ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ಕೆಎಚ್‌ಬಿ ಬಡಾವಣೆಯಲ್ಲಿ ಸಮಸ್ಯೆಗಳ ಬವಣೆ

ಮುಕ್ತೇಶ್ವರ ಪಿ. ಕೂರಗುಂದಮಠ
Published 29 ಜನವರಿ 2024, 7:42 IST
Last Updated 29 ಜನವರಿ 2024, 7:42 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ಮಾಗೋಡ ರಸ್ತೆಯ ಕರ್ನಾಟಕ ಗೃಹ ಮಂಡಳಿಯಿಂದ ನಗರಸಭೆ ವ್ಯಾಪ್ತಿಯ 1ನೇ ಹಂತದಲ್ಲಿ ರಿ.ಸ.ನಂ. 861, 864 ಮತ್ತು 865ರಲ್ಲಿ ಒಟ್ಟು ಕ್ಷೇತ್ರ 44 ಎಕರೆ 33.5 ಗುಂಟೆಯಲ್ಲಿ 2008–09ರಲ್ಲಿ ಅಭಿವೃದ್ಧಿಪಡಿಸಿ 538 ನಿವೇಶನಗಳನ್ನು ನಿವಾಸಿಗಳಿಗೆ ಹಂಚಿಕೆ ಮಾಡಿದ್ದು ಬಿಟ್ಟರೆ ಇಲ್ಲಿವರೆಗೂ ಯಾವ ಅಭಿವೃದ್ಧಿಯೂ ಕಂಡಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಇಲ್ಲಿನ ನಿವಾಸಿಗಳು ಮೂಲಸೌಲಭ್ಯಗಳಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. 

2009ರಿಂದ ಒಂದು ಹನಿ ನೀರು ನಿವಾಸಿಗಳಿಗೆ ಪೂರೈಕೆಯಾಗಿಲ್ಲ. 24 ವಿದ್ಯುತ್‌ ಪರಿವರ್ತಕಗಳಲ್ಲಿ 4 ಮಾತ್ರ ಸರಿಯಾಗಿವೆ. ಒಳಚರಂಡಿ, ರಸ್ತೆ, ಉದ್ಯಾನ ಹದಗೆಟ್ಟಿವೆ. ನೀರು ಇಲ್ಲದೆ ಬಡಾವಣೆ ನಿವಾಸಿಗಳು ಪರದಾಡುವಂತಾಗಿದೆ. ಸಮೀಪದ ಮಾಗೋಡ ಮುಖ್ಯ ರಸ್ತೆಯ ಬದಿಗೆ ನಗರಕ್ಕೆ ಸರಬರಾಜು ಆಗುವ ತುಂಗಭದ್ರಾ ನದಿ ನೀರಿನ ಮುಖ್ಯ ಪೈಪ್‌ ಲೈನ್‌ ಇದ್ದರೂ ನದಿಯ ನೀರು ಪೂರೈಕೆಯಾಗಿಲ್ಲ.

‘ಡಾಂಬರು ಕಿತ್ತು ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಬೋರ್‌ವೆಲ್‌ ನೀರೇ ಗತಿಯಾಗಿದೆ. ಇಲ್ಲವಾದರೆ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ತರಬೇಕು. ವಿದ್ಯುತ್‌ ಕೈಕೊಟ್ಟಾಗ ಟ್ಯಾಂಕರ್‌ನಿಂದ ನೀರು ತರಿಸುವಂತಾಗಿದೆ’ ಎನ್ನುತ್ತಾರೆ ವಿ.ಎನ್‌. ಬಡಕರಿಯಪ್ಪನವರ ಹಾಗೂ ಸಿದ್ದಪ್ಪ ಚೊಕ್ಕನಗೌಡ್ರ.

ವಸತಿ ಸಚಿವರಿಗೂ ಮನವಿ:

‘ಖಾಲಿ ನಿವೇಶನಗಳಲ್ಲಿ ಜಾಲಿ ಮುಳ್ಳಿನ ಕಂಟಿಗಳು ಬೆಳೆದಿವೆ. ಕಳ್ಳಕಾಕರ ಕಾಟ ಹೆಚ್ಚಾಗಿದೆ. ಮೂಲಸೌಲಭ್ಯಗಳಿಗೆ ಆಗ್ರಹಿಸಿ, ಜನತಾ ದರ್ಶನ ಕಾರ್ಯಕ್ರಮಗಳಲ್ಲಿ ವಸತಿ ಖಾತೆ ಸಚಿವ ಜಮೀರ್‌ ಅಹಮದ್‌ ಹಾಗೂ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಶಾಸಕ ಪ್ರಕಾಶ್ ಕೋಳಿವಾಡ ಅವರಿಗೂ ಮನವಿ ಮಾಡಿದ್ದೇವೆ. ಯಾವ ಅಭಿವೃದ್ಧಿ ಕಾರ್ಯಗಳೂ ಆಗಿಲ್ಲ’ ಎಂದು ಗೃಹ ನಿರ್ಮಾಣ ಮಂಡಳಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ದೂರಿದರು.

ಬಸ್‌ ಸಂಚಾರ ಸ್ಥಗಿತ:

‘ಬಸ್‌, ಆಟೊ ಸೌಕರ್ಯ ಕೂಡ ಇಲ್ಲ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಈ ಬಗ್ಗೆ ವಾಕರಾರ ಸಾರಿಗೆ ಸಂಸ್ಥೆ ಉಪಾಧ್ಯಕ್ಷರಿಗೆ ಮನವಿ ಮಾಡಿದಾಗ ಒಂದು ಬಸ್‌ ಬಿಟ್ಟಿದ್ದರು. ಒಂದು ವಾರ ಓಡಾಡಿ ಕೆಲ ದಿನಗಳಲ್ಲಿಯೇ ಸಂಚಾರ ಸ್ಥಗಿತಗೊಂಡಿತು. ಡಿವೈಡರ್‌ ರಸ್ತೆಯ ವಿದ್ಯುತ್‌ ಕಂಬಗಳು ಬೀಳುವ ಹಂತ ತಲುಪಿವೆ. ತಂತಿ ಜೋತು ಬಿದ್ದಿವೆ’ ಎಂದು ನಿವಾಸಿಗಳು ಸಮಸ್ಯೆ ತೋಡಿಕೊಂಡಿದ್ದಾರೆ.  

‘ಕರ್ನಾಟಕ ಗೃಹ ಮಂಡಳಿ ಬಡಾವಣೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಹೌಸಿಂಗ್‌ ಬೋರ್ಡ್‌ ಎಂಜಿನಿಯರ್‌, ಪೌರಾಯುಕ್ತರು ಜ. 11ರಂದು ಆಗಮಿಸಿ ಬಡಾವಣೆಯ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಿ ಅತಿ ಶೀಘ್ರದಲ್ಲಿ ನಿರ್ಧಾರ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದಾರೆ ಎಂದು ಗೃಹ ನಿರ್ಮಾಣ ಮಂಡಳಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಬಡಿಗೇರ ತಿಳಿಸಿದರು. 

ರಾಣೆಬೆನ್ನೂರಿನ ಮಾಗೋಡ ರಸ್ತೆಯ ಗೃಹ ನಿರ್ಮಾಣ ಮಂಡಳಿಯ ಮೊದಲ ಹಂತದಲ್ಲಿನ ಯುಜಿಡಿ ಚೇಂಬರ್‌ ಹಾಗೂ ಅಂಡರ್‌ ಗ್ರೌಂಡ್‌ ಟ್ಯಾಂಕ್‌ ಹಾಳಾಗಿದೆ
ರಾಣೆಬೆನ್ನೂರಿನ ಮಾಗೋಡ ರಸ್ತೆಯ ಗೃಹ ನಿರ್ಮಾಣ ಮಂಡಳಿಯ ಮೊದಲ ಹಂತದಲ್ಲಿನ ಯುಜಿಡಿ ಚೇಂಬರ್‌ ಹಾಗೂ ಅಂಡರ್‌ ಗ್ರೌಂಡ್‌ ಟ್ಯಾಂಕ್‌ ಹಾಳಾಗಿದೆ
ಮೊದಲ ಹಂತದ ಬಡಾವಣೆಯ ನಿರ್ವಹಣೆ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹೌಸಿಂಗ್‌ ಬೋರ್ಡ್‌ ಎಇಇ ಮತ್ತು ನಾವು ಅಲ್ಲಿನ ನಿವಾಸಿಗಳೊಂದಿಗೆ ಚರ್ಚಿಸಿ ಡಿಸಿ ಅವರ ಗಮನಕ್ಕೆ ತಂದಿದ್ದೇವೆ
ಎನ್‌.ಎಚ್‌. ಕುಮ್ಮಣ್ಣನವರ ಪೌರಾಯುಕ್ತ ರಾಣೆಬೆನ್ನೂರು ನಗರಸಭೆ
ಇಲ್ಲಿನ ನಿವಾಸಿಗಳು ಇಲ್ಲಿಯವರೆಗೂ ಸಾಕಷ್ಟು ಸಹಕಾರ ನೀಡಿದ್ದಾರೆ. ಜಿಲ್ಲಾಧಿಕಾರಿ ಅವರು ಜ.16 ಅಥವಾ 17 ಸಭೆ ಕರೆದಿದ್ದು ಅಂದು ಬಡಾವಣೆ ಸಮಸ್ಯೆಗಳಿಗೆ ಪರಿಹಾರ ಸಿಗುವ ಭರವಸೆ ಇದೆ
– ರಾಮಣ್ಣ ನಂದಿ ಎಇಇ ಗೃಹ ನಿರ್ಮಾಣ ಮಂಡಳಿ
ಹಸ್ತಾಂತರ ಪ್ರಕ್ರಿಯೆ ನನೆಗುದಿಗೆ
ಮಾಜಿ ಶಾಸಕ ಅರುಣಕುಮಾರ ಪೂಜಾರ ತಮ್ಮ ನೇತೃತ್ವದಲ್ಲಿ ಗೃಹ ನಿರ್ಮಾಣ ಮಂಡಳಿ ಮತ್ತು ನಗರಸಭೆ ಅಧಿಕಾರಿಗಳ ಮತ್ತು ಇಲ್ಲಿನ ನಿವಾಸಿಗಳ ನಡುವೆ ಸಭೆ ನಡೆಸಿ ನಗರಸಭೆಗೆ ಹಸ್ತಾಂತರ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಗೃಹ ನಿರ್ಮಾಣ ಮಂಡಳಿಯಿಂದ ನಗರಸಭೆಗೆ ₹2 ಕೋಟಿ ಹಣದ ಚೆಕ್‌ ನೀಡಿದ್ದರು. ಈ ಬಡಾವಣೆಯನ್ನು ಮುಂದಿನ ನಿರ್ವಹಣೆಗೆ ರಸ್ತೆ ಹೊರ ಚರಂಡಿ ಒಳಚರಂಡಿ ವ್ಯವಸ್ಥೆ ನೀರು ಸರಬರಾಜು ಬೀದಿ ದೀಪ ವಿದ್ಯುತ್‌ ಪರಿವರ್ತಕ ದುರಸ್ತಿ ಉದ್ಯಾನಗಳನ್ನು ಹಸ್ತಾಂತರಿಸಲಾಗಿತ್ತು. ನಂತರ ನಗರಸಭೆಯವರು ಬಡಾವಣೆಯ ನಿರ್ವಹಣೆಗೆ ₹2 ಕೋಟಿ ಸಾಕಾಗುವುದಿಲ್ಲ ಹೆಚ್ಚಿನ ಹಣ ಕೊಡಿ ಎಂದು ಚೆಕ್‌ ಅನ್ನು ಹೌಸಿಂಗ್‌ ಬೋರ್ಡ್‌ಗೆ ವಾಪಸ್‌ ನೀಡಿದ್ದರಿಂದ ಹಸ್ತಾಂತರ ಪ್ರಕ್ರಿಯೆ ಮತ್ತೆ ನನೆಗುದಿಗೆ ಬಿದ್ದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT