ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನವರು ಜೈಕಾರ ಹಾಕಿದರೆ ಭಾರತ ಮಾತೆ ಖುಷಿಯಾಗುತ್ತಾಳೆ: ಬೊಮ್ಮಾಯಿ

Published 13 ಏಪ್ರಿಲ್ 2024, 16:13 IST
Last Updated 13 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಹಾವೇರಿ: ‌‌‘ಭಾರತ್‌ ಮಾತಾ ಕೀ ಜೈ ಎಂದು ಕೂಗಲು ಭಾರತದ ಮಕ್ಕಳಿಗೆ ಅಧಿಕಾರ ಇದೆ. ಕಾಂಗ್ರೆಸ್‌ನವರು ಕೂಗಲಿ ನಾವು ಸ್ವಾಗತ ಮಾಡುತ್ತೇವೆ. ಭಾರತ ಮಾತೆ ಇನ್ನೂ ಖುಷಿ ಆಗುತ್ತಾಳೆ. ಈ ರೀತಿ ಘೋಷಣೆ ಕೂಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಪ್ಪಣೆ ಕೇಳಿರುವುದು ಅಲ್ಲಿರುವವರ ಮನಸ್ಥಿತಿ ಏನು ಅಂತಾ ಬಿಂಬಿಸುತ್ತದೆ’ ಎಂದು ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

‘ಭಾರತ್‌ ಮಾತಾ ಕೀ ಜೈ ಎನ್ನುವುದು ಬಿಜೆಪಿಯ ಅಪ್ಪನ ಮನೆ ಆಸ್ತಿನಾ’ ಎಂಬ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮಾತಿಗೆ ಸವಣೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಬೊಮ್ಮಾಯಿಯವರು ತಿರುಗೇಟು ನೀಡಿದರು.

‘ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮನವರಿಗೆ ಮಾತನಾಡಲು ಏನೂ ಇಲ್ಲದ ಕಾರಣ, ‘ಬಿಜೆಪಿಯವರು ಸಂವಿಧಾನ ಬದಲಾಯಿಸುತ್ತಾರೆ’ ಎಂದು ರಾಜಕೀಯವಾಗಿ ಭಯ ಹುಟ್ಟಿಸಲು ಆರೋಪ ಮಾಡುತ್ತಾರೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಮೋದಿಯವರ ವಿರುದ್ಧ ಹೇಳಲು ಏನೂ ಇಲ್ಲ. ಕಳೆದ ಬಾರಿ ಇದನ್ನೇ ಹೇಳಿದ್ದರು. ಸಂವಿಧಾನ ಬದಲು ಮಾಡಲು ಯಾರ ಕೈಯಲ್ಲೂ ಆಗುವುದಿಲ್ಲ. ಎಲ್ಲದಕ್ಕೂ ಕಾನೂನು ಅಂತ ಇದೆ. ಸಂವಿಧಾನ ಬದಲು ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿದ್ದರಾಮಯ್ಯ ಸುಮ್ಮನೆ ರಾಜಕೀಯ ಭಯ ಹುಟ್ಟಿಸಲು ಈ ರೀತಿ ಹೇಳುತ್ತಿದ್ದಾರೆ. ಡಾ‌.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಶಾಶ್ವತ ಕೆಲಸ ಮಾಡಿದ್ದಾರೆ ಎಂದರು.

ಅವರ ಎದೆಯೊಳಗೆ ಕಲ್ಲು ಬಿದ್ದಿದೆ

ಬಿಜೆಪಿ 400 ಸೀಟು ಗೆಲ್ಲುವುದಿಲ್ಲ, ಅದಿಕಾರಕ್ಕೆ ಬರುವುದಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನವರ ಎದೆಯೊಳಗೆ ಕಲ್ಲು ಬಿದ್ದಿದೆ. ಅವರು ಸ್ಪರ್ಧೆ ಮಾಡಿರುವುದೇ 230 ಸ್ಥಾನಗಳಿಗೆ. ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ನಾವು ಖಚಿತವಾಗಿ 370 ಸೀಟು ದಾಟುತ್ತೇವೆ. ಕೇಂದ್ರದಲ್ಲಿ ಮತ್ತೆ ನಮ್ಮ ಬಿಜೆಪಿ ಸರ್ಕಾರ ಬರುತ್ತದೆ ಎಂದರು.

ಇದೇ ವೇಳೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪೋನ್ ಕದ್ದಾಲಿಕೆಯ ಆರೋಪಕ್ಕೆ ಪ್ರತಿಕ್ರಿಯಿಸಿ, ಪೋನ್ ಕದ್ದಾಲಿಕೆಯ ಬಗ್ಗೆ ಆರೋಪ ಪ್ರತ್ಯಾರೋಪ ಇವೆ. ಯಾವುದಕ್ಕೂ ಸ್ಪಷ್ಟತೆ ಇಲ್ಲ. ಸ್ಪಷ್ಟತೆ ಇದ್ದಾಗ ಮಾತ್ರ ಅದರ ಬಗ್ಗೆ ಮಾತಾಡಬೇಕು ಎಂದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಥರ ಶಿರಹಟ್ಟಿಯ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಆಗುತ್ತಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ಜನರು ತಿರ್ಮಾನ ಮಾಡಿದರೆ ಯಾಕ ಆಗಬಾರದು, ಆಗಲಿ ಬಿಡಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT