ಶುಕ್ರವಾರ, ಆಗಸ್ಟ್ 6, 2021
21 °C

ಬಿಟ್ಟಿ ಚಾಕರಿ; ಪರಿಹಾರ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 2018ರ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 315 ದಲಿತ ಸಮುದಾಯದ ಕುಟುಂಬಗಳು ‘ಬಿಟ್ಟಿ ಚಾಕರಿ’ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇವರಿಗೆ ಜೀತ ಕಾನೂನು ಅಡಿಯಲ್ಲಿ ನ್ಯಾಯ ಕಲ್ಪಿಸಬೇಕು ಎಂದು ‘ಜೀತ ವಿಮುಕ್ತ ಕರ್ನಾಟಕ’ (ಜೀವಿಕ) ಸಂಘಟನೆಯ ಜಿಲ್ಲಾ ಉಸ್ತುವಾರಿ ಸಂಚಾಲಕ ನಾರಾಯಣಸ್ವಾಮಿ ಆಗ್ರಹಿಸಿದರು. 

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಜೀವಿಕ’ ಸಂಘಟನೆಯು 30 ವರ್ಷಗಳಿಂದ ಜೀತ ಪದ್ಧತಿ ನಿರ್ಮೂಲನೆಗಾಗಿ ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ. ಬಿಟ್ಟಿ ಚಾಕರಿಯು ಉತ್ತರ ಕರ್ನಾಟಕದ ಭಾಗದಲ್ಲಿ ಆಚರಣೆಯಲ್ಲಿದೆ. ಜೀತ ಪದ್ಧತಿಯಂತೆ ಅನಿಷ್ಟ ಪದ್ಧತಿಯಾಗಿರುವ ಬಿಟ್ಟಿ ಚಾಕರಿ ಬಗ್ಗೆ 2018–19ರಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಜಾತ್ರೆ, ಸಾವು, ಮದುವೆ ಇತರೆ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ದಲಿತ ಸಮುದಾಯವು ಬಿಟ್ಟಿ ಚಾಕರಿ ಮಾಢುತ್ತಿದೆ ಎಂದು ಹೇಳಿದರು. 

2020ರ ಸರ್ಕಾರದ ಅಧಿಸೂಚನೆಯಲ್ಲಿ ರಾಜ್ಯದಲ್ಲಿ ಬಿಟ್ಟಿ ಚಾಕರಿ ಆಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಜೀತ ವ್ಯಾಪ್ತಿಯೊಳಗೆ ಸೇರಿಸಲಾಗಿದೆ. ಹೀಗಾಗಿ ಪಿಡಿಒಗಳು ‘ಬಿಟ್ಟಿ ಚಾಕರಿ’ ಪ್ರಕರಣ ಕಂಡು ಬಂದರೆ, ಜೀತದಾಳುಗಳ ವಿವರವನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ತಹಶೀಲ್ದಾರ್‌ ಅಥವಾ ಉಪವಿಭಾಗಾಧಿಕಾರಿಗೆ ಸಲ್ಲಿಸಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ಆದಿಜಾಂಬವ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ಮಾಳಗಿ, ‘ಜೀವಿಕ’ ಜಿಲ್ಲಾ ಸಹ ಸಂಚಾಲಕ ಜಿ.ವಿ.ರವಿಕುಮಾರ, ನರಸಿಂಹಮೂರ್ತಿ, ಸುರೇಶ, ವಕೀಲ ಎಸ್‌.ಜಿ.ಹೊನ್ನಪ್ಪನವರ, ಆದಿ ಜಾಂಬವ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯಗಾಂಧಿ ಸಂಜೀವಣ್ಣನವರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.