ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾನಗಲ್ | ನಿರ್ವಹಣೆ ಕೊರತೆ: ಪಾಳು ಬಿದ್ದ ಈಜುಗೊಳ

Published 18 ಮೇ 2024, 5:44 IST
Last Updated 18 ಮೇ 2024, 5:44 IST
ಅಕ್ಷರ ಗಾತ್ರ

ಹಾನಗಲ್: ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈಜುಗೊಳ ಒಮ್ಮೆಯೂ ಬಳಕೆಯಾಗದೇ ಪಾಳು ಬಿದ್ದಿದೆ. ನಿರ್ವಹಣೆ ಇಲ್ಲದೆ ಎರಡು ಕೊಳಗಳಲ್ಲಿ ನೀರು ಪಾಚಿಗಟ್ಟಿದೆ. ಗಲೀಜು ಹರಡಿಕೊಂಡಿದೆ.

ಈಜುಗೊಳದಲ್ಲಿ ನೀರು ಬದಲಾವಣೆ ವ್ಯವಸ್ಥೆ ಇಲ್ಲದೆ ಕೊಳೆತು ನಾರುತ್ತಿದೆ. ಕೊಳಕ್ಕೆ ಅಳವಡಿಸಲಾದ ಟೈಲ್ಸ್‌ ಅಲ್ಲಲ್ಲಿ ಕಿತ್ತುಹೋಗಿವೆ. ಕಾಂಪೌಂಡ್ ಹಾರಿ ಈಜುಗೊಳ ಆವರಣ ಪ್ರವೇಶಿಸುವ ಕಿಡಿಗೇಡಿಗಳ ಕೃತ್ಯದಿಂದ ಕಿಟಕಿ ಗಾಜು, ಬಾಗಿಲು ಒಡೆದುಕೊಂಡಿವೆ. ದೊಡ್ಡವರ ಬಳಕೆಯ ಮತ್ತು ಮಕ್ಕಳ ಕೊಳ ತ್ಯಾಜ್ಯದಿಂದ ತುಂಬಿಕೊಂಡಿವೆ.

ಮಹಿಳೆ, ಪುರುಷರಿಗೆ ಪ್ರತ್ಯೇಕ ಶೌಚಾಲಯ, ಲಾಕರ್‌ ಸೌಲಭ್ಯ, ಲೈಫ್‌ಗಾರ್ಡ್‌ ಕೊಠಡಿ, ಟಿಕೆಟ್‌
ಕೌಂಟರ್‌, ಸ್ನಾನಗೃಹ, ಅತಿಥಿ ಕೊಠಡಿ, ಆಡಳಿತ ಕೊಠಡಿ, ನೀರು ಶುದ್ಧೀಕರಣ ಘಟಕ ಒಳಗೊಂಡು 1,602 ಚದರ ಅಡಿಯಲ್ಲಿ ವ್ಯವಸ್ಥಿತವಾಗಿ ಈಜುಗೊಳ ನಿರ್ಮಾಣವಾಗಿದೆ.

2017ರಲ್ಲಿ ಈಜುಗೊಳ ಉದ್ಘಾಟನೆಯಾಗಿ, ನಿರ್ವಹಣೆಗಾಗಿ ಖಾಸಗಿಯವರಿಗೆ ಹಸ್ತಾಂತರಿಸಲಾಗಿತ್ತು. ಅಂದುಕೊಂಡಂತೆ ನಿರ್ವಹಣೆ ಸಾಧ್ಯವಾಗಲಿಲ್ಲ. ಈಜುಗೊಳ ಬಳಸುವ ಭಾಗ್ಯ ಪಟ್ಟಣದ ಜನರಿಗೆ ಈವರೆಗೆ ಲಭ್ಯವಾಗಿಲ್ಲ. ವ್ಯವಸ್ಥೆಯ ವೈಫಲ್ಯದಿಂದ ಚಿಣ್ಣರು, ಯುವಕರ ಈಜುವ ಕನಸಿಗೆ ತಣ್ಣೀರೆರಚಿದಂತಾಗಿದೆ. ನಿರ್ವಹಣೆ ಮಾಡಬೇಕಿದ್ದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸುತ್ತಾರೆ.

‘ತಾಲ್ಲೂಕು ಕ್ರೀಡಾಂಗಣವು ಕ್ರೀಡಾ ವೈಭವಗಳ ವೇದಿಕೆಯಾಗಬೇಕು. ಈ ನಿಟ್ಟಿನಲ್ಲಿ ಸಕಲ ವ್ಯವಸ್ಥೆಗಳು ಸಿಗಬೇಕು. ಕ್ರೀಡಾಂಗಣ ನಿರ್ವಹಣೆಗಾಗಿ ಸ್ಥಳೀಯ ಒಬ್ಬ ನಿರುದ್ಯೋಗಿ
ಕ್ರೀಡಾಪಟುವನ್ನು ನಿಯೋಜಿಸಬೇಕು. ಅಲ್ಲದೆ, ಜಿಲ್ಲಾ ಮಟ್ಟದ ಕ್ರೀಡಾ ತರಬೇತುದಾರರು ವಾರದಲ್ಲಿ ಎರಡು ದಿನ ಭೇಟಿ ನೀಡಿ ತರಬೇತಿ ನೀಡಬೇಕು. ಇದರಿಂದ ಗ್ರಾಮೀಣ ಪ್ರತಿಭೆಗಳು
ಅನಾವರಣಗೊಳ್ಳಲಿವೆ. ಸಾಧ್ಯವಾದರೆ, ಸಮೀಪದ ಶಾಲೆ, ಕಾಲೇಜಿಗೆ ಈ ಕ್ರೀಡಾಂಗಣ ನಿರ್ವಹಣೆ, ಉಪಯೋಗಕ್ಕೆ ಅವಕಾಶ ಒದಗಿಸಬೇಕು. ಇದರಿಂದ ಕ್ರೀಡಾಂಗಣ ಚಟುವಟಿಕೆಗಳಿಂದ ಕಂಗೊಳಿಸಲಿದೆ’ ಎಂದು ಕಬಡ್ಡಿ ಪಟು ಬಸವನಗೌಡ ಲಕ್ಷ್ಮೇಶ್ವರ ಅಭಿಪ್ರಾಯಪಡುತ್ತಾರೆ.

‘ಬೃಹತ್‌ ಆನಿಕೆರೆಯ ನೀರು ಪಟ್ಟಣಕ್ಕೆ ಕುಡಿಯಲು ಬಳಸಲು ಆರಂಭವಾದ ದಿನದಿಂದ ಸ್ಥಳೀಯ ಯುವಕರು ಈಜುವ ಮಜದಿಂದ ವಂಚಿತರಾದರು. ಅದನ್ನು ನೀಗಿಸುವ ಸಲುವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಈಜುಗೊಳ ನಿರ್ಮಿಸಲಾಗಿತ್ತು. ಆದರೆ ನಿರ್ವಹಣೆ ಲೋಪದಿಂದ ಈಜು ಪ್ರಿಯರು ಮಂಕಾಗಿದ್ದಾರೆ. ಆದಷ್ಟು ಬೇಗ ಈಜುಗೊಳ ಬಳಕೆಗೆ ಯೋಗ್ಯವಾಗಬೇಕು’ ಎಂಬುದು ಸ್ಥಳೀಯ ಈಜು ಪ್ರಿಯರಾದ ಶಂಕರ ಹಂಗರಗಿ ಅಪೇಕ್ಷೆ.

ನಿರ್ವಹಣೆ ಕೊರತೆಯಿಂದಾಗಿ ಹಾನಗಲ್ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡ ಈಜುಗೊಳ ಪಾಳುಬಿದ್ದ ಸ್ಥಿತಿಯಲ್ಲಿದ್ದು ಗಲೀಜು ತುಂಬಿಕೊಂಡಿದೆ
ನಿರ್ವಹಣೆ ಕೊರತೆಯಿಂದಾಗಿ ಹಾನಗಲ್ ತಾಲ್ಲೂಕು ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡ ಈಜುಗೊಳ ಪಾಳುಬಿದ್ದ ಸ್ಥಿತಿಯಲ್ಲಿದ್ದು ಗಲೀಜು ತುಂಬಿಕೊಂಡಿದೆ
ಈಜುಗೊಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಲ್ಯಾಂಡ್‌ ಆರ್ಮಿ ಎಂಜಿನಿಯರ್‌ಗೆ ಕಾಮಗಾರಿಯ ಜವಾಬ್ದಾರಿ ಒಪ್ಪಿಸಲಾಗುತ್ತಿದ್ದು ₹50 ಲಕ್ಷ ಅನುದಾನದ ನಿರೀಕ್ಷೆ ಇದೆ
- ಲತಾ ಬಿ.ಎಚ್‌. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT