಳ ಆಚರಣೆ

ಪೊಲೀಸ್ ಬಂದೋಬಸ್ತ್‌ನಲ್ಲಿ ಗಣೇಶನ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ನೆಹರೂ ಗಾರ್ಡನ್‌ನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾದ ಗಣೇಶ ಮೂರ್ತಿ ವಿಸರ್ಜನೆ ಭಕ್ತ ಸಮೂಹದ ಸಂಭ್ರಮದ ನಡುವೆ ಭಾನುವಾರ ಜರುಗಿತು.

ಐದು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಮಾರ್ಗಸೂಚಿ ವಿಷಯವಾಗಿ ಪೊಲೀಸರು ಮತ್ತು ಗಣೇಶ ಸಮಿತಿ ಸದಸ್ಯರ ನಡುವೆ ನಡೆದ ವಾಗ್ವಾದದಿಂದ, 11 ದಿನಕ್ಕೆ ವಿಸರ್ಜನೆ ಮಾಡಬೇಕಾದ ಗಣೇಶನ ಮೂರ್ತಿಯನ್ನು ಮರು ಪ್ರತಿಷ್ಠಾಪಿಸಿ, 21 ದಿನಕ್ಕೆ ವಿಸರ್ಜನೆ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ 21ದಿನಕ್ಕೆ ಗಣಪನ ವಿಸರ್ಜನೆ ಮಾಡುವ ಸಂಪ್ರದಾಯ ಇಲ್ಲಿ ಜಾರಿಗೆ ಬಂದಿದೆ.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಗಣೇಶ ಮೂರ್ತಿಗೆ ಹೂ ಸಮರ್ಪಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಗಣೇಶ ಮೂರ್ತಿ ವಿಸರ್ಜನೆ ಶಾಂತಿ ಸಂಕೇತವಾಗಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಜತೆಗೆ ಸಂಭ್ರಮಿಸಬೇಕು. ಆ ಮೂಲಕ ಸರ್ವರಲ್ಲಿ ಸಮಾನತೆ, ಒಗ್ಗಟ್ಟು ಪ್ರದರ್ಶನ ಮಾಡಲು ಸಾಧ್ಯವಿದೆ ಎಂದರು.

ಜಿಲ್ಲಾ ಆರ್‌ಎಸ್‌ಎಸ್ ಸಂಚಾಲಕ ಗಂಗಾಧರ ಮಾಮ್ಲೆಶೆಟ್ಟರ ಮಾತನಾಡಿ, ಗಣೇಶನ ಮೆರವಣಿಗೆಗೆ ಯಾವುದೇ ವಿಘ್ನ ಬಾರದಂತೆ ಭಕ್ತ ಸಮೂಹ ನಡೆದುಕೊಳ್ಳಬೇಕು. ಜೊತೆಗೆ ಕೊರೊನಾ ವೈರಸ್ ಹರಡದಂತೆ ಪ್ರತಿಯೊಬ್ಬರು ಸರ್ಕಾರದ ಆದೇಶ ಪಾಲಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಎನ್.ಹೊನ್ನಕೇರಿ, ಮುಖಂಡ ಸೋಮಶೇಖರಯ್ಯ ಗೌರಿಮಠ ಮಾತನಾಡಿದರು.

ಗಣೇಶ ಮೂರ್ತಿ ಮೆರವಣಿಗೆ ಸ್ವಾಗತಕ್ಕಾಗಿ ಇಡೀ ಪಟ್ಟಣವೇ ಸಿಂಗಾರಗೊಂಡಿತ್ತು. ರಸ್ತೆಗಳ ಪ್ರತಿ ಓಣಿಗಳಲ್ಲಿನ ಮನೆಗಳ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಲಾಗಿತ್ತು. ಮಾವಿನ ತೋರಣ ಹಾಗೂ ಕೇಸರಿ ಬಣ್ಣದ ಧ್ವಜಗಳು, ತೋರಣಗಳು ಹಾರಾಡುತ್ತಿದ್ದವು. ಮೆರವಣಿಗೆಯಲ್ಲಿ ಪಾಲ್ಗೊಂಡವರು ಕೇಸರಿ ಬಣ್ಣದ ಟೋಪಿ, ರುಮಾಲುಗಳನ್ನು ಹಾಕಿಕೊಂಡು ಪರಸ್ಪರ ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಧ್ವನಿವರ್ಧಕ (ಡಿಜಿ) ರದ್ದು ಪಡಿಸಿದ ಹಿನ್ನೆಲೆಯಲ್ಲಿ ಝಾಂಜ್ ಮೇಳಕ್ಕೆ ಅವಕಾಶ ಕಲ್ಪಿಸಲಾಗಿತು. ಝಾಂಜ್ ಮೇಳದ ತಾಳಕ್ಕೆ ತಕ್ಕಂತೆ ಯುವಕರ ತಂಡ ಕುಣಿದು ಕುಪ್ಪಳಿಸಿತು. ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಬಸ್ ನಿಲ್ದಾಣ, ಸಿಂಪಿಗಲ್ಲಿ, ಪೇಟೆ ಮುಖ್ಯರಸ್ತೆ, ನಾಡಕಚೇರಿ ರಸ್ತೆ, ಕೊಟ್ಟಿಗೇರಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಮೆರವಣಿಗೆ ಸಂಚರಿಸಿತು.

ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಾರ್ಗದುದ್ದಕ್ಕೂ ಭಕ್ತ ಸಮೂಹ, ಸಾರ್ವಜನಿಕರು ಪ್ರತಿ ಓಣಿಗಳಲ್ಲಿ ಜನರಿಗೆ ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು.  ಹಿಂದೂ ಮಹಾ ಸಭಾ ಗಣೇಶ ಸಮಿತಿ ಸದಸ್ಯರು, ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.