ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಲಾಕ್‌ಡೌನ್‌ ಸಡಿಲ: ರಸ್ತೆಗಿಳಿದ ಜನ

ಬಟ್ಟೆ, ಚಿನ್ನದ ಅಂಗಡಿಗಳಲ್ಲಿ ವ್ಯಾಪಾರ ಆರಂಭ: ಅಂತರ ಕಾಯ್ದುಕೊಳ್ಳದ ನಾಗರಿಕರು
Last Updated 1 ಮೇ 2020, 15:58 IST
ಅಕ್ಷರ ಗಾತ್ರ

ಹಾವೇರಿ: ಲಾಕ್‌ಡೌನ್‌ ನಿಯಮಗಳಲ್ಲಿ ಕೆಲವೊಂದಕ್ಕೆ ವಿನಾಯಿತಿ ಸಿಕ್ಕಿದ್ದೇ ತಡ ತಂಡೋಪ ತಂಡವಾಗಿ ಜನರು ರಸ್ತೆಗಳಿದರು. ದಿನಸಿ, ತರಕಾರಿ ಖರೀದಿಸುವ ವೇಳೆ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿರುವ ದೃಶ್ಯ ನಗರದಲ್ಲಿ ಶುಕ್ರವಾರ ಕಂಡು ಬಂತು.

ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ಆಯ್ದ ಆರ್ಥಿಕ ಚಟುವಟಿಕೆಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ಬಟ್ಟೆ, ಬಂಗಾರದ ಅಂಗಡಿಗಳನ್ನು ತೆರೆಯಲು ಷರತ್ತಬದ್ಧ ಅನುಮತಿ ಸಿಕ್ಕಿದೆ. ಹೊರಜಿಲ್ಲೆಯಿಂದ ಬಂದು ಜಿಲ್ಲೆಯಲ್ಲಿ ಉಳಿದಿರುವ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು, ಪ್ರವಾಸಿಗರು ಸೇರಿದಂತೆ ಹೊರಗಿನವರಿಗೆ ಸ್ವ–ಗ್ರಾಮಗಳಿಗೆ ಹೋಗಲು ಹಸಿರು ನಿಶಾನೆ‌ ಸಿಕ್ಕಿದೆ.

ದುಪ್ಪಟ್ಟಾದ ವಾಹನ ಸಂಚಾರ

‘ನಿಯಮಗಳಲ್ಲಿ ಸಡಿಲಿಕೆ ಮತ್ತು ಪೊಲೀಸರು ಲಾಠಿ ಬೀಸುವುದನ್ನು ನಿಲ್ಲಿಸಿರುವುದರಿಂದ ಜನರು ಅನಗತ್ಯವಾಗಿ ಓಡಾಡುವುದನ್ನು ಶುರು ಮಾಡಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಹಾವೇರಿಯ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳದೆ ಗ್ರಾಹಕರು ಗುಂಪು ಗುಂಪಾಗಿ ನಿಂತಿರುವ ದೃಶ್ಯ ಆತಂಕ ಮೂಡಿಸಿತು. ಕೊರೊನಾ ಸೋಂಕನ್ನು ಜನರು ಮರೆತೇ ಬಿಟ್ಟಿದ್ದಾರೆ ಎಂಬಂತೆ ಭಾಸವಾಯಿತು’ ಎಂದು ಶಿವಯೋಗೀಶ್ವರ ನಗರದ ಈರಣ್ಣ ಮುದುಗಲ್‌ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಂತೂ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರು ಕೃಷಿ ಸಾಮಗ್ರಿ ಖರೀದಿಸಲು ಪಟ್ಟಣ ಮತ್ತು ನಗರಕ್ಕೆ ದಂಡಿಯಾಗಿ ಬರುತ್ತಿದ್ದಾರೆ. ಹಾನಗಲ್‌, ರಾಣೆಬೆನ್ನೂರು, ಗುತ್ತಲ, ಬ್ಯಾಡಗಿ, ಕಾಗಿನೆಲೆ ರಸ್ತೆಗಳಲ್ಲಿ ವಾಹನ ಸಂಚಾರ ದುಪ್ಪಟ್ಟಾಗಿತ್ತು. ನಾನಾ ಕಾರಣಗಳನ್ನು ಹೇಳುತ್ತಾ ಬರುವ ಜನರನ್ನು ಹೇಗೆ ನಿಯಂತ್ರಿಸಬೇಕು ಎಂಬುದು ತೋಚದೆ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಅಸಹಾಯಕರಾಗಿ ನಿಂತಿದ್ದರು.

ಚಿನ್ನ, ಬಟ್ಟೆ ಅಂಗಡಿಯಲ್ಲಿ ಗ್ರಾಹಕರು

ನಗರದ ಎಂ.ಜಿ.ರಸ್ತೆಯಲ್ಲಿರುವ ಚಿನ್ನ–ಬೆಳ್ಳಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಬಹುದಿನಗಳ ನಂತರ ಆರಂಭವಾಯಿತು. ಚಿನ್ನ ಮತ್ತು ಬಟ್ಟೆ ಖರೀದಿಸಲು ಗ್ರಾಹಕರು ಮನೆಗಳಿಂದ ಹೊರಬಂದರು. ಸಂಜೆ 6 ಗಂಟೆಯಿಂದ ರಾತ್ರಿ 9.30ರವರೆಗೆ ರಸ್ತೆಗಳಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಕೆಲವರು ಮೈದಾನಗಳಲ್ಲಿ ವಾಕಿಂಗ್‌, ಜಾಗಿಂಗ್‌ ಮಾಡಿದರು.ಹೋಲ್‌ಸೇಲ್‌ ಕಿರಾಣಿ ಅಂಗಡಿಗಳು, ಅಕ್ಕಿ ವ್ಯಾಪಾರಸ್ಥರು, ಖಾನಾವಳಿ, ಹೋಟೆಲ್‌, ಗ್ಯಾರೇಜ್‌, ಪಾನ್‌ ಶಾಪ್‌, ಟೀ ಸ್ಟಾಲ್‌,ಹಣ್ಣಿನ ಅಂಗಡಿ, ಎಲೆಕ್ಟ್ರಾನಿಕ್‌ ಅಂಗಡಿ, ಸಿಮೆಂಟ್‌, ಪೈಪ್‌, ಕಬ್ಬಿಣದ ಅಂಗಡಿ, ಐಸ್‌ಕ್ರೀಂ, ಜ್ಯೂಸ್‌ ಅಂಗಡಿಗಳು ತೆರೆದಿರುವುದು ಕಂಡು ಬಂದಿತು.

‘ಸರ್ಕಾರ ನೀಡಿರುವ ನಿಯಮಗಳನ್ನು ಜನರು ದುರುಪಯೋಗ ಪಡಿಸಿಕೊಳ್ಳಬಾರದು. ಅಗತ್ಯ ಕೆಲಸವಿದ್ದರೆ ಮಾತ್ರ ಹೊರಬರಬೇಕು. ಉದಾಸೀನತೆ ತೋರಿದರೆ ಹಸಿರು ವಲಯ ರಾತ್ರೋರಾತ್ರಿ ಕೆಂಪು ವಲಯವಾಗುತ್ತದೆ. ಇತರ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್‌–19 ಪ್ರಕರಣಗಳನ್ನು ನೋಡಿ ಜನರು ಎಚ್ಚೆತ್ತುಕೊಳ್ಳಬೇಕು’ ಎಂದು ಬಿಜೆಪಿ ಮುಖಂಡ ಸಂತೋಷ ಆಲದಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT