ಹಾವೇರಿ: ‘ಯಾವ ರಾಜ್ಯದಲ್ಲಿ ಚುನಾವಣೆ ಪ್ರಾರಂಭವಾಗುತ್ತದೋ ಆ ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ಇ.ಡಿ, ಐ.ಟಿ ದಾಳಿಯಾಗುತ್ತಿವೆ. ಬಿಜೆಪಿಯವರ ಚುನಾವಣೆಯ ತಂತ್ರವೇ ಇದಾಗಿದೆ. ಗುಜರಾತ್ ಘಟನೆ ನೈಜ ಚಿತ್ರಣ ಮಾಡಿದ್ರು ಅಂತ ಹೇಳಿ ಬಿಬಿಸಿಯವರನ್ನೇ ಬಿಡಲಿಲ್ಲ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಣೆಬೆನ್ನೂರು ತಾಲ್ಲೂಕು ಹಲಗೇರಿ ಗ್ರಾಮದಲ್ಲಿ ಬುಧವಾರ ‘ಪಂಚರತ್ನ ರಥಯಾತ್ರೆ’ಯಲ್ಲಿ ಅವರು ಮಾತನಾಡಿ, ಬಿಜೆಪಿಯವರು ಮಹಾನ್ ಸತ್ಯ ಹರಿಶ್ಚಂದ್ರರು. ಚುನಾವಣೆಗೆ ಅವರು ದುಡ್ಡೇ ಖರ್ಚು ಮಾಡಲ್ಲ, ಕೈ ಮುಗಿದುಕೊಂಡು ಹೋಗಿ ಚುನಾವಣೆ ನಡೆಸುತ್ತಾರೆ. ಅಭಿವೃದ್ಧಿ ನೋಡಿ ಅಲ್ಲ, ನರೇಂದ್ರ ಮೋದಿಯವರ ಫೋಟೊ ತೋರಿಸಿ ಬಿಜೆಪಿಗೆ ಮತ ಕೇಳುವ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.
ಭ್ರಷ್ಟಾಚಾರಕ್ಕೆ ದಾಖಲೆ ಇಡೋಕಾಗುತ್ತಾ?
‘ಕಮಿಷನ್ ತಗೊಂಡಿರೋದಕ್ಕೆ ದಾಖಲೆ ಕೊಡೋಕಾಗುತ್ತಾ? ಕಮಿಷನ್ ಅನ್ನು ವೈಟ್ ಆಂಡ್ ವೈಟ್ ತಗೊಂಡಿದಾರಾ? ಎಲ್ಲಾ ಬ್ಲಾಕ್ ಮನಿ ತಗೋತಾರೆ. ವರ್ಗಾವಣೆಗೆ ಸಂಬಂಧಿಸಿದಂತೆ ಸ್ಯಾಂಟ್ರೋ ರವಿ ಅರೆಸ್ಟ್ ಮಾಡಿದ್ರಲ್ಲಾ, ವಿಡಿಯೊಗಳು ಬಂದವಲ್ಲಾ.. ಅದಕ್ಕಿಂತ ದಾಖಲೆ ಬೇಕಾ ಬಿಜೆಪಿಯವರ ಭ್ರಷ್ಟಾಚಾರದ ಬಗ್ಗೆ’ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಬಿಜೆಪಿ ಶಾಸಕನೇ ಟೆಂಡರ್ ಪ್ರೊಸೆಸ್‌ನಲ್ಲಿ ಸಾವಿರಾರು ಕೋಟಿ ಅವ್ಯವಹಾರ ಆಗಿದೆ ಅಂತ ಚರ್ಚೆ ಮಾಡಿದ ಮೇಲೆ ಈ ಸರ್ಕಾರದ ಮೇಲೆ ಏನು ಚರ್ಚೆ ಮಾಡ್ತೀರಿ? ಅಂತಿಮವಾಗಿ ಜನತಾ ನ್ಯಾಯಾಲಯ ಇದೆ. ಮುಂದಿನ ಚುನಾವಣೆಯಲ್ಲಿ ಜನರೇ ತೀರ್ಪು ಕೊಡಬೇಕು ಅಷ್ಟೆ ಎಂದು ಹೇಳಿದರು.
ರಮ್ಯಾ ನನ್ನ ಸಹೋದರಿ ಇದ್ದಂತೆ: ರಮ್ಯ ಅಥವಾ ನಟ ಸುದೀಪ್ ಚನ್ನಪಟ್ಟಣದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಮ್ಯಾ ನನ್ನ ಸಹೋದರಿ ಸಮಾನ, ನನ್ನ ವಿರುದ್ದ ನಿಲ್ಲಬೇಕು ಅಂತ ಇದ್ದರೆ ನಿಲ್ಲಬಹುದು. ಜನ ತೀರ್ಮಾನ ತೆಗೆದುಕೊಳ್ಳುತ್ತಾರೆ. ಬಿಜೆಪಿ–ಕಾಂಗ್ರೆಸ್ ಪಕ್ಷಗಳ ಬಗ್ಗೆ ಜನರಿಗೆ ಭ್ರಮನಿರಸನವಾಗಿದೆ. ರಾಜಕೀಯ ಬ್ರಹ್ಮಾಸ್ರ್ರ ನಮ್ಮ ಮೇಲೆ ಬಿಟ್ಟರೂ ಜನತಾದಳದ ಗೆಲುವನ್ನು ತಡೆಯೋಕೆ ಸಾಧ್ಯವಿಲ್ಲ’ ಎಂದು ಹೇಳಿದರು.
ಓದಿ...
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.