ಸೋಮವಾರ, ಆಗಸ್ಟ್ 2, 2021
28 °C
ರಸ್ತೆಗಿಳಿಯದ ಬಸ್‌, ಆಟೊ, ಟ್ಯಾಕ್ಸಿ: ಮುಚ್ಚಿದ ಮಳಿಗೆಗಳು, ರಸ್ತೆಗಳು ಭಣಭಣ

ಲಾಕ್‌ಡೌನ್‌ಗೆ ಹಾವೇರಿಯಲ್ಲಿ ಜನಸಂಚಾರ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ‘ಭಾನುವಾರದ ಲಾಕ್‌ಡೌನ್‌’ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೋವಿಡ್‌ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ‘ಲಾಕ್‌ಡೌನ್‌ ನಿಯಮಗಳನ್ನು ಪಾಲಿಸಿ, ಕೊರೊನಾ ಸೋಂಕು ತಡೆಗಟ್ಟಿ’ ಎಂಬ ಜಿಲ್ಲಾಡಳಿತದ ಮನವಿಗೆ ಜನರು ಉತ್ತಮ ಸ್ಪಂದನೆ ನೀಡಿದರು. 

ಲಾಕ್‌ಡೌನ್‌ ಹಿಂದಿನ ದಿನವಾದ ಶನಿವಾರ ಒಂದೇ ದಿನ 28 ಮಂದಿಗೆ ಕೋವಿಡ್ ಪ್ರಕರಣಗಳು‌ ಪತ್ತೆಯಾಗಿದ್ದವು. ಒಟ್ಟು ಪ್ರಕರಣಗಳ ಸಂಖ್ಯೆ 151ಕ್ಕೆ ಏರಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ‘ಸರ್ಕಾರದ ಲಾಕ್‌ಡೌನ್ ನಿಯಮ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಜನರೇ ಸ್ವ–ನಿಯಂತ್ರಣ ಹೇರಿಕೊಳ್ಳುವುದು ಅಗತ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾಡಿದ್ದ ಮನವಿಗೆ ನಾಗರಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. 

ವಾಹನ ಸಂಚಾರ ಬಂದ್‌: ಸಾರಿಗೆ ಸಂಸ್ಥೆ ಬಸ್‌, ಆಟೊ, ಟ್ಯಾಕ್ಸಿಗಳು ರಸ್ತೆಗಿಳಿಯಲಿಲ್ಲ. ಬಸ್‌ ನಿಲ್ದಾಣ, ಹಳೇ ಪಿ.ಬಿ.ರಸ್ತೆ, ಕಾಗಿನೆಲೆ ರಸ್ತೆ, ಗುತ್ತಲ ರಸ್ತೆ, ಹಾನಗಲ್‌ ರಸ್ತೆಯಲ್ಲಿ ಬೆರಳೆಣಿಕೆ ವಾಹನಗಳು ಮಾತ್ರ ಕಂಡು ಬಂದವು. ನಗರದ ಬಸ್‌ ನಿಲ್ದಾಣ ಬಿಕೋ ಎನ್ನುವಂತಿತ್ತು. ಹೊಸಮನಿ ಸಿದ್ದಪ್ಪ ವೃತ್ತ, ಮೈಲಾರ ಮಹದೇವಪ್ಪ ವೃತ್ತ, ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ವೃತ್ತ, ಜೆ.ಎಚ್‌.ಪಟೇಲ್‌ ಸರ್ಕಲ್‌ಗಳು ಜನರ ಸಂಚಾರವಿಲ್ಲದೆ ಭಣಗುಡುತ್ತಿದ್ದವು. 

ಕೆಲವು ಕಡೆ ತರಕಾರಿ, ಹಾಲು, ಔಷಧ ಮಳಿಗೆಗಳು ಮತ್ತು ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದವು. ಮಳಿಗೆಗಳನ್ನು ಮುಚ್ಚುವ ಮೂಲಕ ವರ್ತಕರು, ಅಂಗಡಿ ಮಾಲೀಕರು ಲಾಕ್‌ಡೌನ್‌ಗೆ ಬೆಂಬಲ ನೀಡಿದರು. ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಸಂಪೂರ್ಣ ಬಂದ್‌ ಆಗಿತ್ತು. ಎಪಿಎಂಸಿ ಯಾರ್ಡ್‌‌, ಶಿವಬಸವೇಶ್ವರ ಜಾನುವಾರು ಮಾರುಕಟ್ಟೆಯಲ್ಲೂ ವ್ಯವಹಾರ ವಹಿವಾಟು ಸ್ಥಗಿತಗೊಂಡಿದ್ದವು. 

ಲಾಕ್‌ಡೌನ್‌ ನಡುವೆಯೂ ಲಾಲ್‌ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಲು ವೃದ್ಧೆಯೊಬ್ಬರು ಕುಳಿತಿದ್ದರು. ‘ಬೆಳಿಗ್ಗೆಯಿಂದ ಒಬ್ಬರೂ ಇತ್ತ ಸುಳಿದಿಲ್ಲ. ಮನೆಯಲ್ಲೇ ತರಕಾರಿ ಕೊಳೆತು ಹೋಗುವ ಬದಲು ಯಾರಿಗಾದರೂ ಕಡಿಮೆ ದರದಲ್ಲಿ ಮಾರೋಣ ಅಂತ ಬಂದ್ರೆ ಬಿಡಿಗಾಸು ಸಿಗಲಿಲ್ಲ’ ಅಂತ ಬೇಸರ ವ್ಯಕ್ತಪಡಿಸಿದರು. 

ದಂಡದ ಬಿಸಿ: ಲಾಕ್‌ಡೌನ್‌ ನಡುವೆಯೂ ಕೆಲವು ಯುವಕರು ಅನಗತ್ಯವಾಗಿ ರಸ್ತೆಯಲ್ಲಿ ಬೈಕ್‌ ಓಡಿಸುತ್ತಿರುವುದನ್ನು ತಡೆದ ಪೊಲೀಸರು ದಂಡ ಹಾಕುವ ಮೂಲಕ ಮನೆಯಲ್ಲಿರುವಂತೆ ತಾಕೀತು ಮಾಡಿದರು. ಐಎಂಎ ಪ್ರಕರಣ ದಾಖಲಿಸಿ, ₹100ರಿಂದ ₹500ರವರೆಗೆ ದಂಡ ವಿಧಿಸಿದರು. ಹಾವೇರಿ ನಗರ ಸಂಚಾರ ಪೊಲೀಸರು 10 ಪ್ರಕರಣಗಳನ್ನು ದಾಖಲಿಸಿಕೊಂಡು ₹5 ಸಾವಿರಕ್ಕೂ ಹೆಚ್ಚು ದಂಡ ಸಂಗ್ರಹಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು