ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಪತ್ತು ಘಟಕದಿಂದ ಅಣುಕು ಪ್ರದರ್ಶನ

ರಾಸಾಯನಿಕ ಅವಘಡದ ಸನ್ನಿವೇಶದಲ್ಲಿ ತುರ್ತು ಸ್ಪಂದನೆ
Published 14 ಮಾರ್ಚ್ 2024, 15:33 IST
Last Updated 14 ಮಾರ್ಚ್ 2024, 15:33 IST
ಅಕ್ಷರ ಗಾತ್ರ

ಹಾವೇರಿ: ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣದ ಗ್ರಾಸಿಂ ಕಾರ್ಖಾನೆ ರಾಸಾಯನಿಕ ಘಟಕಗಳಲ್ಲಿ ಆಕಸ್ಮಿಕವಾಗಿ ಕ್ಲೋರಿನ್ ಅನಿಲ ಸೋರಿಕೆ ಉಂಟಾದರೆ ನಿಯಂತ್ರಣ ಹಾಗೂ ದುಷ್ಪರಿಣಾಮ ತಡೆ, ಪುನರ್ವಸತಿ ಕ್ರಮಗಳ ಕುರಿತಾಗಿ ಈಚೆಗೆ ಆಯೋಜಿಸಿದ್ದ ಪ್ರಾಯೋಗಿಕ ಆಫ್‌ ಸೈಟ್ ಎಮರ್ಜೆನ್ಸಿ ಅಣಕು ಪ್ರದರ್ಶನ ಸಾರ್ವಜನಿಕರಿಗೆ ಜಾಗೃತಿ ಜೊತೆಗೆ ಅಧಿಕಾರಿ, ಸಿಬ್ಬಂದಿಗೆ ಪ್ರಾಯೋಗಿಕ ಅನುಭವ ನೀಡುವಲ್ಲಿ ಗಮನ ಸೆಳೆಯಿತು.

ಪ್ರತಿ ವರ್ಷ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯ ರಾಸಾಯನಿಕ ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಎಂದಿನಂತೆ ಈ ವರ್ಷವೂ ಗ್ರಾಸೀಂ ಕಾರ್ಖಾನೆ ಆವರಣ ಹಾಗೂ ಕಾರ್ಖಾನೆ ಸುತ್ತಲಿನ ಕೋಡಿಯಾಲ ಹೊಸಪೇಟೆ ಮತ್ತು ನಲವಾಗಿಲು ಗ್ರಾಮಗಳಲ್ಲಿ ಜಾಗೃತಿ ಮತ್ತು ಅಣುಕು ಪ್ರದರ್ಶನದ ತಾಲೀಮುಗಳು ಜರುಗಿದವು.

ಅನಿಲ ಸೋರಿಕೆ:

ನೈಜ ರೀತಿಯಲ್ಲಿ ಘಟನೆಯನ್ನು ಮರುಸೃಷ್ಟಿಸಿ ಅನಿಲ ಸೋರಿಕೆ ಉಂಟಾದರೆ ತತ್‌ಕ್ಷಣ ಕ್ರಮಗಳು, ಎಚ್ಚರಿಕೆ ಸಂದೇಶಗಳು, ಅನಿಲ ಸೋರಿಕೆಯ ತಡೆ ಹಾಗೂ ಅದು ಹರಡದಂತೆ ನಿಯಂತ್ರಣ ಕ್ರಮಗಳು, ಅನಿಲ ಸೋರಿಕೆಯಿಂದ ಬಾಧಿತ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಸಂದೇಶ ರವಾನೆ, ಜನರ ಸ್ಥಳಾಂತರ, ವೈದ್ಯಕೀಯ ವ್ಯವಸ್ಥೆ, ಸಾಗಾಣಿಕೆ, ಪುನರ್ವಸತಿ, ಸಂಚಾರ ನಿಯಂತ್ರಣ, ಸಾರಿಗೆ ವ್ಯವಸ್ಥೆ ಒಳಗೊಂಡಂತೆ ನೈಜ ರೀತಿಯಲ್ಲಿ ಘಟನೆಯನ್ನು ಮರು ಸೃಷ್ಟಿಸಲಾಗಿತ್ತು.

ಅಣಕು ಪ್ರದರ್ಶನ (ಮಾಕ್ ಡ್ರಿಲ್) ಆಯೋಜನೆ ಮಾಡಲು ಟೇಬಲ್ ಟಾಪ್ ಎಕ್ಸರ್‌ಸೈಸ್‌, ರೆಸ್ಪಾಂಡರ್ಸ್ ತರಬೇತಿ, ಸಾರ್ವಜನಿಕ ತಿಳಿವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರೆಸ್ಕ್ಯೂ ಶೆಲ್ಟರ್‌ ಆಗಿ ಕವಲೆತ್ತು ಶ್ರೀ ದುರ್ಗಾ ಮಾತಾ ಶಾಲೆ ಮತ್ತು ಕ್ಲೋರಿನ್ ಅನಿಲ ಸೋರಿಕೆ ಪರಿಣಾಮಕ್ಕೆ ಒಳಗಾದ ಗ್ರಾಮಗಳನ್ನಾಗಿ ಕೋಡಿಯಾಲ, ಹೊಸಪೇಟೆ ಮತ್ತು ನಲವಾಗಿಲು ಗ್ರಾಮಗಳನ್ನು ಗುರುತಿಸಿ, ಇನ್ಸಿಡೆಂಟ್‌ ಕಮಾಂಡ್ ಪೋಸ್ಟ್‌, ಸ್ಟೇಜಿಂಗ್ ಏರಿಯಾಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಸುರಕ್ಷತಾ ಉಪಕರಣಗಳ ಪ್ರದರ್ಶನ:

ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ ಕಾರ್ಖಾನೆಯ ಆಡಿಟೋರಿಯಂ ಆವರಣದಲ್ಲಿ ರೆಸ್ಕ್ಯೂ ಸುರಕ್ಷತಾ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪ್ರದರ್ಶನಕ್ಕೆ ಉಪವಿಭಾಗಾಧಿಕಾರಿ ಚನ್ನಪ್ಪ ಎಚ್.ಬಿ. ಚಾಲನೆ ನೀಡಿದರು. ಕಾರ್ಖಾನೆಯ ಮುಖ್ಯಸ್ಥ ಅಜಯ್ ಗುಪ್ತಾ ಕಾರ್ಖಾನೆಯಲ್ಲಿ ಸುರಕ್ಷತೆ ಮಹತ್ವದ ಕುರಿತು ಮಾಹಿತಿ ನೀಡಿದರು.

ಅಣಕು ಪ್ರದರ್ಶನದ ಅಬ್ಸವರ್ಸ್ ಆಗಿ ಪಾಲ್ಗೊಂಡಿದ್ದ ಹುಬ್ಬಳ್ಳಿ ವಲಯ ಕಾರ್ಖಾನೆಗಳ ಜಂಟಿ ನಿರ್ದೇಶಕ ರವೀಂದ್ರನಾಥ ರಾಠೋಡ್, ದಾವಣಗೆರೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನಾಗೇಶ್, ಎಸ್.ಡಿ.ಆರ್.ಎಫ್‌ ಕಮಾಂಡೆಂಟ್ ಹೇಮಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ, ಪ್ರಾದೇಶಿಕ ಪರಿಸರ ಅಧಿಕಾರಿ ಡಾ.ಲಕ್ಷ್ಮೀಕಾಂತ್‌, ತಾಂತ್ರಿಕ ತಂಡದ ಮುಖ್ಯಸ್ಥ ಮನೋಹರ್ ಕುಮಾರ್ ಆರ್ ಅವರು ಮಾಕ್ ಡ್ರಿಲ್‍ನ ನ್ಯೂನತೆಗಳು ಹಾಗೂ ಸರಿಪಡಿಸಬೇಕಾದ ವಿಧಾನಗಳ ಕುರಿತು ವಿವರಿಸಿದರು.

ಗ್ರಾಸಿಂ ಕಾರ್ಖಾನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮನೋಹರ್ ಕುಮಾರ್ ಆರ್ ಹಾಗೂ ತಂಡ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಂಧೀಪ್ ಭಟ್ ಹಾಗೂ ತಂಡ ಅಗತ್ಯ ಸಹಕಾರ ಮತ್ತು ಮಾಹಿತಿ ನೀಡಲು ಕೋ-ಆರ್ಡಿನೇಟರ್ಸ್ ಆಗಿ ಕಾರ್ಯ ನಿರ್ವಹಿಸಿದರು.

ಮುಖ್ಯ ಸುರಕ್ಷತಾ ಅಧಿಕಾರಿ ಆನಂದ್ ಜೋಷಿ ಹಾಗೂ ಹುಬ್ಬಳ್ಳಿ ವಲಯದ ಕಾರ್ಖಾನೆಗಳ ಸಹಾಯಕ ನಿರ್ದೇಶಕಿ ಚಿನ್ಮಯಿ ತೊರಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT