ಸೋಮವಾರ, ನವೆಂಬರ್ 29, 2021
21 °C

ನೇರ ವೇತನ ಪದ್ಧತಿಗೆ ಒಳಪಡಿಸಿ: ಹೊರಗುತ್ತಿಗೆ ನೌಕರರ ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಜ್ಯದ ನಗರಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ವಾಹನ ಚಾಲಕರನ್ನು, ವಾಟರ್‌ಮನ್‌, ಡೇಟಾ ಆಪರೇಟರುಗಳನ್ನು ಗುತ್ತಿಗೆ ಹೊರಗುತ್ತಿಗೆ ಆಧಾರದ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಒತ್ತಾಯಿಸಲಾಯಿತು. 

ಗುರುವಾರ ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೊಸಮನಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ವಾಹನ ಚಾಲಕರು, ವಾಟರ್‌ಮನ್‌ಗಳು, ಡೇಟಾ ಆಪರೇಟರುಗಳು ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಸಕಾಲಕ್ಕೆ ಕನಿಷ್ಠ ವೇತನವೂ ಕೈಗೆ ಸಿಗದೆ ಗುತ್ತಿಗೆ ಹೆಸರಿನಲ್ಲಿ ಏಜೆನ್ಸಿಗಳ ಶೋಷಣೆಗೆ ಸಿಲುಕಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 

2017ರಲ್ಲಿ ಪೌರಕಾರ್ಮಿಕರನ್ನು ವಿಶೇಷ ನೇಮಕಾತಿಯಡಿ ಕಾಯಂಗೊಳಿಸಿದ ಸರ್ಕಾರ ಪೌರಕಾರ್ಮಿಕರೊಟ್ಟಿಗೆ ಕೆಲಸ ನಿರ್ವಹಿಸುವ ಈ ಹೊರಗುತ್ತಿಗೆ ನೌಕರರನ್ನು ಗಮನಿಸಲಿಲ್ಲ. ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸಕಾಲಕ್ಕೆ ವೇತನ ನೀಡದಿರುವುದು, ಕನಿಷ್ಠ ವೇತನ, ಭವಿಷ್ಯ ನಿಧಿ ನೀಡದೆ ಗುತ್ತಿಗೆ ಏಜೆನ್ಸಿಗಳು ವಂಚಿಸುವುದು ಸಾಮಾನ್ಯವಾಗಿದೆ. ಈ ಬಗ್ಗೆ ಪ್ರಶ್ನಿಸುವ ನೌಕರರಿಗೆ ಇನ್ನಿಲ್ಲದ ಕಿರುಕುಳ ನೀಡಿ ಕೆಲಸದಿಂದ ಕೈಬಿಡಲಾಗುತ್ತಿದೆ ಎಂದು ಅಳಲು ತೋಡಿಕೊಂಡರು. 

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವರಾಜ ಕಟ್ಟಿಮನಿ, ಕಾರ್ಯದರ್ಶಿ ಗುರುನಾಥ ಅಡಿವೆಣ್ಣನವರ, ಖಜಾಂಚಿ ರಮೇಶ ಭೋವಿ, ಸದಸ್ಯರಾದ ಪ್ರಶಾಂತ ಇಂಗಳಗಿ, ಶಿವಶಂಕರ ಹರಿಜನ,ಹನುಮಂತ ಅಗಡಿ, ಶಿವರಾಜ ಬಾಳಂಬಿಡ, ಹೊನ್ನಪ್ಪ ಹವಳಪ್ಪನವರ, ಬಿಷ್ಟಣ್ಣ ಭಜಂತ್ರಿ ಸೇರಿದಂತೆ ಸಂಗದ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು