ಗುರುವಾರ , ಮೇ 26, 2022
22 °C

ಈಶ್ವರಪ್ಪ ರಾಜೀನಾಮೆಗೆ ವಿಧಾನಸಭೆಯ ಮಾಜಿ ಸ್ಪೀಕರ್‌ ಕೋಳಿವಾಡ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಇಲ್ಲದಿದ್ದರೆ, ಕಾಂಗ್ರೆಸ್‌ ವತಿಯಿಂದ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಕೂರುತ್ತೇವೆ ಎಂದು ವಿಧಾನಸಭೆಯ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಎಚ್ಚರಿಕೆ ನೀಡಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಡೆತ್‌ ನೋಟ್‌ನಲ್ಲಿ ಸಂತೋಷ್‌ ಪಾಟೀಲ ಅವರ ಸಹಿ ಇಲ್ಲ ಎಂದು ಹೇಳುತ್ತಾ, ರಾಜೀನಾಮೆ ಕೊಡುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ಪೊಲೀಸರು ಸರಿಯಾದ ಸೆಕ್ಷನ್‌ಗಳನ್ನು ಹಾಕಿಲ್ಲ, ಜತೆಗೆ ಮುಂದಿನ ದಿನಗಳಲ್ಲಿ ಬಿ–ರಿಪೋರ್ಟ್‌ ಸಲ್ಲಿಸಿ, ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಕಾಣುತ್ತಿದೆ ಎಂದು ಆರೋಪಿಸಿದರು. 

ಈಶ್ವರಪ್ಪ ಅವರ ಮೌಖಿಕ ಒಪ್ಪಿಗೆಯ ಮೇರೆಗೆ ಸಂತೋಷ್‌ ಪಾಟೀಲ ₹4 ಕೋಟಿಯ ಕಾಮಗಾರಿ ಮಾಡಿದ್ದರು. ಅನುದಾನ ಬಿಡುಗಡೆಗೆ ಶೇ 40ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದು ಸಂತೋಷ್‌ ಅವರು ರಾಷ್ಟ್ರಪತಿ, ಪ್ರಧಾನಿ, ಮೋದಿ ಅವರಿಗೆ ಪತ್ರ ಬರೆದಿದ್ದರು. ನ್ಯಾಯ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ‘ಟೆನ್‌ ಪರ್ಸೆಂಟ್‌’ ಸರ್ಕಾರ ಎಂದು ಟೀಕಿಸಿದ್ದರು. ಈಗ ಅವರದೇ ಪಕ್ಷದ ರಾಜ್ಯ ಸರ್ಕಾರದ ಸಚಿವರು ಶೇ 40ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರು ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟ ಬಿಜೆಪಿ ಸರ್ಕಾರದಲ್ಲಿ ಶೇ 10ರಷ್ಟು ಕಮಿಷನ್‌ ಕೊಟ್ಟ ನಂತರವೇ ಅನುದಾನ ಬಿಡುಗಡೆ ಮಾಡುವ ಸಂಪ್ರದಾಯವಿದೆ ಎಂದು ಜರಿದರು. 

ತೈಲ ಉತ್ಪನ್ನ ಮತ್ತು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಜನಸಾಮಾನ್ಯರ ಪಾಡು ಹೇಳತೀರದಾಗಿದೆ. ಇದನ್ನು ಮರೆಮಾಚಲು ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಕೋಮು ಸೌಹಾರ್ದ ಹಾಳುಗೆಡವುತ್ತಿದ್ದಾರೆ. ರೈತ ವಿರೋಧಿ ಮತ್ತು ಬಡವರ ವಿರೋಧಿಯಾಗಿರುವ ಬಿಜೆಪಿಗೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಮುಖಂಡರಾದ ಎಂ.ಎಂ.ಮೈದೂರ, ಎಸ್‌.ಎಫ್‌.ಎನ್‌.ಗಾಜೀಗೌಡ್ರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು