ಹಾವೇರಿ: ದೇವಸ್ಥಾನವೇ ಅಂಗನವಾಡಿ, ಅಲ್ಲೂ ಹಾವು–ಚೇಳು!

ಗುರುವಾರ , ಜೂಲೈ 18, 2019
22 °C
ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಕಿಡಿ

ಹಾವೇರಿ: ದೇವಸ್ಥಾನವೇ ಅಂಗನವಾಡಿ, ಅಲ್ಲೂ ಹಾವು–ಚೇಳು!

Published:
Updated:
Prajavani

ರಾಣೆಬೆನ್ನೂರು: ತಾಲ್ಲೂಕಿನ ಹೀಲದಹಳ್ಳಿ ಅಂಗನವಾಡಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವ ಕಾರಣ, ಮಕ್ಕಳಿಗೆ ಶ್ರೀ ಮಾರುತಿ ದೇವಸ್ಥಾನದಲ್ಲಿ ಕೂರಿಸಿ ಆಟ–ಪಾಠ ಹೇಳಿಕೊಡಲಾಗುತ್ತಿದೆ. ಮಳೆಗಾಲದಲ್ಲಿ ವಿಷಜಂತುಗಳು ದೇವಸ್ಥಾನದೊಳಗೆ ನುಗ್ಗುವುದರಿಂದ ಮಕ್ಕಳು ಅಪಾಯದ ನಡುವೆಯೇ ಬಾಲ್ಯ ಕಳೆಯುವಂತಾಗಿದೆ!

ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ವಿವಿಧ ಯೋಜನೆಗಳ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತಿರುವ ಸರ್ಕಾರ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹಾಗೂ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

‘ಈ ಅಂಗನವಾಡಿಯಲ್ಲಿ 40ಕ್ಕೂ ಹೆಚ್ಚು ಮಕ್ಕಳಿವೆ. ಗೋಡೆಗಳು ಶಿಥಿಲಗೊಂಡಿದ್ದು ಯಾವಾಗ ಕುಸಿದು ಬೀಳುತ್ತವೆಯೋ ಎಂಬ ಭಯದ ವಾತಾವರಣ ಆವರಿಸಿದೆ. ಚಾವಣಿಯ ಮಣ್ಣು ಉದುರಿ ಮೈಮೇಲೆ ಬೀಳುತ್ತಿರುತ್ತದೆ. ಮಳೆ ಬಂದರಂತೂ ನೀರು ಸೋರಿಕೆಯಾಗಿ ಇಡೀ ಕೊಠಡಿಯೇ ರಾಡಿಯಾಗಿಬಿಡುತ್ತದೆ. ಹೀಗಾಗಿ, ದಾಖಲಾತಿಗಳು ಹಾಳಾಗಬಾರದೆಂದು ದೇವಸ್ಥಾನದ ತಿಜೋರಿಯಲ್ಲಿ ಇಟ್ಟಿದ್ದೇವೆ. ನೆಲ ಹಾಸು ಕಿತ್ತು ಹೋಗಿದ್ದು, ಇರುವೆ–ಗೊದ್ದಗಳು ಮಕ್ಕಳ ಮೈಯನ್ನು ಮೆತ್ತಿಕೊಳ್ಳುತ್ತವೆ. ಮೂಲಸೌಕರ್ಯ ಮರೀಚಿಕೆಯಾಗಿದೆ’ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಸಾವಿತ್ರಾ ಸುಣಗಾರ.

‘ಹೀಲದಹಳ್ಳಿ ಮೊದಲೇ ಹಿಂದುಳಿದ ಗ್ರಾಮ. ಹೆಚ್ಚು ಮನೆಗಳೂ ಇಲ್ಲ. ಬಾಡಿಗೆ ಕೊಠಡಿ ಪಡೆಯೋಣವೆಂದರೆ ಸ್ವಂತ ಕಟ್ಟಡಗಳೂ ಇಲ್ಲ. ಸರ್ಕಾರಿ ಶಾಲೆಗಳಲ್ಲಿ ಕೊಠಡಿ ಕೇಳಿದರೆ, ‘ನಾವೇ ಕೊರತೆ ಎದುರಿಸುತ್ತಿದ್ದೇವೆ’ ಎನ್ನುತ್ತಾರೆ. ಕಟ್ಟಡ ಹಾಳಾಗಿರುವ ಸಂಗತಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಮಕ್ಕಳಿಕೆ ಕಲಿಕೆ ಹೇಳಿಕೊಡುವುದಕ್ಕಿಂತ, ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದೇ ದೊಡ್ಡ ಕೆಲಸವಾಗಿದೆ’ ಎನ್ನುತ್ತಾರೆ ಅವರು.

ದೇವಸ್ಥಾನದಲ್ಲೂ ಹಾವು: ‘ಎರಡು ತಿಂಗಳ ಹಿಂದೆ ಅಂಗನವಾಡಿಯ ಕಲ್ಲು ಜರಿದು ಮಗುವಿನ ಪಕ್ಕದಲ್ಲೇ ಬಿದ್ದಿತು. ಆ ನಂತರ ಮಕ್ಕಳನ್ನು ದೇವಸ್ಥಾನಕ್ಕೆ ಸ್ಥಳಾಂತರಿಸಿದೆವು. ಅಂದಿನಿಂದ ಅಲ್ಲೇ ಚಟುವಟಿಕೆಗಳು ಮುಂದುವರಿದಿವೆ. ದೇವಸ್ಥಾನದ ಸುತ್ತಲೂ ಪೊದೆಗಳಿದ್ದು, ಮಳೆ ಸುರಿಯುವಾಗ ಹಾವು, ಚೇಳು, ಕಪ್ಪೆ, ಹುಳಗಳು ಒಳಗೆ ನುಗ್ಗಿಬಿಡುತ್ತವೆ’ ಎಂದು ಶಿಕ್ಷಕಿ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಈ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಿರುವ ಕಾರಣ, ಗಂಟೆ ಸದ್ದು ನಿರಂತರವಾಗಿ ಕೇಳಿಸುತ್ತಿರುತ್ತದೆ. ಮಕ್ಕಳು ಇಷ್ಟೊಂದು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಯಾವೊಬ್ಬ ಜನಪ್ರತಿನಿಧಿಯೂ ಇತ್ತ ಸುಳಿಯುತ್ತಿಲ್ಲ. ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯುವ ಮುನ್ನ, ಅಂಗನವಾಡಿ ಕಟ್ಟಡ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !