ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಎಚ್‌ಟಿ ಹಾಲಿನ ಘಟಕಕ್ಕೆ ಚಾಲನೆ ಇಂದು

ಹಾಲಿನ ಪಾಕೆಟ್‌ ಪ್ಯಾಕಿಂಗ್‌ ಘಟಕಕಕ್ಕೆ ಮುಖ್ಯಮಂತ್ರಿ ಉದ್ಘಾಟನೆ: ಬಸವರಾಜ ಅರಬಗೊಂಡ ಮಾಹಿತಿ
Last Updated 9 ಮಾರ್ಚ್ 2023, 14:28 IST
ಅಕ್ಷರ ಗಾತ್ರ

ಹಾವೇರಿ: ‘ಯುಎಚ್‌ಟಿ (ಅಲ್ಟ್ರಾ ಹೈ ಟೆಂಪರೇಚರ್‌) ಹಾಲು ಪ್ಯಾಕಿಂಗ್‌ ಸ್ಥಾವರ ಮತ್ತು ಹಾಲು ಸ್ಯಾಚೆಟ್‌ ಪ್ಯಾಕಿಂಗ್‌ ಘಟಕದ ಉದ್ಘಾಟನೆಯನ್ನು ತಾಲ್ಲೂಕಿನ ಜಂಗಮಕೊಪ್ಪದಲ್ಲಿ ಮಾರ್ಚ್‌ 10ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ’ ಎಂದು ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯಸಭಾ ಸದಸ್ಯ ಡಾ.ಡಿ.ವಿರೇಂದ್ರ ಹೆಗ್ಗಡೆ, ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್‌, ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್‌ ಶಿವರಾಮ್‌ ಹೆಬ್ಬಾರ್‌, ಕೃಷಿ ಸಚಿವ ಬಿ.ಸಿ.ಪಾಟೀಲ, ಶಾಸಕ ಬಾಲಚಂದ್ರ ಜಾರಕಿಹೊಳಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಶಾಸಕ ನೆಹರು ಓಲೇಕಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

₹110 ಕೋಟಿ ವೆಚ್ಚ: ‌ಜಂಗಮನಕೊಪ್ಪದಲ್ಲಿ ಒಂದು ಲಕ್ಷ ಲೀಟರ್‌ ಸಾಮರ್ಥ್ಯದ ಯುಎಚ್‌ಟಿ ಹಾಲು ಸಂಸ್ಕರಣಾ ಹಾಗೂ ಪ್ಯಾಕಿಂಗ್‌ ಘಟಕಕ್ಕೆ 2021ರ ಆಗಸ್ಟ್‌ 28ರಂದು ಬಸವರಾಜ ಬೊಮ್ಮಾಯಿಯವರು ಭೂಮಿಪೂಜೆ ನೆರವೇರಿಸಿದ್ದರು. ಈ ಘಟಕ ಅತ್ಯಾಧುನಿಕವಾಗಿದ್ದು, ಸಂಸ್ಕರಿಸಿ ಪ್ಯಾಕಿಂಗ್‌ ಮಾಡಿದ ಹಾಲು 6 ತಿಂಗಳು ಜೀವಿತಾ ಅವಧಿಯನ್ನು ಹೊಂದಿರುತ್ತದೆ. ಪ್ರತಿ ದಿನ 80 ಸಾವಿರ ಲೀಟರ್‌ ಸಾಮರ್ಥ್ಯದ ಘಟಕವನ್ನು ಒಟ್ಟು ₹110 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.

ಹಾಲಿನ ಪೌಚ್‌ ಪ್ಯಾಕಿಂಗ್‌ ಘಟಕ: 2022–23ನೇ ಸಾಲಿನ ಆಯವ್ಯಯದಲ್ಲಿ ಹಾವೇರಿಯಲ್ಲಿಯೇ ಹಾಲಿನ ಪೌಚ್‌ ಪ್ಯಾಕಿಂಗ್‌ ಘಟಕದ ನಿರ್ಮಾಣಕ್ಕೆ ₹20 ಕೋಟಿ ಅನುದಾನವನ್ನು ನೀಡಿದ್ದು, ಪ್ರತಿ ದಿನ 50 ಸಾವಿರ ಲೀಟರ್‌ ಸಾಮರ್ಥ್ಯದ ಘಟಕ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯ ಮಾರುಕಟ್ಟೆಗೆ ಅಗತ್ಯವಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ವಿತರಿಸಲು ಅನುಕೂಲವಾಗುತ್ತದೆ. ಈ ಘಟಕ ನಿರ್ಮಾಣದಿಂದ ಧಾರವಾಡದಿಂದ ತರಿಸುವ ಸಾಗಾಣಿಕೆ ವೆಚ್ಚ ಉಳಿತಾಯವಾಗಲಿದೆ ಎಂದರು.

ಮೆಗಾ ಡೇರಿಗೆ ಅನುಮೋದನೆ: ಹಾವೇರಿ ಜಿಲ್ಲಾ ಹಾಲು ಒಕ್ಕೂಟವು 2022ರ ಏಪ್ರಿಲ್‌ನಿಂದ ಸ್ವತಂತ್ರವಾಗಿ ಕಾರ್ಯಾರಂಭ ಮಾಡಿದ್ದು, ಜಿಲ್ಲಾ ಭಾಗದಲ್ಲಿ ನಿತ್ಯ 1.5 ಲಕ್ಷ ಲೀಟರ್‌ ಹಾಲು ಶೇಖರಿಸುತ್ತಿದ್ದು, ಮುಂದಿನ 2–3 ವರ್ಷಗಳಲ್ಲಿ ಹಾಲಿನ ಶೇಖರಣೆ ಸುಮಾರು 3 ಲಕ್ಷ ಲೀಟರ್‌ ಆಗಲಿದೆ. ಒಕ್ಕೂಟದಲ್ಲಿ ಶೇಖರಿಸುವ ಸಂಪೂರ್ಣ ಹಾಲನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಉದ್ದೇಶಿತ ‘ಮೆಗಾ ಡೇರಿ’ ಯೋಜನೆಯನ್ನು ಅರಬಗೊಂಡದಲ್ಲಿ ₹70 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆ. ಒಂದೂವರೆ ವರ್ಷದಲ್ಲಿ ಲೋಕಾರ್ಪಣೆ ಆಗಲಿದೆ.

ಮೆಗಾ ಡೇರಿಯಿಂದ ಪ್ರತ್ಯೇಕ ಹಾಲು ಉತ್ಪನ್ನಗಳ ವಿಭಾಗ ತೆರೆದು ಪೇಡ, ಪನ್ನೀರ್‌, ಕೋವಾ, ಮೈಸೂರ ಪಾಕ್‌ ಇತರೆ ಉತ್ಪನ್ನಗಳ ತಯಾರಿಸುವ ಉದ್ದೇಶ ಹೊಂದಲಾಗಿದೆ. ಪ್ರತಿದಿನ 1ಸಾವಿರ ಕೆ.ಜಿ. ಬೆಣ್ಣೆ ತಯಾರಿಕೆ ಹಾಗೂ 2 ಟನ್‌ ತುಪ್ಪ ತಯಾರಿಕೆಗೆ ಅನುಕೂಲವಾಗಲಿದೆ. ಲೈಟಿಂಗ್‌, ಹೀಟಿಂಗ್‌ ಉದ್ದೇಶಕ್ಕಾಗಿ ಸೋಲಾರ್‌ ಪ್ಯಾನಲ್‌ಗಳ ಅಳವಡಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಬಸನಗೌಡ ಮೇಲಿನಮನಿ, ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ವ್ಯವಸ್ಥಾಪಕ ನಿರ್ದೇಶಕ ಎಸ್‌.ಜಿ.ಶೇಖರ್‌ ಇದ್ದರು.

‘ಹೈನುಗಾರಿಕೆ ಜಿಲ್ಲೆಯಾಗಿಸಲು ಕ್ರಮ’
ಮುಂದಿನ 5 ವರ್ಷಗಳಲ್ಲಿ ಹಾವೇರಿ ಜಿಲ್ಲೆ ಸಂಪೂರ್ಣ ಹೈನುಗಾರಿಕೆ ಜಿಲ್ಲೆಯಾಗಬೇಕು. ಪ್ರತಿ ವರ್ಷ ಒಂದೊಂದು ತಾಲ್ಲೂಕನ್ನು ‘ಹೈನುಗಾರಿಕೆ ತಾಲ್ಲೂಕು’ ಎಂದು ಘೋಷಣೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಬಸವರಾಜ ಅರಬಗೊಂಡ ಹೇಳಿದರು.

ಕೃಷಿಕರಿಗೆ ಕಡಿಮೆ ದರದಲ್ಲಿ ಪಶು ಆಹಾರ ಒದಗಿಸುವ ಯೋಜನೆ ಹಾಕಿಕೊಂಡಿದ್ದೇವೆ. ಜತೆಗೆ ಪಶು ಸಂಗೋಪನಾ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷ 1 ಸಾವಿರ ಜಾನುವಾರುಗಳನ್ನು ಹೊರರಾಜ್ಯಗಳಿಂದ ಜಿಲ್ಲೆಗೆ ತರಿಸುವ ಯೋಜನೆ ರೂಪಿಸಿದ್ದೇವೆ. ಈ ವರ್ಷ 500 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಏಪ್ರಿಲ್‌ 1ರಿಂದ ಜಾನುವಾರುಗಳು ತರಿಸಿ, ವಿತರಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT