ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಜಿಲ್ಲೆಯಲ್ಲಿ ತೀವ್ರ ಬರ; ಕೈಕೊಟ್ಟ ಮುಂಗಾರು ಮಳೆಯಿಂದ ನೆಲಕಚ್ಚಿದ ಬೆಳೆ

ಬರಪೀಡಿತ ಪಟ್ಟಿಗೆ ಸೇರದ 3 ತಾಲ್ಲೂಕುಗಳು
Published 22 ಸೆಪ್ಟೆಂಬರ್ 2023, 4:51 IST
Last Updated 22 ಸೆಪ್ಟೆಂಬರ್ 2023, 4:51 IST
ಅಕ್ಷರ ಗಾತ್ರ

ಹಾವೇರಿ: ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದರು. ಈ ವರ್ಷ ಮುಂಗಾರು ಮಳೆ ಕೈಕೊಟ್ಟು, ಭೀಕರ ಬರಗಾಲದಿಂದ ಅನ್ನದಾತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಮಳೆ ಕೊರತೆಯಿಂದ ಬೆಳೆಗಳು ನೆಲಕಚ್ಚಿದ ಪರಿಣಾಮ ರೈತರು ಬೆಳೆಯನ್ನು ಟ್ರ್ಯಾಕ್ಟರ್‌ಗಳಲ್ಲಿ ಹರಗಿ, ಎರಡು ಮೂರು ಬಿತ್ತನೆ ಮಾಡಿದ್ದಾರೆ. ಈಗ ಮಳೆ ಬಂದರೂ ಒಣಗಿರುವ ಬೆಳೆ ಚಿಗುರುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಅನ್ನದಾತರು ಹತಾಶೆಗೆ ಒಳಗಾಗಿದ್ದಾರೆ.

ಜನವರಿಯಿಂದ ಮೇ ತಿಂಗಳವರೆಗೆ 120 ಮಿ.ಮೀ. ವಾಡಿಕೆ ಮಳೆಗೆ 83 ಮಿ.ಮೀ. ಮಳೆಯಾಗಿತ್ತು. ಶೇ 31ರಷ್ಟು ಕೊರತೆಯಾಗಿತ್ತು. ಜೂನ್‌ ತಿಂಗಳಲ್ಲಿ 119 ಮಿ.ಮೀ. ವಾಡಿಕೆ ಮಳೆಗೆ 48 ಮಿ.ಮೀ. ಮಳೆ ಬಿದ್ದು, ಶೇ 60ರಷ್ಟು ಮಳೆ ಕೊರತೆಯಾಯಿತು. ಇದರಿಂದ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದವು.

ಜುಲೈನಲ್ಲಿ 164 ಮಿ.ಮೀ. ವಾಡಿಕೆ ಮಳೆಗೆ ಬರೋಬ್ಬರಿ 229 ಮಿ.ಮೀ. ಧಾರಾಕಾರ ಮಳೆ ಸುರಿಯಿತು. ಆಗ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮುಖದಲ್ಲಿ ಮಂದಹಾಸ ಮೂಡಿತ್ತು. ಬಿತ್ತನೆ ಬೀಜಗಳು ಚಿಗುರಿ, ಹುಲುಸಾಗಿ ಬೆಳೆಯುವ ಹೊತ್ತಿನಲ್ಲಿ ಮಳೆ ಕೈಕೊಟ್ಟಿತು. ಆಗಸ್ಟ್‌ನಲ್ಲಿ 127 ಮಿ.ಮೀ. ವಾಡಿಕೆ ಮಳೆಗೆ ಕೇವಲ 27 ಮಿ.ಮೀ. ಮಳೆಯಾದ ಕಾರಣ ಬೆಳೆಗಳು ಒಣಗಿದವು. ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಕೈಸುಟ್ಟು ಕೊಳ್ಳುವಂತಾಯಿತು.

ಸೆಪ್ಟೆಂಬರ್ ತಿಂಗಳಲ್ಲಿ (ಸೆ.20ರವರೆಗೆ) 55 ಮಿ.ಮೀ. ವಾಡಿಕೆ ಮಳೆಗೆ ಕೇವಲ 33 ಮಿ.ಮೀ. ಮಳೆಯಾಗಿದ್ದು, ಶೇ 40ರಷ್ಟು ಮಳೆ ಕೊರತೆಯಾಗಿದೆ. ಒಟ್ಟಾರೆ ಈ ವರ್ಷ ಇಲ್ಲಿಯವರೆಗೆ ಶೇ 28ರಷ್ಟು ಮಳೆ ಕಡಿಮೆಯಾಗಿ, ರೈತರ ಕಣ್ಣಲ್ಲಿ ನೀರು ತಂದಿದೆ.

3 ತಾಲ್ಲೂಕುಗಳಿಗೆ ಅನ್ಯಾಯ: ಬರಪೀಡಿತ ಪಟ್ಟಿಯಲ್ಲಿ ಜಿಲ್ಲೆಯ ಹಿರೇಕೆರೂರು, ರಟ್ಟೀಹಳ್ಳಿ, ಹಾವೇರಿ, ರಾಣೆಬೆನ್ನೂರು, ಸವಣೂರು ಈ 5 ತಾಲ್ಲೂಕುಗಳು ಸೇರಿವೆ. ಆದರೆ, ಬ್ಯಾಡಗಿ, ಶಿಗ್ಗಾವಿ ಮತ್ತು ಹಾನಗಲ್‌ ಈ ಮೂವರು ತಾಲ್ಲೂಕುಗಳನ್ನು ಕೈಬಿಟ್ಟಿರುವುದಕ್ಕೆ ರೈತಸಂಘದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

₹25 ಸಾವಿರ ಪರಿಹಾರ ನೀಡಿ: ‘ಹಾವೇರಿ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಬೆಳೆ ವಿಮೆ ಮಧ್ಯಂತರ ಪರಿಹಾರವನ್ನು ಶೀಘ್ರ ರೈತರ ಖಾತೆಗೆ ಜಮಾ ಮಾಡಬೇಕು. ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು’ ಎಂದು ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಒತ್ತಾಯಿಸಿದ್ದಾರೆ.

ಬತ್ತಿದ ಕೊಳವೆಬಾವಿ: ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್‌ ಬಿತ್ತನೆ ಕ್ಷೇತ್ರದಲ್ಲಿ 64,940 ಹೆಕ್ಟೇರ್‌ ನೀರಾವರಿಯಿಂದ ಕೂಡಿದ್ದು, 2,65,507 ಹೆಕ್ಟೇರ್‌ ಮಳೆ ಆಶ್ರಿತ ಪ್ರದೇಶವಾಗಿದೆ. ಮಳೆ ಕೊರತೆಯಿಂದ ಅಂತರ್ಜಲ ಮಟ್ಟ ತೀವ್ರ ಕುಸಿದ್ದಿದ್ದು, ಕೊಳವೆಬಾವಿಗಳು ಬತ್ತುತ್ತಿವೆ. ಇದರಿಂದ ನೀರಾವರಿ ಪ್ರದೇಶದಲ್ಲಿರುವ ಬೆಳೆಯನ್ನು ಉಳಿಸಿಕೊಳ್ಳಲು ಕೂಡ ರೈತರು ಹೆಣಗಾಡುತ್ತಿದ್ದಾರೆ. ಮಳೆ ಆಶ್ರಿತ ಭೂಮಿಯಲ್ಲಿ ಬೆಳೆದ ಮೆಕ್ಕೆಜೋಳ, ಸೋಯಾಬಿನ್‌, ಶೇಂಗಾ, ಭತ್ತ ಒಣಗಿ ನೆಲ ಕಚ್ಚಿವೆ.

ಬೆಳೆ ನಷ್ಟದಿಂದ ರೈತರು ಕಂಗಾಲಾಗಿ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಡಲೇ ಸರ್ಕಾರ ಬರ ಪರಿಹಾರ ಒದಗಿಸಿ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಬೇಕು.
–ಮಲ್ಲಿಕಾರ್ಜುನ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೈತ ಸಂಘ

‘ಅಂದಾಜು 1.6 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ’

ಜಿಲ್ಲೆಯ ಬರಪೀಡಿತ ಪಟ್ಟಿಗೆ ಸೇರಿದ 5 ತಾಲ್ಲೂಕುಗಳಲ್ಲಿ 1.6 ಲಕ್ಷ ಹೆಕ್ಟೇರ್‌ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ಹಂತದ ರೈತರ ವೈಯಕ್ತಿಕ ಬೆಳೆನಷ್ಟ ಸಮೀಕ್ಷೆಯಲ್ಲಿ ನಿಖರವಾದ ಅಂಕಿಅಂಶ ಗೊತ್ತಾಗಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ತಿಳಿಸಿದ್ದಾರೆ. ಜಿಲ್ಲೆಯ ಎಂಟು ತಾಲ್ಲೂಕುಗಳ ಪೈಕಿ ಈಗಾಗಲೇ 5 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಮುಂದಿನ ಹಂತದಲ್ಲಿ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT