ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಧರ್ಮ ಸಂಸ್ಕಾರದ ತಪೋಭೂಮಿ: ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ

Published : 4 ಜುಲೈ 2023, 5:03 IST
Last Updated : 4 ಜುಲೈ 2023, 5:03 IST
ಫಾಲೋ ಮಾಡಿ
Comments

ಅಕ್ಕಿಆಲೂರ: ‘ಭಾರತ, ಧರ್ಮ ಸಂಸ್ಕಾರದ ಪುಣ್ಯಭೂಮಿಯಾಗಿದ್ದು, ಗುರು ಸಾನ್ನಿಧ್ಯದಲ್ಲಿ ರಕ್ಷಾ ಕವಚ ಪಡೆದು ಸಮಾಜಕ್ಕೆ ಒಳಿತು ಮಾಡುವುದೇ ಮಾನವನ ಸದ್ಧರ್ಮ’ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೋಮವಾರ ಹಾನಗಲ್ ತಾಲ್ಲೂಕಿನ ಕೋಡಿಯಲ್ಲಾಪುರ ಗ್ರಾಮದ ರೇವಣಸಿದ್ದೇಶ್ವರ ಬೃಹನ್ಮಠದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಸ್ಕೃತಿ, ಸಂಸ್ಕಾರ, ಸತ್ಸಂಪ್ರದಾಯ, ಪರಂಪರೆ, ಆಧ್ಯಾತ್ಮಿಕ ಜ್ಞಾನದೊಂದಿಗೆ ಮಾನವ ಮಹಾ ಮಾನವನಾಗಬೇಕಿದೆ. ಸದ್ಗುಣಗಳ ಮೂಲಕ ಗುರುವಿನ ಕೃಪೆಗೆ ಪಾತ್ರವಾಗಿ ನಿಂದನೆ ಆರೋಪವಿಲ್ಲದ ಭಕ್ತಿಯ ಬದುಕು ನಡೆಸುವುದೇ ನಿಜವಾದ ಜೀವನ ಎನಿಸಲಿದೆ. ನಮ್ಮ ಪುಣ್ಯಪುರುಷರು ಈ ಜಗಕ್ಕೆ ಒಳಿತನ್ನೇ ನೀಡಿದ್ದಾರೆ. ಪರಪೀಡನೆಯೇ ಅಧರ್ಮ, ಪರೋಪಕಾರವೇ ಧರ್ಮ ಎಂದು ಹೇಳಿದರು.

ಪ್ರಾಣಿ ಪಕ್ಷಿ ಪ್ರಕೃತಿಯನ್ನು ಪ್ರೀತಿಸಿ ಈ ಮೂಲಕ ಮಾನವ ಜನ್ಮದ ಸಾರ್ಥಕಕ್ಕೆ ಮುಂದಾಗಬೇಕಿದೆ. ದಾನ ಧರ್ಮಗಳು ತೋರಿಕೆಯ ಸಂಗತಿಗಳಲ್ಲ, ಬದಲಿಗೆ ಅವು ಭಕ್ತಿಯ ಸಂಕೇತಗಳು. ಗುರುವಿನೊಡನೆ ಅಂತರಂಗ, ಬಹಿರಂಗ ಶುದ್ಧ ಗೌರವವಿರಬೇಕು. ಕೋಡಿಯಲ್ಲಾಪುರ ಪುಟ್ಟ ಗ್ರಾಮ. ಆದರೆ ಇಲ್ಲಿ ಭಕ್ತಿಯ ದೊಡ್ಡ ಸಂಪತ್ತಿದೆ. ಶ್ರೀಮಠದ ಮೂಲಕ ಇಡೀ ನಾಡಿನ ಸದ್ಭಕ್ತರು ಇಲ್ಲಿಗೆ ಬರುವಂತಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಎನ್.ಬಿ.ಪೂಜಾರ, ನಿವೃತ್ತ ಶಿಕ್ಷಕ ಎ.ಐ.ಮಳೆಣ್ಣನವರ ಮಾತನಾಡಿದರು.

ಗುರು ಪೂರ್ಣಿಮೆ ಅಂಗವಾಗಿ ಶ್ರೀಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮ ನಡೆದವು.

ಗುರು–ಶಿಷ್ಯ ಸಂಬಂಧ ಅಗಾಧ’

ಶಿಗ್ಗಾವಿ: ಗುರುವಿನ ನಡೆಯಿಂದ ಶಿಷ್ಯ ಮತ್ತು ಸಮಾಜದ ಏಳ್ಗೆಯ ತವಕ ಕಾಡುತ್ತಿರುತ್ತದೆ. ಹೀಗಾಗಿ ಗುರು-ಶಿಷ್ಯರ ಸಂಬಂಧ ಅಗಾಧವಾಗಿದ್ದು, ಅದನ್ನು ಭಾರತ ದೇಶ ಬಿಟ್ಟು ಬೇರಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಸೋಮವಾರ ನಡೆದ ಗುರು ಪೂರ್ಣಿಮಾ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವರು ಗುರುವಿನ ಸ್ಥಾನದಲ್ಲಿರುತ್ತಾರೆ. ಕಾಯಕದಲ್ಲಿ ದೇವರಿದ್ದಾನೆ. ದೇಹದಂಡನೆ ಮಾಡುವ ಮೂಲಕ ಆರೋಗ್ಯಯುತ ವಾತಾವರಣ ಮೂಡಿಸಬೇಕು ಎಂದರು.

ಶಿರಡಿ ಸಾಯಿ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ದಿವಾಕರ ವೆರ್ಣೇಕರ ಅಧ್ಯಕ್ಷತೆ ವಹಿಸಿದ್ದರು.  ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷ ರವಿ ವೆರ್ಣೇಕರ, ಸತೀಶ ವಳಗೇರಿ, ಮಂಜುನಾಥ ಪಾಟೀಲ, ಜೀವಣ್ಣ ಸಂಕಣ್ಣವರ, ಗದಿಗೆಪ್ಪ ಶೆಟ್ಟರ, ಗದಿಗೆಪ್ಪ ಬಳ್ಳಾರಿ, ಅರ್ಚಕ ಬಸಯ್ಯ ಚಿಕ್ಕಮಠ, ಬಸವರಾಜ ನರೆಗಲ್ಲ, ಪರಶುರಾಮ ಭವಾನಿ, ವೆಂಕಟೇಶ ದೈವಜ್ಞ, ಹನುಮಂತಪ್ಪ ಶಿಗ್ಗಾವಿ, ಅನ್ನಪೂರ್ಣ ವಳಗೇರಿ, ನಿರ್ಮಲಾ ಅರಳಿಕಟ್ಟಿ, ವಾಣಿ ಕೂಲಿ, ಲೋಹಿತ ಪುಕಾಳೆ, ವಿನಯ ವನಹಳ್ಳಿ, ಶಾಂತಪ್ಪ ಕಲಾಲ ಸೇರಿದಂತೆ ಸಮಿತಿ ಸರ್ವ ಸದಸ್ಯರು ಇದ್ದರು.

ಇದೇ ವೇಳೆ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ನಿವೃತ್ತ ಶಿಕ್ಷಕರಾದ ಪಾರ್ವತೆವ್ವ ಸಂಶಿ, ನಾಗೇಂದ್ರ ಬಡಿಗೇರ ಅವರನ್ನು ಸಮಿತಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.

ಮಂದಿರದಲ್ಲಿ ಬೆಳಿಗ್ಗೆ ನಗರ ಸಂಕೀರ್ತನೆ, ಕಾಕಡ ಆರತಿ, ಮಹಾಭಿಷೇಕ, ಸಾಯಿ ಸತ್ಯ ನಾರಾಯಣ ಪೂಜೆ, ನೈವೇದ್ಯಾರತಿ, ನೇರ ಪಾದ ಸ್ಪರ್ಶ ನಮಸ್ಕಾರ, ದೂಪಾರತಿ, ಭಜನೆ, ಫಲ್ಲಕ್ಕಿ ಉತ್ಸವ, ಶೇಜಾರತಿ ಹಾಗೂ ಅನ್ನ ಪ್ರಸಾದ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಾಯಿಬಾಬಾಗೆ ಹಾಲಿನ ಅಭಿಷೇಕ

ರಾಣೆಬೆನ್ನೂರು: ಇಲ್ಲಿನ ಶ್ರೀರಾಮ ನಗರದ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ಸೋಮವಾರ ಗುರುಪೂರ್ಣಿಮೆ ಅಂಗವಾಗಿ ಸಾಯಿ ಬಾಬಾ ಅವರ ಮೂರ್ತಿಗೆ ವಿಶೇಷವಾಗಿ ಭಕ್ತರಿಂದ ಹಾಲಿನ ಅಭಿಷೇಕ ನಡೆಯಿತು. ಸಾಯಿ ಬಾಬಾ ಅವರ ಮೂರ್ತಿಗೆ ವಿಶೇಷ ಹೂಗಳ ಅಲಂಕಾರ ಮಾಡಲಾಗಿತ್ತು.

ಲಕ್ಷಾಂತರ ಭಕ್ತರು ಸಾಯಿ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ್ದರು. ನಂತರ ಬೆಳಿಗ್ಗೆ ಸಾಯಿಬಾಬಾ ಮೂರ್ತಿಗೆ ಕಾಕಡಾರತಿ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮಂಗಲ ಸ್ನಾನದ ನಂತರ ಸಾಯಿ ಸತ್ಯನಾರಾಯಣ ಪೂಜೆ, ಸಾಯಿ ಅಷ್ಟೋತ್ತರ ಪುಷ್ಪಾರ್ಚನೆ ಮತ್ತು ನೈವೇದ್ಯ ಆರತಿ ನಡೆಯಿತು.

ಮಧ್ಯಾಹ್ನ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಸಂಜೆ ದೂಪಾರತಿ, ಪಾಲಕಿ ಉತ್ಸವ ಸಹಸ್ರಾರು ಭಕ್ತರ ಮಧ್ಯೆ ಶ್ರದ್ದಾ ಭಕ್ತಿಯಿಂದ ನೆರವೇರಿತು.

ಭಾನುವಾರ ಸಂಜೆ ಗುರುಪೂರ್ಣಿಮೆ ಅಂಗವಾಗಿ ಸಿದ್ದೇಶ್ವರನಗರದಿಂದ ಸಾಯಿಬಾಬಾ ಅವರ ಉತ್ಸವ ಮೆರವಣಿಗೆ ಹಾಗೂ ಸಾಯಿ ಸಚ್ಚರಿತ ಪದ್ಯ ಕೋಶ ಗ್ರಂಥದ ಮೆರವಣಿಗೆಯು ಸಕಲ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಕ್ರೀರಾಭಿಷೇಕ, ಪಂಚಾಮೃತ ಅಭಿಷೇಕ, ಮಂಗಲಸ್ನಾನ ಮತ್ತು ಲೋಕ ಕಲ್ಯಾಣಾರ್ಥವಾಗಿ ಸಾಯಿ ದತ್ತಾತ್ರೇಯ ಹೋಮ ನಡೆಯಿತು. ಸಾಯಿ ಬಾಬಾ ದೇವಸ್ಥಾನ ಕಮಿಟಿ ಪದಾಧಿಕಾರಿಗಳು ಇದ್ದರು.

‘ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿ’

ಶಿಗ್ಗಾವಿ: ಭಾರತೀಯ ಸಂಸ್ಕೃತಿ, ಸಂಸ್ಕಾರಗಳು ಜಗತ್ತಿಗೆ ಮಾದರಿಯಾಗಿದ್ದು, ಇವುಗಳಿಂದ ಸುಂದರ ಸಮಾಜ ನಿರ್ಮಾಣ ಮಾಡುವ ಜತೆಗೆ ಆರೋಗ್ಯಕರ ವಾಆತಾವರಣ ಸೃಷ್ಟಿಯಾಗುತ್ತಿದೆ ಎಂದು ವಿರಕ್ತಮಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಶಿದ್ದಿ ವಿನಾಯಕ ದೇವಸ್ಥಾನದಲ್ಲಿ ಸೋಮವಾರ ಶಿರಡಿ ಸತ್ಯಸಾಯಿಬಾಬಾ ಸೇವಾ ಸಮಿತಿ ವತಿಯಿಂದ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಜಾತಿ, ಮತಗಳ ಕಂದಕಗಳಿಂದ ಹೊರ ಬಂದು ನೀತಿವಂತರಾಗಿ ಬಾಳಬೇಕಾಗಿದೆ. ಯಾವುದೇ ಕಾರಣಕ್ಕೂ ದೇವರನ್ನು ವರ್ಗೀಕರಿಸಬಾರದು. ಅಂಕಗಳ ಗಳಿಕೆಗೆ ಮಕ್ಕಳನ್ನು ಸೀಮಿತಗೊಳಿಸಬೇಡಿರಿ. ಋಷಿ ಸಂಸ್ಕಾರ ಮಕ್ಕಳಿಗೆ ಕಲಿಸುವ ಮೂಲಕ ಉತ್ತಮ ಪ್ರಜೆಯನ್ನಾಗಿ ರೂಪಿಸುವದು ಮುಖ್ಯವಾಗಿದೆ ಎಂದರು.

ನಿವೃತ್ತ ಸೈನಿಕ ಐ.ಎ.ಮತ್ತೂರ ಮಾತನಾಡಿದರು. ದೆಹಲಿ ಪೊಲೀಸ್ ಇಲಾಖೆ ಎಎಸ್ಐ ಸಂಜೀವಕುಮಾರ ಟೋಮರದ ಮಾತನಾಡಿದರು. ಶಿರಡಿ ಸತ್ಯಸಾಯಿಬಾಬಾ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಉದಯಕುಮಾರ ಹೊಸಮನಿ, ಶಕುಂತಲಾ ಕೋಣಿನವರ, ಲತಾ ಫೀಶೆ, ಜಗದೀಶ ಬನ್ನಿಕೊಪ್ಪ, ಫೀರಸಾಬ್ ನದಾಫ್, ನೂರಹ್ಮದ ಮತ್ತೂರ, ನೀಲಕಂಠಪ್ಪ ಅಡರಗಟ್ಟಿ, ಎಲ್.ಬಿ.ದಳವಾಯಿ, ಸವಿತಾ ಬುಳ್ಳಕ್ಕನವರ, ಸವಿತಾ ನೆಲ್ಲಿಕೊಪ್ಪ, ಶೋಭಾ ಹಾನಗಲ್ಲ, ಕವಿತಾ ಮೋಕಾಶಿ, ವೀರಭದ್ರಪ್ಪ ಹರವಿ, ಶಿವಣ್ಣ ಮೋಟೆಬೆನ್ನೂರ ಇದ್ದರು.

ವಾರ್ಷಿಕೋತ್ಸವ

ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯ ಶೈರಣ್ಯ ನಗರದ ಶಿರಡಿ ಸಾಯಿಬಾಬಾ ಮಂದಿರದ 5ನೇ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮೆ ಸೋಮ ವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.

ಬೆಳಿಗ್ಗೆ ಮಂದಿರದಲ್ಲಿ ವಿಶೇಷ ಹೋಮ, ಹವನ, ಪೂಜಾ ಕೈಂಕರ್ಯ, ಸಂಗೀತ ಸೇವೆ, ವಿಶೇಷವಾಗಿ ಬ್ರಾಹ್ಮೀ ಮಹೂರ್ತದಲ್ಲಿ ಬಾಬಾರವರಿಗೆ ಕ್ಷೀರಾಭಿಷೇಕ ನಡೆಯಿತು. ಬಳಿಕ ಸತ್ಯನಾರಾಯಣ ಪೂಜೆ ಉದ್ಯಾಪನೆ, ದತ್ತಾತ್ರೇಯ ಹೋಮ, ಗಣ ಹೋಮವನ್ನು ನೆರವೇರಿಸಲಾಯಿತು. ಬಳಿಕ ನೈವೇದ್ಯ, ಧೂಪ ದಾರತಿ, ಪಲ್ಲಕ್ಕಿ ಉತ್ಸವ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT