ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸುದೇವಮೂರ್ತಿಯ ಕೃಷಿ ಸಾಧನೆಗೆ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯ ಗರಿ

Last Updated 7 ಜುಲೈ 2022, 14:35 IST
ಅಕ್ಷರ ಗಾತ್ರ

ಅಕ್ಕಿಆಲೂರ: ಕೃಷಿಭೂಮಿಗೆ ರಾಸಾಯನಿಕ ಬಳಸದೇ, ಕಳೆನಾಶಕವನ್ನೂ ಸಿಂಪಡಣೆ ಮಾಡದೇ ಮಣ್ಣಿನ ಸತ್ವ ಸಂರಕ್ಷಿಸುವ ಜೊತೆಗೆ ಕಡಿಮೆ ಖರ್ಚಿನಲ್ಲಿ ಸಮೃದ್ಧ ಬೆಳೆ ಪಡೆಯುವ ಮೂಲಕ ಹಾನಗಲ್ ತಾಲ್ಲೂಕಿನ ಚಿಕ್ಕಾಂಶಿ ಹೊಸೂರು ಗ್ರಾಮದ ವಾಸುದೇವಮೂರ್ತಿ ಮೂಡಿ ಅವರು ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾರೆ.

ಮೂಲತಃ ಕೃಷಿ ಕುಟುಂಬಕ್ಕೆ ಸೇರಿದ ವಾಸುದೇವಮೂರ್ತಿ ಅವರು ಶ್ರಮದ ದುಡಿಮೆಯಿಂದ ಖರೀದಿಸಿದ 2 ಎಕರೆ 17 ಗುಂಟೆ ಕೃಷಿ ಜಮೀನಿನಲ್ಲಿ ಹೊಸ ಪ್ರಯೋಗಗಳೊಂದಿಗೆ ಹಲವು ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯುತ್ತಿದ್ದು, ಕೃಷಿ ಅಧ್ಯಯನಕ್ಕೆ ನಿತ್ಯವೂ ಇವರ ಜಮೀನಿಗೆ ಹಲವಾರು ರೈತರು ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದಾರೆ. ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಅಡಿಕೆ, ಬಾಳೆ, ಶುಂಠಿ ಬೆಳೆದಿರುವ ಇವರು ಹೆಚ್ಚು ಹಣ ವ್ಯಯ ಮಾಡದೇ ಪ್ರತಿವರ್ಷವೂ ಸಹ ಗರಿಷ್ಠ ಲಾಭ ಪಡೆಯುತ್ತಿರುವುದು ವಿಶೇಷ.

ಬೀಜಾಮೃತ, ಜೀವಾಮೃತ, ಪಂಚಗವ್ಯ, ಮೀನು ಗೊಬ್ಬರ, ಸತ್ತ ಪ್ರಾಣಿಗಳ ಗೊಬ್ಬರ, ಡಬ್ಲ್ಯೂಡಿಸಿ ಕೃಷಿ ತ್ಯಾಜ್ಯದಿಂದ ತಯಾರಿಸಿದ ರಸ ಹೀಗೆ ಹಲವು ಅಮೃತಗಳನ್ನು ಸ್ವತಃ ತಯಾರಿಸಿ ಭೂಮಿಗೆ ಉಣಿಸಿ ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 1 ಎಕರೆ 15 ಗುಂಟೆ ಭೂಮಿಯಲ್ಲಿ ಅಡಿಕೆ ಕೃಷಿ ಮಾಡಿರುವ ವಾಸುದೇವಮೂರ್ತಿ ಅವರು ಕಳೆದ 3-4 ವರ್ಷಗಳಿಂದ 150 ಕ್ವಿಂಟಲ್ ಫಸಲು ಉತ್ಪಾದಿಸಿ, ₹7.5 ಲಕ್ಷ ಆದಾಯ ಗಳಿಸಿದ್ದಾರೆ.

ಕಾಳು ಮೆಣಸು, ಏಲಕ್ಕಿ, ಲವಂಗ, ಜಾಜಿಕಾಯಿ, ಬಾಳೆ ಹೀಗೆ ಬಹು ಬೆಳೆಗಳಿಂದ ಪ್ರತಿವರ್ಷ ಕನಿಷ್ಠ ₹10 ಲಕ್ಷ ಆದಾಯ ಇವರ ಕೈಸೇರುತ್ತಿದೆ. ಇವರ ಕೃಷಿ ಸಾಧನೆಗೆ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ವಾಸುದೇವಮೂರ್ತಿ ಅವರಿಗೆ ಲಭಿಸಿವೆ.

ವಿಷಮುಕ್ತ ಭೂಮಿ, ವಿಷಮುಕ್ತ ಪರಿಸರ, ವಿಷಮುಕ್ತ ಆಹಾರ, ವಿಷಮುಕ್ತ ಸಮಾಜಕ್ಕಾಗಿ ಅಲ್ಲದೇ ಆತ್ಮತೃಪ್ತಿಯಿಂದ ಬದುಕಲು ಬೇಕಾದ ಆದಾಯಕ್ಕಾಗಿ ನನ್ನ ಸಣ್ಣ ಪ್ರಯತ್ನಕ್ಕೆ ಭೂತಾಯಿ ಕೈಹಿಡಿದಿದ್ದಾಳೆ. ಕೃಷಿಯಲ್ಲಿ ಹೊಸ ಪ್ರಯೋಗ, ಪ್ರಯತ್ನಗಳ ಮೂಲಕ ಕೃಷಿಕರು ಹೆಚ್ಚು ಆದಾಯ ಗಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ತಿಳಿವಳಿಕೆ ಹೇಳುವ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ವಾಸುದೇವ ಮೂರ್ತಿ.

ಕಡಿಮೆ ಕೃಷಿಭೂಮಿಯಲ್ಲಿ ಸಾವಯವ ಪದ್ಧತಿ ಮೂಲಕ ಬಹುಬೆಳೆ ಬೆಳೆದು ಪ್ರತಿ ವರ್ಷ ಗರಿಷ್ಠ ಆದಾಯ ಗಳಿಸುತ್ತಿರುವ ವಾಸುದೇವಮೂರ್ತಿ ಮೂಡಿ ಅವರ ಕೃಷಿಭೂಮಿಯೀಗ ರೈತ ತರಬೇತಿ ಶಾಲೆಯಾಗಿಯೂ ಪರಿವರ್ತನೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT