ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಲಿ

ಶಿಕ್ಷಕ ಸಾಹಿತಿಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಗೌರಿಮಠ ಶ್ರೀಗಳ ಅಭಿಮತ
Last Updated 5 ಸೆಪ್ಟೆಂಬರ್ 2021, 15:10 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಹಾಗೂ ಅನಿವಾರ್ಯ ಎಂದು ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಮಲ್ಲಿಕಾರ್ಜುನ ಶಿಕ್ಷಣ ವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಿಕ್ಷಕ ಸಾಹಿತಿಗಳ ರಾಜ್ಯ ಮಟ್ಟದ 4ನೇ ಸಮ್ಮೇಳನ’ದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಅವರು ಮಾತನಾಡಿದರು.

ರಾಷ್ಟ್ರೀಯ ಭಾಷೆಗಳ ಹಿತ ಕಾಪಾಡುವ ವ್ಯವಸ್ಥೆಯಲ್ಲಿ ಕನ್ನಡ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳು ಅವಸಾನದ ಅಂಚು ತಲುಪುವ ಆತಂಕದ ದಿನಗಳನ್ನು ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರದ ಶಿಕ್ಷಣ ನೀತಿಗೆ ರಾಜ್ಯ ಸರ್ಕಾರದ ಅವಸರದ ನಿರ್ಧಾರ ಆರೋಗ್ಯಕರ ಬೆಳವಣಿಗೆಯಲ್ಲ. ನಾಡಿನ ಬುದ್ಧಿಜೀವಿಗಳು, ವಿದ್ಯಾರ್ಥಿ ಸಂಘಟನೆಗಳು, ಮುಖ್ಯವಾಗಿ ಪಾಲಕರನ್ನು ಗಣನೆಗೆ ತೆಗೆದುಕೊಂಡು, ಒಮ್ಮತದ ಅಭಿಪ್ರಾಯ ಪಡೆಯುವ ಅಗತ್ಯವಿದೆ. ಸರ್ಕಾರದ ಅವಸರದ ನಿರ್ಧಾರ ಹತ್ತು ವರ್ಷ ಮುಂದಿನ ಪೀಳಿಗೆಯ ಮಕ್ಕಳು ತೊಂದರೆ ಅನುಭವಿಸುವಂತಾಗಬಾರದು ಎಂದರು.

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅನುದಾನ ಪಡೆಯುವ ಸಾಹಿತ್ಯ ಸಂಘಟನೆಗಳು ಏರ್ಪಡಿಸದ ಮಹತ್ತರ ಕಾರ್ಯವನ್ನು ಕ.ಚು.ಸಾ.ಪ ‌ಮಾಡುತ್ತಿದೆ ಸಮಾಜ ಹಾಗೂ ಸರ್ಕಾರ ಅದರತ್ತ ಸ್ಪಂದಿಸುವ ಅಗತ್ಯವಿದೆ ಎಂದರು.

ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡ ಶೆಟ್ರು ಸಮಾರಂಭ ಉದ್ಘಾಟಿಸಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ವೇದಿಕೆಯ ಗಣ್ಯರೆಲ್ಲ‌ ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭದಲ್ಲಿ ರಟ್ಟಿಹಳ್ಳಿಯ ಶಿಕ್ಷಕಿ ಸಾವಿತ್ರಿ ಕಡೂರ ವಿರಚಿತ ‘ಹಿಡಿ ಬೆಳಕು’ ಕವನ ಸಂಕಲನವನ್ನು ಶಿವಯೋಗಿ ಶಿವಾಚಾರ್ಯರು ಲೋಕಾರ್ಪಣೆ ಮಾಡಿದರು.

ನಿರ್ಣಯ ಸ್ವೀಕಾರ

ಕೇಂದ್ರ ಸರ್ಕಾರದ ಹೊಸಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುವ ನಿರ್ಧಾರವನ್ನು ಸ್ವಾಗತಿಸಿದ ಶಿಕ್ಷಕ ಸಾಹಿತಿಗಳ ಸಮ್ಮೇಳನ ಅದನ್ನು ಸಮಗ್ರ ಚರ್ಚೆಗೆ ಒಳಪಡಿಸುವಂತೆ ಆಗ್ರಹಿಸಿದರು. ತಾಲ್ಲೂಕು ಅಧ್ಯಕ್ಷ ಡಾ.ಗಂಗಯ್ಯ ಕುಲಕರ್ಣಿ ನಿರ್ಣಯ ಮಂಡಿಸಿದರು. ಅನಂತ ಕುಲಕರ್ಣಿ ಎಲ್ಲರ ಪರವಾಗಿ ಅನುಮೋದಿಸಿದರು.

‘ಚುಟುಕು ಚೇತನ’ ಪ್ರಶಸ್ತಿ

ಶಿಕ್ಷಕ ದಿನಾಚರಣೆ ಅಂಗವಾಗಿ ಕಚುಸಾಪದಿಂದ ಸಾವಿತ್ರಿ ಕಡೂರ, ಮಂಜುಳಾ ಪಿ.ನಾಮದೇವ, ಅನುಪಮಾ ಆದಾಪೂರ, ಗಿರಿಜಮ್ಮ ಹಿರೇಮಠ, ರವಿ ಗುಡಿಸಾಗರ ಸೋಮಯ್ಯ ಹಿರೇಮಠ, ಎಸ್.ಐ.ನೇಕಾರ ಅವರಿಗೆ ‘ಚುಟುಕು ಚೇತನ’ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಚುಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷ ಲಮಾಣಿ ಸ್ವಾಗತಿಸಿದರು. ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಹಿರಿಯ ಶಿಕ್ಷಕರಾದ ಎಸ್‌.ಐ.ನೇಕಾರ, ಮರಿಗೌಡ್ರ ವೀರನಗೌಡ, ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿದರು. ರವಿರಾಜ ತಿರುಮಲೆ ನಿರೂಪಿಸಿದರು, ಸಂತೋಷ ಪಿ.ಕೆ ‌ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT