ರಟ್ಟೀಹಳ್ಳಿ: ಪ್ರೇಮ ಪ್ರಕರಣದಲ್ಲಿ ಸಿಲುಕಿದ್ದ ಎನ್ನಲಾದ ಯುವಕನೊಬ್ಬನನ್ನು ಥಳಿಸಿ, ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಗಂಗಾಯಿಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗಂಗಾಯಿಕೊಪ್ಪ ಗ್ರಾಮದ ಪ್ರವೀಣ (ರಾಜು) ಪೂಜಾರ (28) ಹತ್ಯೆಯಾದ ಯುವಕ.
ಸಾಯುವುದಕ್ಕೂ ಮುನ್ನ ತನ್ನ ಸ್ನೇಹಿತರಿಗೆ ಪ್ರವೀಣ ಕಳುಹಿಸಿದ್ದ ಎನ್ನಲಾದ ವಾಟ್ಸ್‌ಆ್ಯಪ್ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‘ಸುಭಾಷ ಕಡೂರು, ಮಲ್ಲೇಶ ಕಡೂರು, ನಾಗರಾಜ ಕಡೂರು, ಬಂಗಾರಿ ಕಡೂರು, ಸಂಜು ಕಡೂರು, ರಾಮ ಕಡೂರು, ರಂಗಪ್ಪ ಗೊಂಗೇರಿ ಮುಂತಾದವರು ನನ್ನ ಸಾವಿಗೆ ಕಾರಣರಾಗಿದ್ದಾರೆ’ ಎಂದು ಸಂದೇಶದಲ್ಲಿ ಪ್ರವೀಣ ದೂರಿದ್ದಾನೆ.
ಬಾಲಕಿಯೊಬ್ಬಳು ತನಗೆ ಪದೇ ಪದೇ ಕರೆ ಮಾಡುತ್ತಿರುವುದನ್ನು ಬಾಲಕಿಯ ಮನೆಯವರಿಗೆ ತಿಳಿಸಿದ್ದೆ. ನಾಲ್ಕು ದಿನಗಳ ಹಿಂದೆ ಸುಭಾಷ ಕಡೂರು ಅವರು ಬಾಲಕಿಯಿಂದ ಮತ್ತೆ ಕರೆ ಮಾಡಿಸಿ, ನಮ್ಮ ಮನೆಯಲ್ಲಿ ಯಾರೂ ಇರುವುದಿಲ್ಲ. ಹೊರಗೆ ಹೋಗೋಣ’ ಎಂದು ಮಾಹಿತಿ ಕೊಡಿಸಿದ್ದರು.
ಸುಭಾಸ ಅವರು ನನ್ನ ತಂದೆಗೆ ಶುಂಠಿ ವ್ಯವಹಾರದ ಸಲುವಾಗಿ ₹20 ಲಕ್ಷ ಕೊಡಬೇಕಾಗಿತ್ತು.ಹೀಗಾಗಿ ಸಂಚು ರೂಪಿಸಿ, ನನ್ನನ್ನು ಹೊಡೆದಿದ್ದಾರೆ. ನನ್ನ ಸಾವಿಗೆ ಈ ಆರೋಪಿಗಳೇ ಕಾರಣ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
‘ನನ್ನ ಮಗ ಪ್ರವೀಣನನ್ನು ಹೊಡೆದು ಕೊಂದಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು’ ಎಂದು ಯುವಕನ ತಂದೆ ತಿಮ್ಮಪ್ಪ ಪೂಜಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವಕನ ತಂದೆ ದೂರು ಕೊಡಲು ಬಂದಾಗ ತಕ್ಷಣ ಪ್ರಕರಣ ದಾಖಲಿಸಿಕೊಳ್ಳದೆ ವಿಳಂಬ ಧೋರಣೆ ಅನುಸರಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತುಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಹಾವೇರಿ ನಗರದ ಜಿಲ್ಲಾಸ್ಪತ್ರೆ ಮುಂಭಾಗ ಯುವಕನ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.