ಹಾವೇರಿ: ನಗರದಲ್ಲಿ ಜ.6ರಿಂದ 8ರವರೆಗೆ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ₹4.66 ಕೋಟಿ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.
ಈ ಹೆಚ್ಚುವರಿ ಅನುದಾನವನ್ನು 2023–24ನೇ ಸಾಲಿನ ಪೂರಕ ಅಂದಾಜುಗಳಲ್ಲಿ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಹಾವೇರಿ ಸಾಹಿತ್ಯ ಸಮ್ಮೆಳನಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹20 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇದು ಕಳೆದ 85 ಸಮ್ಮೇಳನಗಳಿಗೆ ನೀಡಿದ್ದ ಅನುದಾನದಲ್ಲೇ ಗರಿಷ್ಠ ಮೊತ್ತವಾಗಿತ್ತು. ಆದರೆ, ಈ ಮೊತ್ತವನ್ನೂ ಮೀರಿ ₹5 ಕೋಟಿ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿತ್ತು.
₹5 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ 2023ರ ಫೆಬ್ರುವರಿಯಲ್ಲಿ ಪ್ರಸ್ತಾವ ಕಳುಹಿಸಿತ್ತು. ಆದರೆ, ಆರ್ಥಿಕ ಇಲಾಖೆ ಜುಲೈ ತಿಂಗಳಲ್ಲಿ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು. ಇದರಿಂದ ಸಮ್ಮೇಳನಕ್ಕಾಗಿ ಶ್ರಮಿಸಿದ ಕೆಲವು ಕಲಾವಿದರು, ಗುತ್ತಿಗೆದಾರರಿಗೆ ಹಣ ಸಿಗದೆ ಸಂಕಷ್ಟಕ್ಕೀಡಾಗಿದ್ದರು.
’ಹಾವೇರಿ ಜಿಲ್ಲಾಡಳಿತಕ್ಕೆ ಕೆ.ಎಸ್.ಎಂ.ಸಿ.ಎ. (ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಲಿ.,) ಸಲ್ಲಿಸಿದ್ದ ನಾಲ್ಕು ಬಿಲ್‌ಗಳಲ್ಲಿ ಮೂರು ಬಿಲ್‌ಗಳಿಗೆ ಹಣ ಪಾವತಿ ಮಾಡಲಾಗಿತ್ತು. ಹೆಚ್ಚುವರಿ ಅನುದಾನ ಬಿಡುಗಡೆಯಾದ ತಕ್ಷಣ ಬಾಕಿ ಬಿಲ್ ವಿಲೇವಾರಿ ಮಾಡುತ್ತೇವೆ’ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದರು.
ಕಲಾವಿದರು, ಗುತ್ತಿಗೆದಾರರಿಗೆ ಹಣ ಸಿಗದೆ ಪರದಾಡುತ್ತಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.