ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕೆರೂರು | ಹೆಚ್ಚಿದ ಬೈಕ್‌ ಕಳ್ಳತನ: ಕಣ್ಮುಚ್ಚಿದ ಸಿಸಿಟಿವಿ ಕ್ಯಾಮೆರಾಗಳು

Published 20 ನವೆಂಬರ್ 2023, 6:21 IST
Last Updated 20 ನವೆಂಬರ್ 2023, 6:21 IST
ಅಕ್ಷರ ಗಾತ್ರ

ಹಿರೇಕೆರೂರು: ‘ಸುರಕ್ಷತೆ ಮತ್ತು ಭದ್ರತೆ’ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಕಣ್ಮುಚ್ಚಿವೆ. ಈ ಬಗ್ಗೆ ಪೊಲೀಸ್‌ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಆಸಕ್ತಿ ತೋರದ ಕಾರಣ, ಕ್ಯಾಮೆರಾಗಳು ಇದ್ದೂ ಇಲ್ಲದಂತಾಗಿವೆ. 

ಪಟ್ಟಣದ ಸಾರ್ವಜನಿಕ ಸ್ಥಳ, ಪ್ರಮುಖ ವೃತ್ತ, ರಸ್ತೆಗಳಲ್ಲಿ ನಿಗಾವಹಿಸಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಸೂಕ್ತ ನಿರ್ವಹಣೆಯಿಲ್ಲದೆ ನಿಷ್ಕಿಯಗೊಂಡಿವೆ. ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ನೆರವಾಗಿದ್ದ ಕ್ಯಾಮೆರಾಗಳು ಇಲ್ಲದೆ, ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಮತ್ತು ಭೇದಿಸಲು ಪೊಲೀಸರಿಗೆ ದೊಡ್ಡ ಸವಾಲಾಗಿದೆ. 

‘ಕಿಡಿಗೇಡಿಗಳು, ಪುಂಡ ಪೋಕರಿಗಳ ಚಲನವಲನಗಳನ್ನು ಸುಲಭವಾಗಿ ಪತ್ತೆಹಚ್ಚಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ. ಪೊಲೀಸ್ ಇಲಾಖೆಯ ಒತ್ತಾಸೆಯ ಮೇರೆಗೆ ಪಟ್ಟಣ ಪಂಚಾಯಿತಿಯ ಹಿಂದಿನ ಆಡಳಿತ ಮಂಡಳಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿತ್ತು. ಸರಿಯಾದ ನಿರ್ವಹಣೆ ಇಲ್ಲದೆ ಅವೆಲ್ಲವೂ ನಿಂತು ಹೋಗಿವೆ. ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದರೂ ಇಲ್ಲದಂತಾಗಿವೆ’ ಎಂದು ನಾಗರಿಕರು ದೂರಿದರು. 

₹5 ಲಕ್ಷ ವೆಚ್ಚದಲ್ಲಿ ಅನುಷ್ಠಾನ:

2014ರಲ್ಲಿ ಎಸ್‌.ಎಸ್‌.ಪಿ ಅನುದಾನದಲ್ಲಿ ಸುಮಾರು ₹5 ಲಕ್ಷ ವೆಚ್ಚದಲ್ಲಿ ಪಟ್ಟಣದ ಸರ್ವಜ್ಞ ವೃತ್ತ, ಬಸ್‌ ನಿಲ್ದಾಣ, ಪೊಲೀಸ್ ಠಾಣೆ, ಚೌಡಿ ಸರ್ಕಲ್‌ನಲ್ಲಿ ಒಟ್ಟು 5 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಮತ್ತು ನಿರ್ವಹಣೆಯ ಹೊಣೆ ಸ್ಥಳೀಯ ಠಾಣೆಗೆ ನೀಡಲಾಗಿತ್ತು. ಪಟ್ಟಣದ 5 ಸ್ಥಳಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳ ಮೂಲಕ ಅಪರಾಧ ಕೃತ್ಯ, ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಕಣ್ಗಾವಲು ವ್ಯವಸ್ಥೆ ನೆರವಾಗಿತ್ತು.

ಬೈಕ್ ಕಳ್ಳರ ಹಾವಳಿ:

‘ಪಟ್ಟಣದಲ್ಲಿ ಇರುವ ಈ ಎಲ್ಲ ಕ್ಯಾಮೆರಾಗಳು ನಿಷ್ಕ್ರಿಯಗೊಂಡಿರುವುದರಿಂದ ಸೋಮವಾರದ ಸಂತೆ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಬೈಕ್ ಕಳ್ಳರು, ಜೇಬು ಕಳ್ಳರು ಹಾಗೂ ಮೊಬೈಲ್‌ ಕಳ್ಳರು, ಅವ್ಯಾಹತವಾಗಿ ಕೈಚಳಕ ತೋರುತ್ತಿದ್ದಾರೆ. ಅಲ್ಲದೆ ಗುಂಪು ಘರ್ಷಣೆ, ಸಂಘರ್ಷ, ಪುಂಡ ಪೋಕರಿಗಳ ಕೀಟಲೆಗಳಿಗೆ ಮೂಗುದಾರ ಹಾಕಲು ಪುರಾವೆ ಸಿಗುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ಕಿರಿಕಿರಿ ಉಂಟಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಪ‍್ರಶಾಂತ್‌ ದೂರಿದರು. 

ಹೊಸ ಕ್ಯಾಮೆರಾ ಅಳವಡಿಸಿ:

‘ಹಿರೇಕೆರೂರು ಪಟ್ಟಣಕ್ಕೆ ಬಂದು ಹೋಗುವ ಎಲ್ಲ ಜನರ ಚಲನವನಗಳ ಮೇಲೆ ನಿಗಾವಹಿಸಲು ಈಗಾಗಲೇ ಕ್ಯಾಮೆರಾಗಳನ್ನು ಅಳವಡಿಸಿರುವ 5 ಸ್ಥಳಗಳ ಜೊತೆ ಕೋರ್ಟ್‌  ಕ್ರಾಸ್, ಶಿರಾಳಕೊಪ್ಪ ರಸ್ತೆ, ಸಂತೆ ಮೈದಾನ, ಜಿ.ಬಿ.ಶಂಕರ್ ರಾವ್ ವೃತ್ತ, ಬಾಳಂಬೀಡ ಕ್ರಾಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೊಸದಾಗಿ ಕ್ಯಾಮೆರಾ ಅಳವಡಿಸುವುದರಿಂದ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಪಟ್ಟಣದ ನಿವಾಸಿಗಳಾದ ಪ್ರೇಮಾ, ಸುಪ್ರಿಯಾ.

‘ಪಟ್ಟಣ ಪ್ರಥಮ ದರ್ಜೆ ಕಾಲೇಜು ಹಾಗೂ ಅದೇ ರಸ್ತೆಯಲ್ಲಿ ಹಾಸ್ಟೆಲ್‌ ಇರುವುದರಿಂದ ಪುಂಡ ಪೋಕರಿಗಳ ಕೀಟಲೆ ಇದೆ. ಈ ಸ್ಥಳ ಹಾಗೂ ತಾಲ್ಲೂಕು ಆಸ್ಪತ್ರೆ ಹತ್ತಿರ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಅಗತ್ಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಿಸಿಟಿವಿ ದುರಸ್ತಿ ಹಾಗೂ ಅತಿ ಅವಶ್ಯವಿರುವ ಕಡೆ ಶೀಘ್ರ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಜಯ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಉಣಕಲ್ ಒತ್ತಾಯಿಸಿದರು.

ಹಿರೇಕೆರೂರು ಪಟ್ಟಣದ ಚೌಡಿ ಸರ್ಕಲ್ ಬಳಿ ಪಟ್ಟಣ ಪಂಚಾಯಿತಿಯಿಂದ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಹಾಳಾಗಿರುವುದು -ಪ್ರಜಾವಾಣಿ ಚಿತ್ರ
ಹಿರೇಕೆರೂರು ಪಟ್ಟಣದ ಚೌಡಿ ಸರ್ಕಲ್ ಬಳಿ ಪಟ್ಟಣ ಪಂಚಾಯಿತಿಯಿಂದ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಹಾಳಾಗಿರುವುದು -ಪ್ರಜಾವಾಣಿ ಚಿತ್ರ
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ 
ಪಟ್ಟಣದಲ್ಲಿ ನಿಷ್ಕಿಯಗೊಂಡಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ಅಪರಾಧ ಕೃತ್ಯಗಳಿಗೆ ಪೊಲೀಸರು ಕಡಿವಾಣ ಹಾಕಬೇಕು
– ಗಿರೀಶ ಬಾರ್ಕಿ ಜಿಲ್ಲಾ ಘಟಕದ ಅಧ್ಯಕ್ಷ ಕರವೇ (ನಾರಾಯಣಗೌಡ ಬಣ) 
ಜಿಲ್ಲಾಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಗರ ಸ್ಥಳೀಯ ಸಂಸ್ಥೆ ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
– ಅಂಶುಕುಮಾರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾವೇರಿ
‘ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿಯೇ ಇಲ್ಲ’
‘ಪಟ್ಟಣದಲ್ಲಿ ಏಳಕ್ಕೂ ಹೆಚ್ಚು ಎಟಿಎಂ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಅಲ್ಲಿಗೆ ಬ್ಯಾಂಕಿನವರು ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ. ಹೀಗಾಗಿ ರಾತ್ರಿ ವೇಳೆ ಎಟಿಎಂ ಕೇಂದ್ರಗಳಿಗೆ ಹೋಗಿ ಗ್ರಾಹಕರು ಹಣ ಪಡೆಯಲು ತೊಂದರೆಯಾಗಿದೆ. ಗ್ರಾಹಕರ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನೇಮಿಸಿ ಎಂದು ರೈತ ಮುಖಂಡ ಹನುಮಂತಪ್ಪ ದೀವಿಗಿಹಳ್ಳಿ ಒತ್ತಾಯಿಸಿದರು. ಬೆಂಗಳೂರಿನ ಎಟಿಎಂ ಕೇಂದ್ರವೊಂದರಲ್ಲಿ 2013ರ ನ.19ರಂದು ಹಣ ಡ್ರಾ ಮಾಡಲು ಹೋಗಿದ್ದ ಜ್ಯೋತಿ ಎಂಬುವರ ಮೇಲೆ ದುಷ್ಕರ್ಮಿಯೊಬ್ಬ ಮಾರಕಾಸ್ತ್ರದಿಂದ ನಡೆಸಿದ್ದ ದಾಳಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆನಂತರ ಎಚ್ಚೆತ್ತ ಬ್ಯಾಂಕುಗಳ ಗ್ರಾಹಕರ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿ ನೇಮಿಸಿದವು. ಕಾಲಾನಂತರ ಕೆಲವು ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಕಣ್ಮರೆಯಾದರು. 
ವ್ಯಾಪಾರಿಗಳಿಗೆ ಕಿರಿಕಿರಿ
‘ಪಟ್ಟಣದಲ್ಲಿ ಅಪರಾಧ ಪ್ರಕರಣಗಳನ್ನು ಬೇಧಿಸಲು ಘಟನಾ ಸ್ಥಳದ ಸುತ್ತಮುತ್ತಲಿರುವ ಅಂಗಡಿ ವ್ಯಾಪಾರ ಕೇಂದ್ರಗಳಿಗಳಿಗೆ ಪೊಲೀಸರು ಹೋಗಿ ಸಿಸಿಟಿವಿ ದೃಶ್ಯಾವಳಿ ವೀಕ್ಷಿಸುವುದು ಮತ್ತು ಆ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಡುವಂತೆ ಕೇಳುವುದರಿಂದ ನಮಗೆಲ್ಲ ದೊಡ್ಡ ಕಿರಿಕಿರಿಯಾಗಿದೆ. ಪೊಲೀಸರು ಪದೇ ಪದೇ ಬರುವ ಕಾರಣ ವ್ಯಾಪಾರಕ್ಕೂ ತೊಂದರೆಯಾಗುತ್ತದೆ’ ಎಂದು ವ್ಯಾಪಾರಿಗಳು ಸಮಸ್ಯೆ ತೋಡಿಕೊಂಡರು.  ‘ಸರಗಳ್ಳತನ ಮನೆಗಳ್ಳತನ ದರೋಡೆ ಕೊಲೆ ಸುಲಿಗೆ ಮುಂತಾದ ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲಾಖೆಗೆ ಸಹಕಾರಿಯಾಗಿದ್ದವು. ಪಟ್ಟಣದೊಳಗೆ ಯಾರು ಪ್ರವೇಶ ಮಾಡಿದ್ದಾರೆ. ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿ ಮತ್ತು ವಾಹನಗಳ ಮೇಲೆ ನಿಗಾ ಇಡಲು ಸಹಕಾರಿಯಾಗಿತ್ತು. ಈಗ ಕ್ಯಾಮೆರಾಗಳು ಕಾರ್ಯನಿರ್ವಹಿಸದ ಕಾರಣ ಅಪರಾಧ ಪತ್ತೆಗೆ ದೊಡ್ಡ ತೊಡಕಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT