ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರೆಮಲೆನಾಡಿನಲ್ಲಿ ಹಲಸು ಹಣ್ಣಿನ ದರ್ಬಾರ್‌

ಮಾರುಕಟ್ಟೆಯಲ್ಲಿ ಘಮ ಘಮಿಸುವ ಹಣ್ಣುಗಳು: ಗ್ರಾಹಕರಿಂದ ಭಾರಿ ಬೇಡಿಕೆ
Last Updated 29 ಜುಲೈ 2021, 15:25 IST
ಅಕ್ಷರ ಗಾತ್ರ

ಅಕ್ಕಿಆಲೂರು: ಅರೆಮಲೆನಾಡು ಪ್ರದೇಶವಾದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲೀಗ ಹಲಸು ಹಣ್ಣಿನ ದರ್ಬಾರು ಕಂಡುಬರುತ್ತಿದೆ.ಕೈಗಳಿಗೆ ಕೊಬ್ಬರಿ ಎಣ್ಣೆ ಸವರಿಕೊಂಡು ಹಲಸಿನ ಹಣ್ಣಿನ ತೊಳೆ ಬಿಡಿಸಿ ಮನೆ ಮಂದಿಗೆಲ್ಲಾ ನೀಡುವ ದೃಶ್ಯ ಸಾಮಾನ್ಯವಾಗಿದೆ.

‘ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು’ ಎಂಬ ಗಾದೆ ಪ್ರಚಲಿತದಲ್ಲಿದೆ. ಹಣ್ಣುಗಳ ರಾಜ ಮಾವು ತನ್ನ ಪರ್ವ ಮುಗಿಸಿ ತೆರೆಯ ಮರಿಗೆ ಸಾಗಲಾರಂಭಿಸುತ್ತಿದ್ದಂತೆಯೇ ಪ್ರಧಾನ ಭೂಮಿಕೆಗೆ ಬರುವ ಆರೋಗ್ಯವರ್ಧಕ, ಸರ್ವೋಪಯೋಗಿಯೂ ಆಗಿರುವ ಹಲಸಿನ ಹಣ್ಣು ಮಾರುಕಟ್ಟೆಯಲ್ಲಿ ತನ್ನ ಪಾರುಪತ್ಯ ಮೆರೆಯಲಾರಂಭಿಸಿದೆ.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿನ ಗ್ರಾಮಗಳ ಮನೆಯಂಗಳ, ಹಿತ್ತಲು, ಗದ್ದೆ-ತೋಟಗಳ ಬದು, ಹಾಡಿ, ಕಾನುಗಳಲ್ಲಿ ಬೃಹದಾಕಾರದ ಹಲಸಿನ ಮರಗಳು ಕಾಣಸಿಗುತ್ತವೆ. ಕಾಂಡಗಳಿಗೆ ಗೆಜ್ಜೆ ಕಟ್ಟಿದಂತೆ ದೊಡ್ಡದಾಗಿ ಗೊಂಚಲು, ಗೊಂಚಲಾಗಿ ಬೆಳೆಯುವ ಹಲಸಿನ ಕಾಯಿಗಳು ಸಾಮಾನ್ಯವಾಗಿ ಜೂನ್, ಜುಲೈ ತಿಂಗಳಿನಲ್ಲಿ ಕಟಾವಿಗೆ ಬರುತ್ತವೆ.

ಕಾಯಿ ಮಾಗುತ್ತಿದ್ದಂತೆಯೇ ಅದರ ಪರಿಮಳ ಬಹಳಷ್ಟು ದೂರ ಸಾಗುವುದರಿಂದ ಹಣ್ಣು ಪ್ರಿಯರನ್ನು ಹಾಗೂ ಪ್ರಾಣಿ, ಪಕ್ಷಿಗಳನ್ನು ತನ್ನತ್ತ ಸೆಳೆಯುತ್ತದೆ. ಮುಂಗಾರಿನ ಮಳೆ ಆರಂಭವಾಗುತ್ತಿದ್ದಂತೆಯೇ ಮಣ್ಣಿನ ಪರಿಮಳದೊಂದಿಗೆ ಮಲೆನಾಡಿನಾದ್ಯಂತ ಹಲಸಿನ ಪರಿಮಳವೂ ಸೇರಿ ಆಹ್ಲಾದ ಉಂಟು ಮಾಡುತ್ತದೆ.

ಮಲೆನಾಡಲ್ಲಿ ಹೇರಳ:

ಕಡಿಮೆ ಮಳೆ, ಬೆಚ್ಚಗಿನ ಹಾಗೂ ತೇವದಿಂದ ಕೂಡಿದ ಹವಾಗುಣಕ್ಕೆ ಹೊಂದಿಕೊಳ್ಳುವ ಹಲಸಿನ ಮರಗಳು ಮಲೆನಾಡ ಪ್ರದೇಶದಲ್ಲಿ ಹೇರಳವಾಗಿವೆ. ಈ ಭಾಗದಲ್ಲಿ 50ರಿಂದ 300ಕ್ಕೂ ಅಧಿಕ ಹಣ್ಣುಗಳನ್ನು ಕೊಡುವ ದೊಡ್ಡ ಗಾತ್ರದ ಹಲಸಿನ ಮರಗಳಿವೆ. ಕೆಲವೊಮ್ಮೆ ಒಂದೇ ಹಣ್ಣು 150-160 ಕೆ.ಜಿ.ವರೆಗೆ ತೂಗುತ್ತದೆ.

‘ಆರೋಗ್ಯದ ಹಿತದೃಷ್ಟಿಯಿಂದ ಬಹಳ ಉಪಯುಕ್ತವಾದ ಈ ಹಲಸಿನಿಂದ ಹಲವಾರು ಸ್ವಾದಿಷ್ಟ ಖಾದ್ಯ ತಯಾರಿಸಬಹುದಾಗಿದೆ. ಹಲಸಿನ ಹಪ್ಪಳ, ಸಂಡಿಗೆ, ಚಿಪ್ಸ್, ಜಾಮ್, ಪಾನಕ, ಉಪ್ಪಿನಕಾಯಿ, ದೋಸೆ, ಪಾಯಸ ಖಾದ್ಯಪ್ರಿಯರ ನಾಲಿಗೆಯಲ್ಲಿ ನೀರೂರಿಸುತ್ತವೆ. ಇದರ ತೊಳೆಗಳನ್ನು ಉಪ್ಪು, ಖಾರದಲ್ಲಿ ಅದ್ದಿ ಒಣಗಿಸಿ ಕರಿದು ತಿಂದರೆ ಸಿಗುವ ರುಚಿ ವರ್ಣನಾತೀತ’ ಎನ್ನುತ್ತಾರೆ ಅಕ್ಕಿಆಲೂರಿನ ಗೃಹಿಣಿ ಜ್ಯೋತಿ ಮುತ್ತಿನಕಂತಿಮಠ.

ಹೇರಳ ಪೋಷಕಾಂಶ:

‘ಈ ಹಣ್ಣಿನ ಬೀಜವೂ ನಿರುಪಯುಕ್ತವಲ್ಲ. ಬೀಜದಿಂದ ಸಾಂಬಾರ್‌, ಉಪ್ಪಿಟ್ಟು, ರೊಟ್ಟಿ, ಚಟ್ನಿ ಮಾಡುವುದಲ್ಲದೇ ಹಸಿ ಬೀಜವನ್ನು ಉಪ್ಪು, ನೀರಿನೊಂದಿಗೆ ಬೇಯಿಸಿ, ಒಣಗಿದ ಬೀಜವನ್ನು ಹುರಿದು ತಿಂದರೆ ಸಿಗುವ ಮಜವೇ ಬೇರೆ. ಹೇಗೆ ಬಳಸಿ ತಿಂದರೂ ಈ ಹಣ್ಣು ಮತ್ತು ಅದರ ಬೀಜದಿಂದ ದೇಹಕ್ಕೆ ಹೇರಳವಾದ ಪೋಷಕಾಂಶಗಳು ಸಿಗುತ್ತವೆ’ ಎನ್ನುತ್ತಾರೆ ಗೃಹಿಣಿ ಬೃಂದಾ ಕಬ್ಬೂರು.

‘ಹಲಸಿನ ಹಣ್ಣಿನ ಸಿಪ್ಪೆ ಮತ್ತು ಎಲೆ ಜಾನುವಾರುಗಳಿಗೆ ಮೇವಾಗಿದೆ. ಇದರ ಕಟ್ಟಿಗೆ ಬೆಲೆಬಾಳುವುದಾಗಿದ್ದು ಅದರ ಆಕರ್ಷಕ ಬಣ್ಣದಿಂದಾಗಿ ಮುಖ್ಯ ಬಾಗಿಲು ಮತ್ತು ಶೋಕೇಸುಗಳಿಗೆ ಹೆಚ್ಚು ಬಳಕೆಯಲ್ಲಿದೆ. ಹೋಮ, ಹವನಗಳಲ್ಲಿ ಇದರ ಕಟ್ಟಿಗೆಯನ್ನು ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿ ಎಲ್ಲ ವಿಧದಲ್ಲಿಯೂ ಉಪಯುಕ್ತವಾದ ಈ ಹಲಸನು ನೆಟ್ಟರೆ ರೈತನಿಗೆ ಆರೋಗ್ಯ ಮತ್ತು ಲಾಭ ಎರಡೂ ಇದೆ’ ಎನ್ನುತ್ತಾರೆ ರೈತ ಲಕ್ಷ್ಮಣ ಹೊನ್ನಣ್ಣನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT