ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಜೇನು ಕೃಷಿಯತ್ತ ಆಸಕ್ತಿ ಹೆಚ್ಚಲಿ’

ರಾಷ್ಟ್ರೀಯ ಜೇನು ನೊಣ ದಿನಾಚರಣೆ
Published 13 ಆಗಸ್ಟ್ 2024, 15:36 IST
Last Updated 13 ಆಗಸ್ಟ್ 2024, 15:36 IST
ಅಕ್ಷರ ಗಾತ್ರ

ಹಾನಗಲ್: ನಿರ್ವಹಣೆ ವೆಚ್ಚವಿಲ್ಲದೆ ಉತ್ತಮ ಆದಾಯ ತಂದುಕೊಡುವ ಜೇನು ಕೃಷಿಯತ್ತ ರೈತ ಸಮೂಹ ಆಕರ್ಷಿತವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ಇಲ್ಲಿನ ಕುಮಾರೇಶ್ವರ ಪಿಯು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಜೇನುನೊಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜೇನು ಪೆಟ್ಟಿಗೆ ಖರೀದಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ರೈತರಲ್ಲಿ ಜಾಗೃತಿ ಮೂಡಿಸಿ ತರಬೇತಿ ನೀಡಿದಾಗ ಜೇನು ಕೃಷಿಯತ್ತ ಆಸಕ್ತಿ ಹೆಚ್ಚಾಗುತ್ತದೆ’ ಎಂದರು.

‘ವಿಶ್ವದಲ್ಲಿ ಜೇನು ಕೃಷಿಯಿಂದ ವಾರ್ಷಿಕ ₹50 ಸಾವಿರ ಕೋಟಿ ವ್ಯವಹಾರ ನಡೆಯುತ್ತದೆ. ಆದರೆ ಅರಿವಿನ ಕೊರತೆ ಕಾರಣ ನಮ್ಮಲ್ಲಿ ಇದಕ್ಕೆ ತಕ್ಕ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿಲ್ಲ’ ಎಂದರು.

ಹಾವೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಬಿ.ಎಸ್ ಮಾತನಾಡಿ, ‘ಜೇನು ನೊಣ ರೈತ ಮಿತ್ರ. ಸಸ್ಯ ಸಂಪತ್ತು ಸೇರಿದಂತೆ ಪರಿಸರದ ರಕ್ಷಣೆಗೆ ಜೇನು ಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೇನು ನೊಣಗಳ ಸಹಕಾರದಿಂದ ಫಸಲು ಪ್ರಮಾಣ ಹೆಚ್ಚಿಸಬಹುದು’ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ‘ಜೇಣು ನೊಣಗಳ ಜೀವನಕ್ರಮ ಅರಿಯಬೇಕು. 500 ಹೂವುಗಳ ಪರಾಗಸ್ಪರ್ಷದಿಂದ ಒಂದು ಹನಿ ಜೇನುತುಪ್ಪ ಸೃಷ್ಟಿಯಾಗುತ್ತದೆ’ ಎಂದರು.

ಜೇನು ಕೃಷಿ ಕುರಿತು ಉಪನ್ಯಾಸ ನೀಡಿದ ಶಿರಸಿಯ ಮಧುಕೇಶ್ವರ ಹೆಗಡೆ, ‘ಔಷಧಿಯ ಸಸ್ಯಗಳನ್ನು ಬೆಳೆಸುವುದು ಜೇನು ಕೃಷಿಗೆ ಪೂರಕ. ಜೇನು ಉತ್ಪನ್ನಗಳಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ
ಗಳಿಸಬಹುದು’ ಎಂದರು.

ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಕೆ ಮತ್ತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಕಾಲೇಜು ಪ್ರಾಚಾರ್ಯ ಚಿರಂಜೀವಿ ಆಡೂರ, ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ, ಅರಣ್ಯ ಇಲಾಖೆ ಅಧಿಕಾರಿಗಳಾದ
ಸಂತೋಷ ಸವಣೂರ, ಅಬ್ದುಲ್ ನಧಾಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT