ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಎಲ್ಲೆಡೆ ಶೌಚಾಲಯ ಕೊರತೆ: ಜನರ ಪರದಾಟ

ಸವಣೂರು: ಮೂಲಸೌಕರ್ಯಗಳಿಂದ ವಂಚನೆ, ಪಾಳುಬಿದ್ದ ಸಮುದಾಯ ಶೌಚಾಲಯ, ಗಬ್ಬು ನಾರುತ್ತಿರುವ ಮೂತ್ರಾಲಯ
Published 11 ಡಿಸೆಂಬರ್ 2023, 5:14 IST
Last Updated 11 ಡಿಸೆಂಬರ್ 2023, 5:14 IST
ಅಕ್ಷರ ಗಾತ್ರ

ಸವಣೂರು: 64 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ಕೇಂದ್ರ ಹಾಗೂ ಉಪ ವಿಭಾಗವನ್ನು ಹೊಂದಿರುವ ಸವಣೂರು ಪಟ್ಟಣ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ನಾಗರಿಕ ಸಮಾಜಕ್ಕೆ ಅತ್ಯಂತ ಅವಶ್ಯವಿರುವ ಸಾರ್ವಜನಿಕ ಮೂತ್ರಾಲಯ ಮತ್ತು ಶೌಚಾಲಯಗಳ ಕೊರತೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸುಮಾರು 60 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಕಾಣಸಿಗುವುದು ಕೇವಲ ಒಂದು ಮೂತ್ರಾಲಯ ಮತ್ತು ಎರಡು ಶೌಚಾಲಯಗಳು ಮಾತ್ರ. ಸಮುದಾಯ ಶೌಚಾಲಯವಿದ್ದರೂ ನಿರ್ವಹಣೆಯಿಲ್ಲದೇ ದುರ್ಗಂಧ ಬೀರುತ್ತಿದೆ. ಮೂತ್ರ ವಿಸರ್ಜನೆಗೆ ಸಾರ್ವಜನಿಕರು ಇಲ್ಲಿಗೆ ಬಂದರೆ ತಲೆ ಸುತ್ತಿ ಬೀಳುವಷ್ಟು ಅನೈರ್ಮಲ್ಯ ವಾತಾವರಣವಿದೆ ಎನ್ನುತ್ತಾರೆ ಮಂತ್ರೋಡಿ ಗ್ರಾಮದ ನಿವಾಸಿ ರಮೇಶ ಅರಗೋಳ.

ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿ ಮತ್ತು ಪಟ್ಟಣದ ಅಭಿವೃದ್ಧಿಗಾಗಿ ಇರುವ ಪುರಸಭೆ ತನ್ನ ಎಲ್ಲ ಧ್ಯೇಯೋದ್ದೇಶಗಳನ್ನು ಮರೆತು ನಿದ್ರೆಗೆ ಜಾರಿದೆ ಎಂಬುದಕ್ಕೆ ಪುರಸಭೆಯಿಂದ ನಿರ್ಲಕ್ಷ್ಯಗೊಳಗಾಗಿ ದುರ್ಗಂಧ ಬೀರುತ್ತಿರುವ ಮೂತ್ರಾಲಯಗಳೇ ಸಾಕ್ಷಿ.

ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನ:

‘ಮದ್ಯ ಸೇವಿಸಿದ ಖಾಲಿ ಬಾಟಲಿಗಳು, ಗುಟ್ಕಾ ಪಾಕೆಟ್‌, ಕಸವನ್ನು ಎಸೆಯುವ ತಿಪ್ಪೆ ಗುಂಡಿಗಳಾಗಿವೆ ಈ ಶೌಚಾಲಯಗಳು. ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನಗಳಾಗಿವೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದರೂ ಇಲ್ಲಿಯವರೆಗೂ ಆಡಳಿತ ನಡೆಸಿದ ಯಾವುದೇ ಪಕ್ಷದ ಸ್ಥಳೀಯ ಆಡಳಿತ ಮಂಡಳಿಯೂ ಕೂಡಾ ಈ ಬಗ್ಗೆ ಕನಿಷ್ಠ ಸಾರ್ವಜನಿಕ ಹಿತಾಸಕ್ತಿಯನ್ನು ತೋರದಿರುವುದು ವಿಪರ್ಯಾಸವೇ ಸರಿ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅರುಣ ತಳ್ಳಿಹಳ್ಳಿ.

ಸವಣೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಗೋಡೆಗೆ ಹೊಂದಿಕೊಂಡಿರುವ ಸಾರ್ವಜನಿಕ ಮೂತ್ರಾಲಯದ ಸ್ಥಿತಿ
ಸವಣೂರು ಪಟ್ಟಣದ ಸರ್ಕಾರಿ ಆಸ್ಪತ್ರೆ ಗೋಡೆಗೆ ಹೊಂದಿಕೊಂಡಿರುವ ಸಾರ್ವಜನಿಕ ಮೂತ್ರಾಲಯದ ಸ್ಥಿತಿ

ಇನ್ನೂ ಬಡಾವಣೆಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಪುರಸಭೆ 2020-21ರಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಕಂದಾಯ ಇಲಾಖೆ ಕಾಂಪೌಂಡಿನಲ್ಲಿ, ಇಂದಿರಾ ಸರ್ಕಲ್ ಸಮೀಪ ಮತ್ತು ಮೋತಿ ತಲಾಬ ಕೆರೆ ದಡ ಈ 3 ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಇದ್ದರೂ ಬಳಕೆಗೆ ಬರದಿರುವುದು ಮಾತ್ರ ವಿಪರ್ಯಾಸ ಸಂಗತಿ ಎಂದು ಈರಯ್ಯ ಹಿರೇಮಠ ಬೇಸರ ವ್ಯಕ್ತಪಡಿಸಿದರು.

ವಿವಿಧ ಕೆಲಸ ಕಾರ್ಯಗಳಿಗಾಗಿ ಪಟ್ಟಣಕ್ಕೆ ಬರುವ ಸಾರ್ವಜನಿಕರಿಗೆ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಖಾಲಿ ಜಾಗ ಮತ್ತು ವಾಹನಗಳ ಮರೆಯಲ್ಲಿ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಮಹಿಳೆಯರ ಸ್ಥಿತಿ ಇನ್ನೂ ಕಷ್ಟಕರವಾಗಿದೆ. ಉಪವಿಭಾಗಾಧಿಕಾರಿಗಳ ಕಚೇರಿ ಮತ್ತು ಕಂದಾಯ ಇಲಾಖೆ, ಹಳೇ ಕೋರ್ಟ್‌ ರಸ್ತೆ ಹತ್ತಿರ ಹೆಚ್ಚು ಜನ ಸೇರುತ್ತಾರೆ. ಆದರೆ, ಇಂತಹ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ತೀವ್ರ ಸಮಸ್ಯೆ ಎದುರಾಗಿದೆ.

ಸವಣೂರು ಪಟ್ಟಣದಲ್ಲಿ ಮೂತ್ರ ವಿಸರ್ಜನೆಗೆ ಮೂತ್ರಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಶಾಲಾ ಕಾಂಪೌಂಡ್‌ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಸಾರ್ವಜನಿಕರು
ಸವಣೂರು ಪಟ್ಟಣದಲ್ಲಿ ಮೂತ್ರ ವಿಸರ್ಜನೆಗೆ ಮೂತ್ರಾಲಯ ವ್ಯವಸ್ಥೆ ಇಲ್ಲದೇ ಇರುವುದರಿಂದ ಶಾಲಾ ಕಾಂಪೌಂಡ್‌ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಸಾರ್ವಜನಿಕರು

‌ಮಹಿಳೆಯರು, ವಿದ್ಯಾರ್ಥಿನಿಯರ ಆರೋಗ್ಯ ಮತ್ತು ಸುರಕ್ಷತಾ ದೃಷ್ಟಿಯಿಂದ ಸಮರ್ಪಕ ಸಾವರ್ಜನಿಕ ಶೌಚಾಲಯಗಳು ಅತ್ಯಗತ್ಯ. ಆದರೆ, ಸವಣೂರು ಪಟ್ಟಣಕ್ಕೆ ಬರುವ ಇವರ ಪರಿಸ್ಥಿತಿ ಹೇಳತೀರದಾಗಿದೆ. ಬಯಲು ಶೌಚಾಲಯ ಮುಕ್ತ ಎಂಬ ಸರ್ಕಾರದ ಘೋಷಣೆಗಳು ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿವೆ. ಅನುಷ್ಠಾನಕ್ಕೆ ತರಲು ನಗರ ಸ್ಥಳೀಯ ಸಂಸ್ಥೆಗಳ ನಿರಾಸಕ್ತಿ ತೋರುತ್ತಿವೆ. ಗೌರವ ಮತ್ತು ಘನತೆಯ ಸಂಕೇತವಾಗಿರುವ ಶೌಚಾಲಯಗಳ ನಿರ್ಮಾಣ ಮತ್ತು ಸಮರ್ಪಕ ನಿರ್ವಹಣೆಗೆ ಪುರಸಭೆ ಮುಂದಾಗಬೇಕು ಎಂದು ನಾಗರಿಕರಾದ ಮಂಜುನಾಥ ಉಪ್ಪಾರ ಹಾಗೂ ಬಸವರಾಜ ಗುಮ್ಮನಾಳ ಒತ್ತಾಯಿಸಿದ್ದಾರೆ.

ಕಣ್ಮರೆಯಾದ ಸಂಚಾರಿ ಮೂತ್ರಾಲಯ
ಈ ಹಿಂದೇ ಅಂಚೆ ಕಚೇರಿ ಮುಂಭಾಗ ಎಸ್‌ಬಿಐ ಪೋಲಿಸ್ ಠಾಣೆ ಮುಖ್ಯ ಮಾರುಕಟ್ಟೆ ರಸ್ತೆ ಇಂದಿರಾ ಸರ್ಕಲ್ ಭರಮಲಿಂಗೇಶ್ವರ ವೃತ್ತ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಜನದಟ್ಟಣೆ ಇರುವ ಸ್ಥಳಗಳಲ್ಲಿ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸಂಚಾರಿ ಮೂತ್ರಾಲಯಗಳನ್ನು ಅಳವಡಿಸಲಾಗಿತ್ತು. ಆದರೆ ವರ್ಷದಿಂದೀಚೆಗೆ ಅವುಗಳು ಕಾಣೆಯಾಗಿರುವುದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಪಡಿಪಾಟಲು ಪಡುವಂತಾಗಿದೆ.  ಸವಣೂರು ಪಟ್ಟಣ 64 ಗ್ರಾಮಗಳನ್ನು ಒಳಗೊಂಡ ತಾಲ್ಲೂಕು ಕೇಂದ್ರ. ಇಲ್ಲಿಗೆ ಪ್ರತಿನಿತ್ಯ ಕೆಲಸಕ್ಕೆಂದು ಬರುವವರ ಸಂಖ್ಯೆ ಹೆಚ್ಚಿದ್ದು ಸಾರ್ವಜನಿಕರು ಮೂತ್ರ ವಿಸರ್ಜನೆಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಜಂಗುಳಿಯಿಂದ ತುಂಬಿರುವ ಪಟ್ಟಣದ ಮಾರ್ಕೆಟ್‌ ರಸ್ತೆ ಅಂಚೆ ಕಚೇರಿ ರಸ್ತೆ ಪೊಲೀಸ್ ಠಾಣೆ ರಸ್ತೆ ಉಪವಿಭಾಗಾಧಿಕಾರಿಗಳ ಕಚೇರಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಏನಂತಾರೆ...?

6 ಶೌಚಾಲಯಗಳ ದುರಸ್ತಿ ಹಾಗೂ 6 ಹೊಸ ಶೌಚಾಲಯ ಮತ್ತು ಮೂತ್ರಾಲಯ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ತ್ವರಿತವಾಗಿ ನಿರ್ಮಾಣ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಕಲ್ಪಿಸಲಾಗುವುದು
– ರೇಣುಕಾ ದೇಸಾಯಿ ಪುರಸಭೆ ಮುಖ್ಯಾಧಿಕಾರಿ ಸವಣೂರು.
ಸವಣೂರು ಪಟ್ಟಣದಲ್ಲಿ ಶೌಚಾಲಯ ಇಲ್ಲದೇ ಇರುವುದರಿಂದ ಸಾರ್ವಜನಿಕರು ಮೂತ್ರ ವಿಸರ್ಜನೆಗೆ ಪರದಾಡುವಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪುರಸಭೆ ಆದ್ಯತೆಯ ಮೇರೆಗೆ ಶೌಚಾಲಯಗಳನ್ನು ನಿರ್ಮಿಸಬೇಕು. ಈಗಾಗಲೇ ಇರುವ ಮೂತ್ರಾಲಯಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು 
– ಸಂಗಮೇಶ ಪಿತಾಂಬ್ರಶೆಟ್ಟಿ ಸವಣೂರು ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT