ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮೈಲಾರ ಮಹದೇವಪ್ಪ ವೃತ್ತಕ್ಕೆ ಹೊಸರೂಪ

ಹಾವೇರಿ ನಗರಸಭೆಯಿಂದ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣ: ನೂತನ ಪುತ್ಥಳಿ ಪ್ರತಿಷ್ಠಾಪನೆಗೆ ಕ್ರಮ
Last Updated 9 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಹಾವೇರಿ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಗರದ ಮೈಲಾರ ಮಹದೇವಪ್ಪ ವೃತ್ತಕ್ಕೆ ಹೊಸರೂಪ ನೀಡಲು ಹಾವೇರಿ ನಗರಸಭೆ ಮುಂದಾಗಿದೆ.

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪನವರ ಸ್ಮರಣಾರ್ಥ 1953ರಲ್ಲಿ ನಗರದ ಹೃದಯಭಾಗದಲ್ಲಿ ವೃತ್ತ ನಿರ್ಮಿಸಿ, ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ವೃತ್ತ ಅನೇಕ ಹೋರಾಟ, ಸಭೆ, ಸಮಾರಂಭ, ಜಯಂತಿಗಳಿಗೆ ಸಾಕ್ಷಿಯಾಗಿದೆ. ಈ ವೃತ್ತವು ತುಂಬಾ ಹಳೆಯದಾಗಿದ್ದು, ಶಿಥಿಲಾವಸ್ಥೆ ತಲುಪಿದೆ. ಜತೆಗೆ ಪುತ್ಥಳಿ ಸಹ ಹಾಳಾಗಿದೆ.

ಇದನ್ನು ಮನಗಂಡ ಹಾವೇರಿ ನಗರಸಭೆಯು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸಹಯೋಗದಲ್ಲಿ ಹಳೆಯ ವೃತ್ತವನ್ನು ನೆಲಸಮಗೊಳಿಸಿ, ಹೊಸ ವೃತ್ತ ಮತ್ತು ಪುತ್ಥಳಿ ನಿರ್ಮಿಸಲು ತೀರ್ಮಾನಿಸಿದೆ.

ಬಯಲುರಂಗ ಮಂದಿರ ದುರಸ್ತಿ:‘ಹೊಸ ವೃತ್ತದಲ್ಲಿ ಗ್ರಾನೈಟ್‌ ಕಲ್ಲುಗಳನ್ನು ಅಳವಡಿಸಿ, ಸುಸಜ್ಜಿತ ಆವರಣ ಗೋಡೆ ನಿರ್ಮಿಸಿ, ತಮಿಳುನಾಡು ಕಲಾವಿದರಿಂದ ನೂತನ ಪುತ್ಥಳಿ ಮಾಡಿಸಿ ಪ್ರತಿಷ್ಠಾಪಿಸುತ್ತೇವೆ. ಅಲ್ಲಿ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಸ್ಥಳಾವಕಾಶ ಮಾಡಿಕೊಡುತ್ತೇವೆ. ಜತೆಗೆ ವೃತ್ತದ ಸಮೀಪದ ಸರ್ಕಾರಿ ಶಾಲೆ ನಂ.2 ಆವರಣದಲ್ಲಿರುವ ‘ಬಯಲು ರಂಗಮಂದಿರ’ವನ್ನು ಜೀರ್ಣೊದ್ಧಾರ ಮಾಡುತ್ತೇವೆ’ಎಂದು ಹಾವೇರಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.

ವೃತ್ತಗಳಿಗೆ ದೀಪಾಲಂಕಾರ:‘ಸ್ವಾತಂತ್ರ್ಯೋತ್ಸದ ಅಂಗವಾಗಿ ಹೊಸಮನಿ ಸಿದ್ದಪ್ಪ ವೃತ್ತ, ಮಹಾತ್ಮ ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತ, ಸಂಗೂರು ಕರಿಯಪ್ಪ ವೃತ್ತಗಳನ್ನು ಸ್ವಚ್ಛಗೊಳಿಸಿ, ಸುಣ್ಣಬಣ್ಣ ಬಳಿದು, ದೀಪಾಲಂಕಾರ ಮಾಡುತ್ತೇವೆ. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ, ತ್ಯಾಗ ಇಂದಿನ ಯುವಪೀಳಿಗೆಗೆ ಆದರ್ಶವಾಗಬೇಕಿದೆ. ಐತಿಹಾಸಿಕ ಸ್ಮಾರಕ, ವೃತ್ತಗಳ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದೆ’ ಎಂದು ನೀರಲಗಿ ತಿಳಿಸಿದರು.

‘ಮಾಡು ಇಲ್ಲವೇ ಮಡಿ’:ಮಹಾತ್ಮ ಗಾಂಧಿಯವರ ‘ಮಾಡು ಇಲ್ಲವೇ ಮಡಿ’ ಮಂತ್ರಸದೃಶ ಕರೆಗೆ ಪ್ರಭಾವಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ, 1943ರ ಏ.1ರಂದು ಹಾವೇರಿ ತಾಲ್ಲೂಕಿನ ಹೊಸರಿತ್ತಿಯಲ್ಲಿ ಬ್ರಿಟಿಷರ ಗುಂಡೇಟಿಗೆ ಮೈಲಾರ ಮಹದೇವಪ್ಪ ಹಾಗೂ ಸಹಚರರಾದ ಕೋಗನೂರಿನ ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳರ ಬಲಿಯಾಗಿದ್ದರು.

ನೆತ್ತರ ಕತೆ:‘ಹಾವೇರಿ ಹೊರವಲಯದ ತೋಟದ ಯಲ್ಲಾಪುರ ಸಮೀಪ ನಿರ್ಮಿಸಿರುವ ‘ವೀರಸೌಧ’ದಲ್ಲಿ ಮೂವರು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಮೈಲಾರ ಮಹದೇವಪ್ಪನವರ ಧರ್ಮಪತ್ನಿ ಸಿದ್ದಮ್ಮ ಮೈಲಾರ ಅವರ ಸಮಾಧಿಗಳಿವೆ. ಈ ವೀರಸೌಧ ಸ್ವಾತಂತ್ರ್ಯ ಪ್ರೇಮಿಗಳ ನೆತ್ತರ ಕತೆಯನ್ನು ಸಾರಿ ಹೇಳುತ್ತಿದೆ.ಹಾವೇರಿ ನಗರದ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ‘ಮಹದೇವಪ್ಪ ಮೈಲಾರ’ ಹೆಸರನಿಟ್ಟು ಗೌರವಿಸಿದೆ’ ಎಂದುಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸದಸ್ಯ ವಿ.ಎನ್‌. ತಿಪ್ಪನಗೌಡ ಹೇಳಿದರು.

‘ಗಾಂಧೀಜಿಯವರ ಅಂತರಂಗದ ಅನುಯಾಯಿ’
ಮೈಲಾರಮಹದೇವಪ್ಪನವರು1911ರಲ್ಲಿಹಾವೇರಿಜಿಲ್ಲೆಯಮೋಟೆಬೆನ್ನೂರಿನಲ್ಲಿ ಜನಿಸಿದರು. ಇವರ ತಾಯಿ ಬಸಮ್ಮ, ತಂದೆ ಮಾರ್ತಾಂಡಪ್ಪ. ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಹಂಸಭಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹೈಸ್ಕೂಲಿನಲ್ಲಿಹರ್ಡೇಕರ ಮಂಜಪ್ಪ‍ನವರಿಂದ ರಾಷ್ಟ್ರೀಯ ಭಾವನೆಯ ಉದಯವಾಯಿತು.

ಮಹದೇವಪ್ಪನವರ ದೇಶಪ್ರೇಮವನ್ನು ಗುರುತಿಸಿದ ಗಾಂಧೀಜಿ ಸಾಬರಮತಿ ಆಶ್ರಮಕ್ಕೆ ಕರೆಸಿಕೊಂಡಿದ್ದರು. ನಂತರ 1930ರಲ್ಲಿ ನಡೆದಐತಿಹಾಸಿಕ ‘ದಂಡಿ ಯಾತ್ರೆ’ಯ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು ಮತ್ತು ಮಹಾತ್ಮರ ಅಂತರಂಗದ ಅನುಯಾಯಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

**

ಮೈಲಾರ ಮಹದೇವಪ್ಪನವರ ರಾಷ್ಟ್ರಾಭಿಮಾನ, ಸ್ವಾತಂತ್ರ್ಯ ಹೋರಾಟ, ತ್ಯಾಗದ ಕಥೆಗಳು ಇಂದಿನ ಯುವಜನಾಂಗಕ್ಕೆ ಆದರ್ಶವಾಗಬೇಕು
– ಸತೀಶ ಕುಲಕರ್ಣಿ, ಸಾಹಿತಿ

**

ಬೆಂಗಳೂರಿನ ಬಸವನಗುಡಿಯಲ್ಲಿರುವ ವಿವೇಕಾನಂದ ಸರ್ಕಲ್‌ ಮಾದರಿಯಲ್ಲೇ ಮೈಲಾರ ಮಹದೇವಪ್ಪ ವೃತ್ತ ನಿರ್ಮಿಸುವ ಆಶಯ ನಮ್ಮದಾಗಿದೆ
– ಎಚ್‌.ಎಸ್‌. ಮಹಾದೇವ, ಮೈಲಾರ ಮಹದೇವಪ್ಪನವರ ಮೊಮ್ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT