ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯೇ ಮೀಸಲಾತಿಯ ತುಪ್ಪ ನೀಡ್ತಾರೆ: ನಿರಂಜನಾನಂದ ಸ್ವಾಮೀಜಿ ವಿಶ್ವಾಸ

ಕುರುಬರಿಗೆ ಎಸ್‌ಟಿ ಮೀಸಲಾತಿಗಾಗಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭ
Last Updated 15 ಜನವರಿ 2021, 18:18 IST
ಅಕ್ಷರ ಗಾತ್ರ

ಹಾವೇರಿ: ಹಾಲುಮತ ಸಮಾಜದ ಗಟ್ಟಿಹಾಲನ್ನು ಶೇಖರಿಸಿ, ಮೊಸರನ್ನು ಕಡೆದು ಬಂದ ಬೆಣ್ಣೆಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆ. ಆ ಬೆಣ್ಣೆಯನ್ನು ಬಿ.ಎಸ್‌.ಯಡಿಯೂರಪ್ಪನವರು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಾರೆ. ಆ ಬೆಣ್ಣೆಯನ್ನು ಕಾಸಿ ‘ಎಸ್‌.ಟಿ. ಮೀಸಲಾತಿ’ ಎಂಬ ತುಪ್ಪವನ್ನು ಪ್ರಧಾನಿ ನರೇಂದ್ರ ಮೋದಿ ನೀಡಲಿದ್ದಾರೆ’ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ಕನಕ ಗುರುಪೀಠ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಆಶ್ರಯದಲ್ಲಿಕುರುಬರ ಎಸ್‌.ಟಿ. ಮೀಸಲಾತಿಗಾಗಿ ‘ಕಾಗಿನೆಲೆಯಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಐತಿಹಾಸಿಕ ಪಾದಯಾತ್ರೆ’ಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೈಲಾರದ ಕಾರ್ಣಿಕ ನುಡಿಯ ಮಹತ್ವ ಎಂಥದ್ದು ಎಂಬುದು ನಾಡಿಗೇ ಗೊತ್ತಿದೆ. ಆ ಒಂದು ನುಡಿ ದೇಶದ ಚಿತ್ರಣವನ್ನೇ ಬದಲಿಸುವಂಥದ್ದು. ‘ಕುರುಬರು ಒಟ್ಟಾಗಿ ಹೆಜ್ಜೆ ಹಾಕಿದರೆ, ಎಸ್‌.ಟಿ. ಮೀಸಲಾತಿ ಸಿಕ್ಕಿತಲೇ ಪರಾಕ್‌’ ಎಂದು ನಾನು ಕನಕದಾಸರ ಕರ್ಮಭೂಮಿಯಲ್ಲಿ ನಿಂತು ನುಡಿದಿರುವ ಈ ಮಾತು ಅಷ್ಟೇ ಸತ್ಯವಾದುದು ಎಂದು ಹೇಳಿದರು.

ಸಮಾಜದ ಕಟ್ಟ ಕಡೆಯ ಕುರುಬನಿಗೆ ‘ಸಾಮಾಜಿಕ ನ್ಯಾಯ’ ಸಿಗಬೇಕು ಎಂದು ನಾವು ಮೀಸಲಾತಿ ಕೇಳುತ್ತಿದ್ದೇವೆ. ಇಷ್ಟು ದಿನ ನೀವು ಬೇಲಿ ಹಾರಿದ್ದೀರಿ. ಸಿಕ್ಕ ಹೊಲಗಳಲ್ಲಿ ಮೇಯ್ದಿದ್ದೀರಿ. ಇದು ತಪ್ಪಲ್ಲ. ಹಾಲುಮತದ ಕುರಿಗಳನ್ನು ಹಾದಿ ತಪ್ಪಿಸಿದ್ದು ಮೇಕೆಗಳು ಎಂದು ಮಾರ್ಮಿಕವಾಗಿ ನುಡಿದರು. ಮೇಕೆ ಹೋದ ಹಾದಿಯಲ್ಲಿ ಕುರಿಗಳು ಹೋಗುತ್ತವೆ. ಹೀಗಾಗಿ ಕುರಿಹಿಂಡಿನ ಪಾದಯಾತ್ರೆ ಹಳಿ ತಪ್ಪದೆ ಗುರಿ ಮುಟ್ಟಬೇಕೆಂದು, ಮುಂದೆ ನಾನು, ಹಿಂದೆ ಈಶ್ವರಾನಂದಪುರಿ ಸ್ವಾಮೀಜಿ ಕಾವಲು ಕಾಯುತ್ತಾ ಬರುತ್ತೇವೆ ಎಂದಾಗ ಸಭಿಕರು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.

ಫೆ.7ರಂದು ಬೆಂಗಳೂರಿನಲ್ಲಿ ನಡೆಯುವ ಪಾದಯಾತ್ರೆಯ ಸಮಾರೋಪದಲ್ಲಿ 10 ಲಕ್ಷ ಜನ ಸೇರಲಿದ್ದಾರೆ. ನ್ಯಾಯಯುತವಾಗಿ ಸಿಗಬೇಕಾದ ಎಸ್‌.ಟಿ. ಮೀಸಲಾತಿಯ ಹಕ್ಕನ್ನು ಕೇಳುತ್ತಿದ್ದೇವೆ. ಹೀಗಾಗಿ ಕೇಂದ್ರ ಸರ್ಕಾರ ಕೊಟ್ಟೇ ಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾದಯಾತ್ರೆ:ಕಾಗಿನೆಲೆಯ ಕನಕದಾಸರ ಗುಡಿಗೆ ಪೂಜೆ ಸಲ್ಲಿಸಿ, ತೇರಿನಲ್ಲಿದ್ದ ಕನಕ ಮೂರ್ತಿಗೆ ಪುಷ್ಪಾರ್ಚನೆ ಮಾಡಿ, 340 ಕಿ.ಮೀ. ದೂರದ ‘ಐತಿಹಾಸಿಕ ಪಾದಯಾತ್ರೆ’ಗೆ ಚಾಲನೆ ನೀಡಲಾಯಿತು. ಪಾದಯಾತ್ರೆಯಲ್ಲಿ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಸಾವಿರಾರು ಕುರುಬ ಸಮುದಾಯದವರು ಪಾಲ್ಗೊಂಡರು.

‘ಕೃಷ್ಣನೇ ತಿರುಗಿದ, ಮೋದಿ ಬಗ್ಗದೇ ಇರ್ತಾರಾ’

‘ಕನಕದಾಸರ ಭಕ್ತಿಗೆ ಉಡುಪಿಯ ಶ್ರೀಕೃಷ್ಣನೇ ತಿರುಗಿದ. ಕನಕಭಕ್ತರ ಈ ಹೋರಾಟಕ್ಕೆ ಪ್ರಧಾನಿ ಮೋದಿ ಬಗ್ಗದೇ ಇರ್ತಾರಾ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಭಕ್ತಿಗೆ ಕನಕದಾಸರು, ಶಕ್ತಿಗೆ ಸಂಗೊಳ್ಳಿ ರಾಯಣ್ಣ. ಹೀಗಾಗಿ ಭಕ್ತಿ–ಶಕ್ತಿಯನ್ನೊಳಗೊಂಡ ನಮ್ಮ ಹೋರಾಟಕ್ಕೆ ರಾಜಕೀಯ ಇಚ್ಚಾಶಕ್ತಿಯೂ ದೊರೆತಿದೆ. ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಎಂಬ ಬೇಧಭಾವವಿಲ್ಲದೆ ಎಲ್ಲ ಸಚಿವರು, ಶಾಸಕರು, ಜನಪ್ರತಿನಿಧಿಗಳು ಒಗ್ಗೂಡಿದ್ದೇವೆ. ನಾವು ಈ ಹೋರಾಟದಲ್ಲೂ ರಾಜಕೀಯ ಮಾಡಿದರೆ, ಕನಕದಾಸ ಮತ್ತು ರಾಯಣ್ಣ ನಮ್ಮನ್ನು ಕ್ಷಮಿಸಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜತೆ ಮಾತನಾಡಿ, ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ. ನರೇಂದ್ರ ಮೋದಿ ಮತ್ತು ಅಮಿತ್‌ಶಾ ಅವರಿಗೂ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT