ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಕಾಲದ ಸಂಸ್ಕೃತಿ ಮಾಯ: ಶಾಸಕ ಶ್ರೀನಿವಾಸ ಮಾನೆ ಕಳವಳ

Published 2 ನವೆಂಬರ್ 2023, 14:30 IST
Last Updated 2 ನವೆಂಬರ್ 2023, 14:30 IST
ಅಕ್ಷರ ಗಾತ್ರ

ಅಕ್ಕಿಆಲೂರ: ‘ವೈಜ್ಞಾನಿಕತೆ ಮತ್ತು ಆಧುನಿಕತೆ ನಮ್ಮ ಶ್ರೀಮಂತ ಪರಂಪರೆ ಕೈ ಬಿಡುವಂತೆ ಎಂದಿಗೂ ಹೇಳುವುದಿಲ್ಲ. ಆದರೆ ಆಚರಣೆಗೆ ತರುತ್ತಿರುವ ನಾವು ಭಿನ್ನವೆಂದು ತೋರಿಸಿಕೊಳ್ಳುವ ಹುಚ್ಚಿನಲ್ಲಿ ವಿಕೃತಿಯನ್ನೇ ಆಧುನಿಕತೆಯ ಚಿಹ್ನೆ ಎಂಬ ರೀತಿಯಲ್ಲಿ ಬಳಸುತ್ತಿರುವುದರಿಂದ ಗತಕಾಲದ ಕಲಾತ್ಮಕ ಸಂಸ್ಕೃತಿ ಮಾಯವಾಗುತ್ತಿದೆ‘ ಎಂದು ಶಾಸಕ ಶ್ರೀನಿವಾಸ ಮಾನೆ ಕಳವಳ ವ್ಯಕ್ತಪಡಿಸಿದರು.

ಹಾನಗಲ್ ತಾಲ್ಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ನುಡಿಹಬ್ಬ ಸಮಾರಂಭದಲ್ಲಿ ಮಾತನಾಡಿದರು.

‘ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎನ್ನುವ ಮಾತು ನಾವೆಲ್ಲರೂ ಬಲ್ಲವರು. ಆ ದಿಶೆಯಲ್ಲಿ ಕನ್ನಡ ನಾಡು, ನುಡಿ ಅಭಿಮಾನ ಹೊಂದಿ ಮುನ್ನೆಡೆಯ ಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂಥ ಕಾರ್ಯಕ್ರಮಗಳಲ್ಲಿ ಒಂದೆಡೆ ಕಲೆತು ಆ ಶ್ರೀಮಂತ ಸಂಸ್ಕೃತಿ ಮೆಲುಕು ಹಾಕಿ ಅದರ ಭದ್ರ ಬುನಾದಿಯ ಮೇಲೆ ವೈಜ್ಞಾನಿಕತೆ ಮತ್ತು ಆಧುನಿಕತೆ ಸೇರಿಸಿಕೊಂಡು ಸುಂದರ ಬದುಕಿನ ಸೌಧ ಕಟ್ಟಿಕೊಳ್ಳಬೇಕಿದೆ’ ಎಂದರು.

‘ಬದುಕಿನ ಅಗತ್ಯತೆ ಪೊರೈಸಿಕೊಳ್ಳುವ ಭಾಷೆ ಮಾತೃಭಾಷೆಯಾಗಿದ್ದು ಯುವ ಸಮೂಹ ಆ ಭಾಷೆ ಚೆನ್ನಾಗಿ ಅರಿತು ಉಳಿದ ಭಾಷೆಗಳನ್ನೂ ಸಹ ಸಂದರ್ಭಾನುಸಾರ ಕಲಿತು ಸಾಮರಸ್ಯದಿಂದ ಬದುಕುವುದನ್ನು ಕಲಿತುಕೊಂಡಾಗಲೇ ಜೀವನ ಅರಳಿದ ಹೂವಾಗಿ ಘಮಘಮಿಸುತ್ತದೆ’ ಎಂದು ಹೇಳಿದರು.

ಉದ್ಘಾಟನೆ ನೆರವೇರಿಸಿದ ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಮಕ್ಕಳು ಕನ್ನಡ ನಾಡಿನ ವೀರಪರಂಪರೆಯಿಂದ ಸ್ಪೂರ್ತಿ ಪಡೆಯುವ ವಾತಾವರಣ ಹಿರಿಯರು ಕಲ್ಪಿಸಿಕೊಡಬೇಕಿದೆ. ಇತಿಹಾಸದ ಅರಿವು ಇದ್ದಾಗ ಮಾತ್ರ ಭವಿಷ್ಯದ ಯೋಜನೆ ರೂಪಿಸಿಕೊಳ್ಳಲು ಸಾಧ್ಯ. ಜ್ಞಾನ, ತಂತ್ರಜ್ಞಾನದ ಈ ದಿನಗಳಲ್ಲಿ ನಾಡು, ನುಡಿ ಬೆಳೆಸುವುದು ಸವಾಲಿನ ಕೆಲಸವಾಗಿದ್ದು ಅಭಿಮಾನ, ಪ್ರಯೋಗಶೀಲತೆ ಮತ್ತು ಸಂಶೋಧನಾ ಪ್ರವೃತ್ತಿ ಇದ್ದಾಗ ಮಾತ್ರ ನಾಡು, ನುಡಿಯ ರಕ್ಷಣೆ ಸಾಧ್ಯವಾಗುತ್ತದೆ ಎಂದರು.

ಉಪನ್ಯಾಸಕ ವಿಶ್ವನಾಥ ಬೋಂದಾಡೆ ಮಾತನಾಡಿ, ‘ಕೀಳಿರಿಮೆ ಪ್ರಗತಿಗೆ ಮಾರಕ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ಭಾಷೆ ಕಟ್ಟುವ, ಬೆಳೆಸುವ ಕಾರ್ಯ ಒಂದೆರಡು ದಿನಗಳಲ್ಲಿ ಆಗುವುದಲ್ಲ. ಅದಕ್ಕೆ ನಿರಂತರತೆ ಬೇಕಾಗಿದ್ದು ದೃಢವಾದ ಇಚ್ಛಾಶಕ್ತಿ ಮತ್ತು ಕಾರ್ಯಶೀಲತೆ ಅಗತ್ಯ. ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದ್ದು ಇದರ ಶ್ರೇಷ್ಠತೆಯ ಅರಿವು ಇದ್ದವರಿಗೆ ಸಹಜವಾಗಿಯೇ ಅಭಿಮಾನ ಮೂಡುತ್ತದೆ’ ಎಂದು ಹೇಳಿದರು.

ಎಸ್‍ಡಿಎಂಸಿ ಅಧ್ಯಕ್ಷ ರವಿಚಂದ್ರ ವಿ.ಕೆ., ಮುಜಾಫರ್ ಹಾವೇರಿ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಕುರುಬರ, ಪಿಡಿಒ ಗುಡ್ಡಪ್ಪ ಎಸ್., ಮುಖ್ಯೋಪಾಧ್ಯಾಯರಾದ ಎಫ್.ಎಚ್.ಬಾಲಹನುಮಣ್ಣನವರ, ಖಾಜಿ, ಹುಲ್ಲಮ್ಮ ಕಲವೀರಣ್ಣನವರ, ಬಾಬುಸಾಬ ಹರವಿ, ಸಿಆರ್‌ಪಿ ನಾಗಪ್ಪ ಚೂರಿ ಸೇರಿದಂತೆ ಇನ್ನೂ ಹಲವರು ಇದ್ದರು.

ಸಮನ್ವಯತೆಯನ್ನು ರಕ್ತಗತವಾಗಿ ಪಡೆದ ಕನ್ನಡಿಗರು ಭಾಷೆಯ ರಕ್ಷಣೆಯ ಕಾರ್ಯದಲ್ಲಿಯೂ ತಮ್ಮ ಸ್ವಾಭಿಮಾನ ಪ್ರದರ್ಶಿಸಬೇಕಿದೆ
ಶಿವಬಸವ ಸ್ವಾಮೀಜಿ ಅಕ್ಕಿಆಲೂರಿನ ವಿರಕ್ತಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT